Advertisement

ಉದ್ಯೋಗ ಕೂಲಿಯೂ ಇಲ್ಲ, ನಿರುದ್ಯೋಗ ಭತ್ತೆಯೂ ಇಲ್ಲ!

10:39 AM Jan 09, 2020 | Team Udayavani |

ರಾಜ್ಯಕ್ಕೆ 2,784 ಕೋ.ರೂ. ಬಾಕಿ; ದ.ಕ. 7.48 ಕೋ.ರೂ. ಬಾಕಿ; ಉಡುಪಿ 1.89 ಕೋ.ರೂ. ಬಾಕಿ

Advertisement

ಕುಂದಾಪುರ: ಕಾನೂನು ಮಾಡಿದವರೇ ಅನುಷ್ಠಾನ ಮಾಡದ ಪರಿಸ್ಥಿತಿ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿಸಿರುವ ಸರಕಾರ 3 ತಿಂಗಳಿನಿಂದ ಕೂಲಿಯನ್ನೇ ನೀಡಿಲ್ಲ. ನೋಂದಾಯಿಸಿ 15 ದಿನಗಳಲ್ಲಿ ಕೆಲಸ ಕೊಡದಿ ದ್ದರೆ ನಿರುದ್ಯೋಗ ಭತ್ತೆ ನೀಡಬೇಕು, ದುಡಿದ ಕೂಲಿ ಕೊಡದೇ ಇದ್ದರೆ ಶೇ. 0.05ರಂತೆ ಪರಿಹಾರ ಭತ್ತೆ ಒದಗಿಸ ಬೇಕೆಂದೂ ಕಾನೂನಿದೆ.

ಮಹಾತ್ಮಾ ಗಾಂಧಿ ರಾ. ಉದ್ಯೋಗ ಖಾತರಿ ಯೋಜನೆಯನ್ನು 2005ರಲ್ಲಿ ಕಾಯ್ದೆಯಾಗಿ ರೂಪುಗೊಳಿಸಲಾಗಿದೆ. ಇದರನ್ವಯ ಕೌಶಲ ಇಲ್ಲದ ಯಾವುದೇ ನಿರುದ್ಯೋಗಿ ಅರ್ಜಿ ಸಲ್ಲಿಸಿದಾಗ ಆಯಾ ಗ್ರಾ.ಪಂ. ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ನೀಡಬೇಕು. ವಾರ್ಷಿಕ 100 ದಿನಗಳ ಕೆಲಸ ಪಡೆಯಲು ಅರ್ಜಿದಾರ ಅರ್ಹನಾಗಿರುತ್ತಾನೆ. ಕೂಲಿಯನ್ನು ಅರ್ಜಿದಾರನ ಖಾತೆಗೇ ಜಮೆ ಮಾಡಲಾಗುತ್ತದೆ. ಕೂಲಿಯಲ್ಲಿ ಶೇ. 75ನ್ನು ಕೇಂದ್ರ, ಶೇ. 25ನ್ನು ರಾಜ್ಯ ಸರಕಾರ ನೀಡಬೇಕು. ರಾಜ್ಯದಲ್ಲಿ ಈ ವರ್ಷ ಮಳೆಹಾನಿ ಕಾರಣ ಕೆಲಸ ದಿನಗಳನ್ನು 150ಕ್ಕೇರಿಸಲಾಗಿದೆ.

ಬಾಕಿ ಮೊತ್ತ
ರಾಜ್ಯದಲ್ಲಿ 12 ಕೋಟಿ ಮಾನವ ದಿನಗಳ ಕೆಲಸಕ್ಕೆ ಗುರಿ ನಿಗದಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 8.77 ಕೋಟಿ ಮಾನವ ದಿನಗಳ ಕೆಲಸ ಆಗಿದ್ದು 32 ಲಕ್ಷ ಅಭಿವೃದ್ಧಿ ಕಾಮಗಾರಿಗಳಾಗಿವೆ. ಚಿಕ್ಕಮಗಳೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಬಳ್ಳಾರಿ, ಗದಗ, ರಾಯಚೂರಿನಲ್ಲಿ ಮಾತ್ರ ಶೇ. 80 ಗುರಿ ಸಾಧಿಸಿದ್ದು ಇತರ 24 ಜಿಲ್ಲೆಗಳಲ್ಲೂ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ರಾಜ್ಯ ಸರಕಾರ 249 ಕೋ.ರೂ.ಗಳನ್ನು ಪಾವತಿಸಿದ್ದು ಕೇಂದ್ರದಿಂದ 2,784.73 ಕೋ.ರೂ. ಪಾವತಿಗೆ ಬಾಕಿ ಇದೆ. ದ.ಕ. ಜಿಲ್ಲೆಯಲ್ಲಿ 7,48,81,322 ರೂ., ಉಡುಪಿ ಜಿಲ್ಲೆಯಲ್ಲಿ 1,89,20,969 ರೂ. ಬಾಕಿ ಇದೆ. 2018-19ರಲ್ಲಿ ರಾಜ್ಯದಲ್ಲಿ 10.45 ಕೋಟಿ ಮಾನವದಿನಗಳ ಕೆಲಸವಾಗಿತ್ತು.

ಪರಿಹಾರ
ಕೂಲಿ ಹಾಗೂ ಸಾಮಗ್ರಿ ಮೊತ್ತ ಪಾವತಿಗೆ ಬಾಕಿ ಇದ್ದು 15 ದಿನಗಳಲ್ಲಿ ಕೂಲಿ ಪಾವತಿಸದೇ ಇದ್ದರೆ ಶೇ. 0.05ರಷ್ಟು ಪರಿಹಾರ ನೀಡಬೇಕೆಂದು ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರ 803 ಕೋ.ರೂ.ಗಳನ್ನು ತನ್ನ ಸ್ವಂತ ಖಾತೆಯಿಂದ ಬಿಡುಗಡೆ ಮಾಡಿ ಕೇಂದ್ರದಿಂದ ಅನುದಾನ ಬಂದ ಬಳಿಕ ಹೊಂದಾಣಿಕೆ ಮಾಡುವ ಇರಾದೆ ಹೊಂದಿತ್ತು. ಆದರೆ ಕೇಂದ್ರದ ಅನುದಾನ ವಿಳಂಬವಾಗುತ್ತಿದೆ.

Advertisement

ಯಾಕೆ ವಿಳಂಬ?
ಪ್ರಕಾರ ಉದ್ಯೋಗ ಖಾತ್ರಿಯಲ್ಲಿ ಗೋಲ್‌ಮಾಲ್‌ ನಡೆಯುತ್ತಿದೆ ಎಂಬ ಅನುಮಾನವೇ ಅನುದಾನ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಕೇಂದ್ರ ಇಲ್ಲಿನ ಅಂಕಿ-ಅಂಶಗಳಿಂದ ತೃಪ್ತವಾಗಿಲ್ಲ. ಅನುಮಾನ ಪರಿಹಾರವಾಗದೇ ಅನುದಾನ ನೀಡುವ ಪ್ರಮೇಯ ಕಡಿಮೆ ಎನ್ನಲಾಗುತ್ತಿದೆ. ರಾಜ್ಯವು ಅದೇನೇ ಅನುಮಾನಗಳಿದ್ದರೂ 15 ದಿನಗಳಲ್ಲಿ ಉತ್ತರಿಸು ತ್ತೇವೆ; ಮೊದಲು ಅನುದಾನ ಕೊಡಿ ಎಂಬ ಬೇಡಿಕೆ ಇಟ್ಟಿದೆ.

ಎಲ್ಲ ಜಿಲ್ಲೆಗಳಲ್ಲೂ ಸಮಸ್ಯೆ ಇದೆ. ಸರಕಾರದಿಂದಲೇ ಹಣ ಬಿಡುಗಡೆ ವಿಳಂಬವಾದ ಕಾರಣ ವೇತನ ವಿಳಂಬಕ್ಕೆ ಪರಿಹಾರ ಒದಗಿಸುವ ಕುರಿತು ನಾವು ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಹಣ ಬಂದ ತತ್‌ಕ್ಷಣ ವಿತರಿಸಲಾಗುವುದು.
– ಪ್ರೀತಿ ಗೆಹಲೋಟ್  ಉಡುಪಿ ಜಿ.ಪಂ. ಸಿಇಒ

ವೇತನ ವಿಳಂಬ ಅಧಿಕಾರಿಗಳಿಂದ ನಡೆದರೆ ನಮ್ಮ ಹಂತದಲ್ಲಿ ನಿರ್ಧಾರ ಕೈಗೊಳ್ಳಬಹುದು. ಸರಕಾರದಿಂದ ವಿಳಂಬವಾದರೆ ಸರಕಾರವೇ ನಿರ್ಣಯಿಸಬೇಕು. ಕೇಂದ್ರ ಸಚಿವರ ಜತೆ ಮಾತನಾಡಿ ಅನುದಾನ ತರಿಸುವುದಾಗಿ ರಾಜ್ಯದ ಸಚಿವರು ಭರವಸೆ ನೀಡಿದ್ದಾರೆ.
-ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next