Advertisement

ಜಯಂತಿ ಆಚರಣೆಯೇ ಬೇಡ

11:55 AM Nov 06, 2017 | Team Udayavani |

ಬೆಂಗಳೂರು: ಯಾವ ಮಹಾತ್ಮರ ಜಯಂತಿಯನ್ನೂ ಸರ್ಕಾರ ಅಧಿಕೃತವಾಗಿ ನಡೆಸಬಾರದು. ಆಯಾ ಜಾತಿಯವರೇ ಬೇಕಾದ ಜಯಂತಿಗಳನ್ನು ಮಾಡಿಕೊಳ್ಳಲಿ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ನಿರ್ಣಯವೊಂದನ್ನು ಕೈಗೊಂಡಿದ್ದು, ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿದೆ. 

Advertisement

ವಿಜಯನಗರದ ಪಂಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ “ಟಿಪ್ಪು ಸುಲ್ತಾನ್‌-ವಾಸ್ತವ ಇತಿಹಾಸ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌, “ನಮಗೆ ಎಲ್ಲ ಮಹಾತ್ಮರ ಬಗ್ಗೆಯೂ ಗೌರವವಿದೆ. ಪ್ರಸ್ತುತ ಮಹಾತ್ಮರ ಜಯಂತಿ ಹೆಸರಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನೆಪದಲ್ಲಿ ಇಡೀ ಚರಿತ್ರೆಯನ್ನೇ ವಿಕೃತಗೊಳಿಸಲಾಗುತ್ತಿದೆ.

ಉತ್ತಮ ಸಮಾಜದ ದೃಷ್ಟಿಯಿಂದ ಆಯಾ ಜಾತಿಯವರೇ ತಮಗಿಷ್ಟವಾದವರ ಜಯಂತಿ ಆಚರಿಸಿಕೊಳ್ಳಲಿ. ಸರ್ಕಾರ ಯಾರ ಜಯಂತಿಯನ್ನು ಅಧಿಕೃತವೆಂದು ಆಚರಿಸಿ, ಗೊಂದಲ ಸೃಷ್ಟಿಸಬಾರದು’ ಎಂದಾಗ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಇತಿಹಾಸ ತಜ್ಞ ಡಾ.ಎಸ್‌.ಚಂದ್ರಶೇಖರ್‌ ಮಾತನಾಡಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಟಿಪ್ಪುವಿನ ಚರಿತ್ರೆಯನ್ನು ವಿಕೃತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. 18ನೇ ಶತಮಾನದ ಕಾಲಘಟ್ಟದಲ್ಲಿ ಧರ್ಮ ಯುದ್ಧಗಳೇ ಇರಲಿಲ್ಲ. ಅನೈತಿಕ, ಅಧರ್ಮ ಯುದ್ಧಗಳಿದ್ದವು.

ಆದರೆ ಟಿಪ್ಪುವನ್ನು ಮತಾಂಧ ಎಂದು ಬಿಂಬಿಸುತ್ತಿರುವುದು ಚರಿತ್ರೆ ತಿರುಚುವ ಕೆಲಸ. ಒಂದೇ ಬಗೆಯ ತೀರ್ಮಾನಗಳನ್ನಿಟ್ಟುಕೊಂಡು ಅನೇಕ ವ್ಯಾಖ್ಯಾನಗಳನ್ನು ನೀಡುತ್ತಿರುವುದು ಶೋಚನೀಯ ಎಂದರು. ಯಾರು ಧರ್ಮಿಷ್ಠರಾಗಿರುತ್ತಾರೋ ಅವರು ಮತಾಂಧರಾಗಲು ಸಾಧ್ಯವಿಲ್ಲ.

Advertisement

ಟಿಪ್ಪು ಓರ್ವ ಧರ್ಮಿಷ್ಠನಾಗಿದ್ದು, ಚಾಚೂ ತಪ್ಪದೆ ಇಸ್ಲಾಂ ಧರ್ಮದ ಧಾರ್ಮಿಕ ನಿಯಮ ಪಾಲಿಸುತ್ತಿದ್ದನು. ಈತನ ಅವಧಿಯಲ್ಲಿ ಮತಾಂತರ ಆಗಿದೆ. ಆದರೆ, ಅದು ತನ್ನ ವಿರೋಧಿಗಳ ಜತೆ ಕೈಜೋಡಿಸಿದವರಿಗೆ ಶಿಕ್ಷೆಯ ರೂಪದಲ್ಲಿ ನಡೆದಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ಜಾತ್ಯಾತೀತವಾದಿ ಅನ್ನುವುದಕ್ಕೆ ನನ್ನ ಯಾವುದೇ ತಕರಾರಿಲ್ಲ.

ಆತನು 19ನೇ ಶತಮಾನದಲ್ಲಿ ಸರ್ವಾಧಿಕಾರಿಯಾಗದೆ ಸಮಾಜವಾದಿ ಆಗಿದ್ದ ಎಂದು ಹೇಳಿದರು. ಟಿಪ್ಪು ಕ್ರೂರಿಯಾಗಿದ್ದ ಎಂದು ಹೇಳಲು ಸೂಕ್ತ ಸಾಕ್ಷ್ಯಗಳಿಲ್ಲ. ಬ್ರಿಟಿಷರು, ಮರಾಠರು, ಫ್ರೆಂಚರು ಸೇರಿದಂತೆ ಅನೇಕ ರಾಜರು ಸೋತ ರಾಜ್ಯವನ್ನು ಲೂಟಿ ಮಾಡುತ್ತಿದ್ದರು. ಇತಿಹಾಸಕ್ಕೆ ರಾಜಕೀಯ ಲೇಪನ ಸರಿಯಲ್ಲ. ಇಡೀ ಚರಿತ್ರೆಯನ್ನು ವಿಕೃತಗೊಳಿಸುತ್ತಿದ್ದು, ಪ್ರಜ್ಞಾವಂತರು ಎಚ್ಚರವಾಗಿರಬೇಕು ಎಂದರು. 

ಕಾರ್ಯಕ್ರಮದಲ್ಲಿ ಆರ್ಥಿಕ ತಜ್ಞ ಡಾ. ಟಿ.ಆರ್‌. ಚಂದ್ರಶೇಖರ್‌, ಡಾ. ಸಿ.ವೀರಣ್ಣ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌, ಹಿರಿಯ ಪತ್ರಕರ್ತೆ ಪೂರ್ಣಿಮಾ, ಡಾ. ಜಿ.ರಾಮಕೃಷ್ಣಯ್ಯ, ಉಷಾ ಕಟ್ಟಿಮನಿ, ಅಟೋಮಿಕ್‌ ಎನರ್ಜಿ ನಿರ್ದೇಶಕ ಪಂಡಿತ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next