ನವದೆಹಲಿ: ಕೋವಿಡ್ ಲಸಿಕೆಯ ಬೆಲೆಗಳಲ್ಲಿನ ವ್ಯತ್ಯಾಸ, ಲಸಿಕೆ ಕೊರತೆ ಹಾಗೂ ನಿಧಾನಗತಿಯ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಟೀಕಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ(ಮೇ 09) ತಡರಾತ್ರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿತ್ ನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಪಾಸಿಟಿವ್ ಹಿನ್ನೆಲೆ ತಲೆಗೆ ಶೂಟ್ ಮಾಡಿಕೊಂಡು ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ!
ಕೋವಿಡ್ ಲಸಿಕೆ ನೀತಿಯ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಬೇಡ ಎಂದು ಅಫಿಡವಿತ್ ನಲ್ಲಿ ಉಲ್ಲೇಖಿಸಿದ್ದು, ಕೇಂದ್ರದ ವಿಚಾರದಲ್ಲಿ ನ್ಯಾಯಾಂಗದ ಸಲಹೆ ಉತ್ತಮವಾಗಿದ್ದರೂ ಕೂಡಾ ಹಸ್ತಕ್ಷೇಪದಿಂದ ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಜಾಗತಿಕವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳ ಸಲಹೆ ಮೇರೆಗೆ ದೇಶದಲ್ಲಿ ಲಸಿಕೆ ವಿತರಣೆ ಮತ್ತು ಬೆಲೆಯನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಹೆಚ್ಚಿನ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ದೇಶಾದ್ಯಂತ ಲಸಿಕೆಗಳ ಬೆಲೆ ಕಡಿಮೆ ಮಾತ್ರವಲ್ಲ, ಏಕರೂಪದಲ್ಲಿದೆ ಎಂದು (ಎರಡು ಕಂಪನಿಗಳ ಮನವೊಲಿಕೆ ನಂತರ ಬೆಲೆ ಇಳಿಕೆ) ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿತ್ ನಲ್ಲಿ ತಿಳಿಸಿದೆ.