ಇತ್ತೀಚಿನ ದಿನಗಳಲ್ಲಿ ವಾರಕ್ಕೆ ಆರೆಂಟು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಈ ವಾರ ಯಾವುದೇ ಕನ್ನಡ ಚಿತ್ರವೂ ಬಿಡುಗಡೆಯಾಗುತ್ತಿಲ್ಲ. ಅದಕ್ಕೆ ಕಾರಣ, ಚಿತ್ರಪ್ರದರ್ಶನದಲ್ಲಿ ಉಂಟಾಗಿರುವ ಸಮಸ್ಯೆ. ಯುಎಫ್ಓ ಮತ್ತು ಕ್ಯೂಬ್ ವೆಚ್ಚ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ರಿಯಾಯಿತಿಗಾಗಿ ನಡೆಸಿದ ಸಭೆಗಳು ವಿಫಲವಾಗಿದ್ದು ಮಾರ್ಚ್ 9ರಿಂದ ಯುಎಫ್ಓ ಹಾಗೂ ಕ್ಯೂಬ್ ಯಾವುದೇ ಹೊಸ ಚಿತ್ರಗಳನ್ನು ಕೊಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಈ ವಿಷಯವನ್ನು ಸ್ಪಷ್ಟಪಡಿಸಿರುವ ಅವರು, “ಈಗಾಗಲೇ ಆಂಧ್ರ, ತೆಲಂಗಾಣ, ಪುದುಚೆರಿ, ತಮಿಳುನಾಡು, ಕೇರಳ ರಾಜ್ಯಗಳು ಕಳೆದ ಮಾರ್ಚ್ 2 ರಿಂದಲೇ ಹೊಸ ಚಿತ್ರಗಳನ್ನು ಕೊಡದೆ ಧರಣಿ ನಡೆಸುತ್ತಿವೆ. ಕನ್ನಡ ಚಿತ್ರರಂಗ ಕೂಡ ಮಾರ್ಚ್ 2ರಿಂದಲೇ ಹೊಸ ಚಿತ್ರಗಳನ್ನು ಕೊಡದಿರಲು ತೀರ್ಮಾನಿಸಲಾಗಿತ್ತು. ಆದರೆ, ಕೆಲ ಚಿತ್ರಗಳು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ, ಅವುಗಳಿಗೆ ಬಿಡುಗಡೆಯ ಅವಕಾಶ ಮಾಡಿಕೊಟ್ಟು, ಮಾರ್ಚ್ 9 ರಿಂದ ಯಾವುದೇ ಹೊಸ ಚಿತ್ರಗಳನ್ನು ಕೊಡಬಾರದು ಎಂದು ನಿರ್ಧರಿಸಲಾಗಿದೆ’ ಎಂದು ಸಾ.ರಾ.ಗೋವಿಂದು ಹೇಳಿದರು.
“ಮಾರ್ಚ್ 9ರಂದು ಎಂಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದವು. ಆ ಚಿತ್ರಗಳ ನಿರ್ಮಾಪಕರ ಜತೆಗೆ ಮಾತುಕತೆ ನಡೆಸಿ, ಅವರಿಂದ ಒಪ್ಪಿಗೆ ಪಡೆದು, ಪತ್ರಕ್ಕೆ ಸಹಿ ಹಾಕುವ ಮೂಲಕ ಮಾರ್ಚ್ 9 ರಂದು ಯಾವುದೇ ಚಿತ್ರ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ. ಮಾರ್ಚ್ 9ರಂದು “ಯೋಗಿ ದುನಿಯಾ’, “ದಂಡುಪಾಳ್ಯ 3′,” ಓ ಪ್ರೇಮವೇ’, “ನನಗಿಷ್ಟ’, “ಮುಖ್ಯಮಂತ್ರಿ ಕಳೆದೋದ್ನಪ್ಪೋ’, “ಹೀಗೊಂದು ದಿನ’, “ಇದಂ ಪ್ರೇಮಂ ಜೀವನಂ’ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ, ಯುಎಫ್ಓ, ಕ್ಯೂಬ್‌ನ ಈಗಿನ ದರದಲ್ಲಿ ಶೇ.25ರಷ್ಟು ಕಡಿಮೆ ಮಾಡಬೇಕೆಂಬ ಮಂಡಳಿಯ ಒತ್ತಾಯಕ್ಕೆ ಸಹಕರಿಸಿ, ನಿರ್ಮಾಪಕರು ಚಿತ್ರ ಬಿಡುಗಡೆಯನ್ನು ಮುಂದೂಡಲು ಒಪ್ಪಿದ್ದಾರೆ.
ಮಂಡಳಿ ಏನೇ ತೀರ್ಮಾನ ತೆಗೆದುಕೊಂಡರೂ ಅದು ನಿರ್ಮಾಪಕರ ಒಳಿತಿಗಾಗಿ. ಈ ವಾರ ತೆರೆಕಾಣಬೇಕಿದ್ದ ಚಿತ್ರಗಳು ಈ ಸಮಸ್ಯೆ ಬಗೆಹರಿದರೆ, ಮುಂದಿನ ವಾರ ಬಿಡುಗಡೆಯಾಗಲಿವೆ. ಮುಂದಿನ ವಾರ ಅಂದರೆ, ಮಾರ್ಚ್ 16ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರಗಳು ಮಾರ್ಚ್ 23 ಕ್ಕೆಹೋಗಲಿವೆ. ಹಾಗೆಯೇ ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರಗಳು ಒಂದೊಂದು ವಾರ ಮುಂದಕ್ಕೆ ಹೋಗಬೇಕು.
ಈಗ ಬಿಡುಗಡೆಯಾಗದ ಚಿತ್ರಗಳಿಗೆ ಮುಂದಿನವಾರ ಮೊದಲ ಆದ್ಯತೆ ಕಲ್ಪಿಸುವುದಾಗಿ ಹೇಳಿದರಲ್ಲದೆ, ಮಂಡಳಿ ಮಾತಿಗೆ ಒಪ್ಪಿದ ಎಲ್ಲಾ ನಿರ್ಮಾಪಕರಿಗೂ ಅಭಿನಂದಿಸುವುದಾಗಿ’ ಹೇಳಿದರು ಸಾ.ರಾ.ಗೋವಿಂದು. “ಈಗಾಗಲೇ ಪರ್ಯಾಯ ವ್ಯವಸ್ಥೆಗೆ ಮಾತುಕತೆಯೂ ನಡೆಸಲಾಗಿದ್ದು, ಒಬ್ಬರು ಮಂಡಳಿಗೆ ಪತ್ರ ಬರೆದಿದ್ದಾರೆ. ಎಲ್ಲಾ ಸೌಲಭ್ಯದೊಂದಿಗೆ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚಿಸಿದ್ದಾರೆ. ಪ್ರೊಜೆಕ್ಟರ್ ಮತ್ತು ಸರ್ವರ್‌ಗಳಿಗೆ ತುಂಬಾ ವೆಚ್ಚ ತಗುಲಿರುವುದರಿಂದ, ಅದನ್ನು ಯಾರು ವ್ಯವಸ್ಥೆ ಮಾಡಬೇಕು ಎಂಬ ಕುರಿತು ಮಾತುಕತೆ ನಡೆಯುತ್ತಿದೆ.
ಒಂದು ವೇಳೆ, ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ ಎನ್ನುವ ನಿರ್ಮಾಪಕರಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಮಲ್ಟಿಪ್ಲೆಕ್ಸ್‌ನವರು ಅವರೇ ಸ್ವತಹ ಸರ್ವರ್ ಹಾಕಿಕೊಂಡಿದ್ದು, ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟು 60 ಮಲ್ಟಿಪ್ಲೆಕ್ಸ್‌ಗಳಿದ್ದು, ಅಲ್ಲಿ ಬಿಡುಗಡೆ ಮಾಡುವ ಚಿತ್ರಗಳಿಗೆ ಯಾವುದೇ ಸಮಸ್ಯೆ ಇಲ್ಲ’ ಎಂದರು ಸಾ.ರಾ.ಗೋವಿಂದು. ಈ ವೇಳೆ ಎಂ.ಜಿ. ರಾಮಮೂರ್ತಿ, ಎನ್.ಎಂ. ಸುರೇಶ್, ಪ್ರವೀಣ್‌ಕುಮಾರ್, ನಿರ್ಮಾಪಕರಾದ ಮನೋಜ್, ತನುಷ್, ಶಿವಕುಮಾರ್ ಇತರರು ಇದ್ದರು.
ಬೇಡಿಕೆ ಈಡೇರುವವರೆಗೂ ಚಿತ್ರ ಬಿಡುಗಡೆ ಮಾಡುವುದಿಲ್ಲ: ನಿರ್ಮಾಪಕ ಸಿದ್ಧರಾಜು ಮಾತನಾಡಿ, “ಮಾರ್ಚ್ 2ರಿಂದ ಐದು ರಾಜ್ಯಗಳು ಯಾವುದೇ ಚಿತ್ರಗಳನ್ನು ಬಿಡುಗಡೆ ಮಾಡಿಲ್ಲ. ನಮ್ಮಲ್ಲೂ ಕೂಡ ಮಾ.9 ರಿಂದ ಯಾವ ಚಿತ್ರಗಳನ್ನೂ ಬಿಡುಗಡೆ ಮಾಡಬಾರದು ಎಂಬ ಮಂಡಳಿಯ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಈಗಾಗಲೇ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದೆವು. ಅದಕ್ಕಾಗಿ ಲಕ್ಷಾಂತರ ರುಪಾಯಿಗಳನ್ನೂ ವೆಚ್ಚ ಮಾಡಿದ್ದೆವು. ಭವಿಷ್ಯದಲ್ಲಿ ಎಲ್ಲಾ ನಿರ್ಮಾಪಕರಿಗೂ ಒಳಿತಾಗಲಿದೆ ಎಂಬ ಕಾರಣಕ್ಕೆ ನಾವು ಮಂಡಳಿಯ ಮಾತಿಗೆ ಒಪ್ಪಿ, ಸಹಿ ಮಾಡಿದ್ದೇವೆ. ಯುಎಫ್ಓ, ಕ್ಯೂಬ್ ಸಂಬಂಧಿಸಿದವರು ಒಬ್ಬೊಬ್ಬರಿಗೆ ಒಂದೊಂದು ದರ ನಿಗದಿಪಡಿಸಿದ್ದಾರೆ. ನಮ್ಮ ಚಿತ್ರಗಳಿಗೆ ಶೇ.25 ರಷ್ಟು ಕಡಿಮೆ ಮಾಡುವವರೆಗೂ ನಾವು ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದರು ಸಿದ್ಧರಾಜು.