ಭೋಪಾಲ್ : ನಿನ್ನೆ ಗುರುವಾರ ಅನಾವರಣಗೊಂಡು ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದ್ದ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ವಿವಾದ ಸೃಷ್ಟಿಸಿರುವ ನಡುವೆಯೇ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು “ಯಾವುದೇ ಸಿನೇಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡುವ ಉದ್ದೇಶವೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಯುಪಿಎ ಸರಕಾರದಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರಿಗೆ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ ಕೃತಿಯನ್ನು ಆಧರಿಸಿರುವ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವ ಹಿನ್ನೆಲೆಯಲ್ಲಿ , ಸಿಎಂ ಕಮಲ್ ನಾಥ್ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಮಲ್ ನಾಥ್, ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಮಾತ್ರವಲ್ಲ, ಯಾವುದೇ ಚಿತ್ರದ ಮೇಲೆ ನಿಷೇಧ ಅಥವಾ ನಿರ್ಬಂಧವನ್ನು ಹೇರುವ ಇರಾದೆ ನನಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ಹಿರಿಯ ಹಿಂದಿ ಚಿತ್ರನಟ ಅನುಪಮ್ ಖೇರ್ ಅವರು ಡಾ. ಸಿಂಗ್ ಅವರ ಯಥಾವತ್ ಪ್ರತಿಕೃತಿಯಾಗಿ ಅಭಿನಯಿಸಿರುವ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ನಿನ್ನೆ ಗುರುವಾರ ಅನಾವರಣಗೊಂಡಾಗ ಬಿಜೆಪಿ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.
Related Articles
“ಕುಟುಂಬವೊಂದು ದೇಶವನ್ನು ಹತ್ತು ವರ್ಷಗಳ ಕಾಲ ಹೇಗೆ ತನ್ನ ಕೈಯಲ್ಲಿ ಒತ್ತೆ ಇರಿಸಿಕೊಂಡಿತ್ತು ಎಂಬುದನ್ನು ಈ ಚಿತ್ರ ಸಾದರಪಡಿಸುತ್ತದೆ. ಕುಟುಂಬದ ಉತ್ತರಾಧಿಕಾರಿ ಸಿದ್ಧವಾಗುವ ತನಕ ಡಾ. ಸಿಂಗ್ ಅವರು ಪ್ರಧಾನಿ ಕುರ್ಚಿಯನ್ನು ಓರ್ವ ಪ್ರತಿನಿಧಿಯಾಗಿ ಹೇಗೆ ನಿಭಾಯಿಸಿದ್ದರು ಎಂಬುದನ್ನು ಚಿತ್ರವು ಕಾಣಿಸುತ್ತದೆ” ಎಂದು ಬಿಜೆಪಿ ತನ್ನ ಟ್ವೀಟ್ ನಲ್ಲಿ ಬರೆದಿತ್ತು.
ಇದಕ್ಕೆ ತ್ವರಿತ ಪ್ರತಿಕ್ರಿಯೆ ಎಂಬಂತೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್‌ಜೇವಾಲಾ ಅವರು “ಇದೊಂದು ನಕಲಿ ಅಪಪ್ರಚಾರ’ ಎಂದು ಜರೆದಿದ್ದರು.
”ಈ ಚಿತ್ರವನ್ನು ಬಿಡುಗಡೆಗೆ ಮುನ್ನ ನಮಗೆ ತೋರಿಸಬೇಕು; ಅದರಲ್ಲಿನ ಅಸತ್ಯದ ಮತ್ತು ಆಕ್ಷೇಪಾರ್ಹ ದೃಶ್ಯಗಳನ್ನು ಕಿತ್ತು ಹಾಕಬೇಕು; ಇಲ್ಲದಿದ್ದರೆ ನಾವು ದೇಶದಲ್ಲಿ ಎಲ್ಲಿಯೂ ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಯೂತ್ ಕಾಂಗ್ರೆಸ್, ಚಿತ್ರದ ಟೀಸರ್ ಬಿಡುಗಡೆಯಾದ ದಿನವೇ ಬೆದರಿಕೆ ಹಾಕಿತ್ತು.
ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಪಾತ್ರವನ್ನು ಜರ್ಮನ್ ನಟಿ ಸುಜಾನ್ ಬರ್ನರ್ಟ್ ನಿರ್ವಹಿಸಿದ್ದಾರೆ. “ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ’ ಖ್ಯಾತಿಯ ನಟಿ ಆಹನಾ ಕುಮಾರಾ ಅವರು ಪ್ರಿಯಾಂಕಾ ಗಾಂಧಿಯಾಗಿ ನಟಿಸಿದ್ದಾರೆ; ಅರ್ಜುನ್ ಮಾಥುರ್ ರಾಹುಲ್ ಗಾಂಧಿಯಾಗಿ ನಟಿಸಿದ್ದಾರೆ. ಚಿತ್ರವನ್ನು ವಿಜಯ್ ರತ್ನಾಕರ್ ಗುತ್ತೆ ನಿರ್ದೇಶಿಸಿದ್ದಾರೆ.