ಹುಬ್ಬಳ್ಳಿ: ಬಿಜೆಪಿ ಸರ್ಕಾರ ರಚನೆ ಬಗ್ಗೆ ಯಾವುದೇ ಆತುರವಿಲ್ಲ. ಒಂದು ವೇಳೆ, ಮೈತ್ರಿ ಸರ್ಕಾರ ಪತನವಾದರೆ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ನಾವೇ ಬಹುಮತ ಸಾಬೀತುಪಡಿಸಿ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆ ಮದ್ದಲ್ಲ. 105 ಶಾಸಕರನ್ನು ಹೊಂದಿರುವ ಬಿಜೆಪಿ, ಸರ್ಕಾರ ರಚನೆ ಮಾಡಲಿದೆ. ಶಾಸಕರು ನೀಡಿರುವ ರಾಜೀನಾಮೆಯನ್ನು ಸಭಾಧ್ಯಕ್ಷರು ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸವಿದೆ. ಅತೃಪ್ತ ಶಾಸಕರು ಬಿಜೆಪಿಗೆ ಬರುವುದಾದರೆ ಅವರ ಹಿನ್ನೆಲೆ ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಿದ್ದು ಗೇಮ್ ಪ್ಲ್ಯಾನ್: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿರುವುದರ ಹಿಂದೆ ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಒಂದು ತಂಡ ಕೆಲಸ ಮಾಡುತ್ತಿದೆ. ಇನ್ನೊಂದು ತಂಡ ಸಿದ್ದರಾಮಯ್ಯ ಅವರ ವಿರುದ್ಧ ಬಂಡೆದ್ದಿದೆ. ಸಿದ್ದರಾಮಯ್ಯ ಆಡುತ್ತಿರುವ ಆಟ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿಲ್ಲ ಅಂತೇನಿಲ್ಲ. ಆದರೆ, ಯಾರೂ ಕೂಡ ನಾಯಕರ ಮಾತು ಕೇಳದ ಸ್ಥಿತಿ ಕಾಂಗ್ರೆಸ್‌ನಲ್ಲಿ ಉಂಟಾಗಿದೆ.
ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಯಾವುದೇ ತಂತ್ರಗಾರಿಕೆ ಅಥವಾ ಕೈವಾಡವಿಲ್ಲ ಎಂದರು. ರಾಜೀನಾಮೆ ಸಲ್ಲಿಸಿರುವ ಹಲವು ಶಾಸಕರು ವಿಮಾನ ಖರೀದಿಸುವಂತವರಿದ್ದಾರೆ. ಅಂತಹುದರಲ್ಲಿ ಮುಂಬೈಗೆ ತೆರಳಲು ಬಿಜೆಪಿ ವಿಮಾನ ವ್ಯವಸ್ಥೆ ಮಾಡಿದೆ ಎನ್ನುವುದರಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದರು.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಇಲ್ಲದಂತಾಗಿದೆ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಬಂಡಾಯ ದೊಡ್ಡ ಮಟ್ಟದಲ್ಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ ಅವರ ಮಾತನ್ನು ಯಾರೂ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ ವಿನಾಕಾರಣ ಬಿಜೆಪಿ ನಾಯಕರ ಮೇಲೆ ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದರು.
ಸಂಸದೀಯ ಮಂತ್ರಿಯಾಗಿ ನಾನು ಪತ್ರ ಬರೆಯಬೇಕಾಗುತ್ತದೆ. ಆದರೆ, ಕಾಂಗ್ರೆಸ್‌ನಲ್ಲಿ ಯಾರಿಗೆ ಪತ್ರ ಕಳುಹಿಸಬೇಕು ಎಂದು ಕೇಳಿದರೆ ಕೇಳಿ ಹೇಳುತ್ತೇವೆ ಎನ್ನುವ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಪಕ್ಷದಲ್ಲಿ ನಾಯಕರಿಲ್ಲದ ಪರಿಣಾಮ ಶಾಸಕರು ಬಂಡಾಯ ಎದ್ದಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ