Advertisement

ಕರ,ಕರ ಕಿರಿ ಕಿರಿ

02:47 PM Jan 06, 2019 | |

ವಿಮಾ ಪಾಲಿಸಿಗಳಲ್ಲಿ ಎಲ್ಲದಕ್ಕೂ  ಸಂಪೂರ್ಣ ತೆರಿಗೆ ವಿನಾಯತಿ ಇಲ್ಲ. ಪ್ರೀಮಿಯಮ್‌ನ ಹತ್ತು ಪಟ್ಟು ವಿಮಾ ಮೊತ್ತ ಇರುವಂಥ ದೀರ್ಘ‌ಕಾಲಿಕ ಪಾಲಿಸಿಗಳಿಗೆ ಮಾತ್ರ ವಿನಾಯಿತಿ, ಕರ ಸೌಲಭ್ಯಗಳಿವೆ.  ವಿಮಾ ಸಂಸ್ಥೆಗಳಾಗಲಿ, ಜಾಹೀರಾತುಗಳಾಗಲಿ, ಅವುಗಳ ಏಜೆಂಟರಾಗಲಿ ಇವುಗಳಿಗೆ ತೆರಿಗೆ ವಿನಾಯಿತಿ ಇಲ್ಲ ಅಂತ ಹೇಳುವುದೇ ಇಲ್ಲ. ಕೆಲವರು ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಮರೆಮಾಚುತ್ತಾ ತಮ್ಮ ವ್ಯವಹಾರವನ್ನು ಮುಂದವರಿಸುತ್ತಿರುವುದು ದುರಂತ. 

Advertisement

ಆ ಕಾಲವೊಂದಿತ್ತು…
ಜೀವ ವಿಮೆ ಅಂದರೆ ಅದಕ್ಕೆ ಕಟ್ಟಿದ ಪ್ರೀಮಿಯಂ ಮೊತ್ತಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಸಿಗುತ್ತಿತ್ತು. ಅದೂ ಆಲ್ಲದೆ ವಿಮಾ ಸಂಸ್ಥೆಯಿಂದ  ಹಿಂಪಡೆಯುವ ಅಷ್ಟೂ ಮೊತ್ತಕ್ಕೂ ಯಾವುದೇ ಆದಾಯ ಕರ ಇರಲಿಲ್ಲ. ಅಂಥ ಕರ ಕಾನೂನು ಸೌಲಭ್ಯವು ವಿಮೆ ಮತ್ತು ಉಳಿತಾಯದ ಜೊತೆ ಜೊತೆಗೆ ವಿಮಾ ಪಾಲಿಸಿಗಳಿಗೆ ವಿಶೇಷ ಮೆರಗು ನೀಡಿತ್ತು. ಆಗಿನ ಕಾಲದ ವಿಮಾ ಏಜೆಂಟರು/ಅಧಿಕಾರಿಗಳು ಆದಾಯ ಕರದ ಈ ವಿಶೇಷ ಸವಲತ್ತನ್ನು ವಿವರವಾಗಿ ಜನರಿಗೆ ತಿಳಿ ಹೇಳುತ್ತಿದ್ದರು. 

ಜೀವ ವಿಮಾ ಪಾಲಿಸಿಗಳಲ್ಲಿ ಎರಡು ನಮೂನೆಯ ಕರ ವಿನಾಯಿತಿ ಸಿಗುತ್ತಿದ್ದವು:
1. ಸೆಕ್ಷನ್‌ 80ಸಿ ಅಡಿಯಲ್ಲಿ ಯಾವುದೇ ಪಾಲಿಸಿಗೂ ಕಟ್ಟಿದ ವಾರ್ಷಿಕ ವಿಮಾ ಪ್ರೀಮಿಯಂ ರೂ.1 ಲಕ್ಷದ ಒಟ್ಟಾರೆ ಮಿತಿಯೊಳಗೆ ಕರ ವಿನಾಯಿತಿಯನ್ನು ಪಡೆಯುತ್ತಿತ್ತು. ಈ ಸೆಕ್ಷನ್ನಿನಲ್ಲಿ ಪಿಪಿಎಫ್, 5 ವರ್ಷದ ಎಫ್.ಡಿ, ಇಎಲ್‌ಎಸ್‌ಎ.ಸ್‌, ಸೀನಿಯರ್‌ ಸಿಟಿಜನ್‌ ಸ್ಕೀಂ ಇತ್ಯಾದಿ ಹಲವು ಇತರ ಸ್ಕೀಮುಗಳೂ ಸೇರಿವೆ. 

2. ಸೆಕ್ಷನ್‌ 10(10ಡಿ) ಅಡಿಯಲ್ಲಿ ಕಟ್ಟಿದ ಪ್ರೀಮಿಯಂ ಅಲ್ಲದೆ ವಿಮಾ ಕಂಪೆನಿಯಿಂದ ಹಿಂಪಡೆಯುವ ಯಾವುದೇ ಮೊತ್ತವೂ ಸಂಪೂರ್ಣವಾಗಿ ಕರ ರಹಿತ ಆದಾಯವೆಂದು ಕರ ಕಾನೂನು ಹೇಳುತ್ತಿತ್ತು.  

ಕಾಲ ಕ್ರಮೇಣ ವಿಮೆಯ ಲಾಯದಿಂದ ಹೊಸ ಹೊಸ ಪಾಲಿಸಿಗಳೂ ಬರತೊಡಗಿದವು. ಜನ ಸಾಮಾನ್ಯರ ಬ್ಯಾಂಕ್‌ ಡೆಪಾಸಿಟ್ಟುಗಳನ್ನು ತಮ್ಮೆಡೆ ಸೆಳೆಯುವ ಸಲುವಾಗಿ ಇಂದಿಷ್ಟು ವಿಮೆಯ ಮಿಶ್ರಣವುಳ್ಳ ಆದರೆ ಅಸಲಿನಲ್ಲಿ ಬ್ಯಾಂಕ್‌ ಡೆಪಾಸಿಟ್ಟನ್ನೇ ಹೋಲುವ ಪಾಲಿಸಿಗಳು ಬರಲಾರಂಭಿಸಿದವು. ಭೀಮಾ ನಿವೇಶ್‌ ಎಂಬ ಹೆಸರಿನ ಒಂದು ಬಹುತೇಕ ಎಫ್ಡಿ ಸ್ಕೀಮನ್ನೇ ಎಲ್‌ಐಸಿಯು ಮಾರಾಟಮಾಡತೊಡಗಿತು. ಅದಲ್ಲದೆ, ಶೇರು ಮಾರುಕಟ್ಟೆ/ಮ್ಯೂಚುವಲ್‌ ಫ‌ಂಡುಗಳತ್ತ ಹರಿದು ಹೋಗುತ್ತಿದ್ದ ಹಣವನ್ನು ತಮ್ಮೆಡೆ ಸೆಳೆಯಲು ಯುಲಿಪ್‌ ಎಂಬ ಅತ್ಯಂತ ಭಯಾನಕ ಮಾರಕಾಸ್ತ್ರವನ್ನು ಅಮಾಯಕ ಜನತೆಯ ಮೇಲೆ ವಿಮಾ ಕಂಪೆನಿಗಳು ಪ್ರಯೋಗ ಮಾಡತೊಡಗಿದವು. ಒಟ್ಟಿನಲ್ಲಿ ವಿಮಾ ಕ್ಷೇತ್ರವು ಕಳೆದ ಒಂದೆರಡು ದಶಕದಲ್ಲಿ ತನ್ನ ಮೂಲ ಸೇವೆಯಾದ ಜೀವವಿಮೆಯನ್ನು ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ತನ್ನ ಕುಡಿಕೆ ತುಂಬಿಸಿಕೊಳ್ಳುವತ್ತ ಧಾರಾಳವಾಗಿ ಮನಸು ಮಾಡತೊಡಗಿತು. ಬಹಳಷ್ಟು ಕಾಲ ಈ ಸ್ವೇಚ್ಚಾಚಾರದ ಮೇಲೆ ಯಾರೊಬ್ಬರೂ ತುಟಿ ಪಿಟಿಕ್‌ ಎನ್ನಲಿಲ್ಲ.

Advertisement

ಇಂತಿಪ್ಪ ಸಂದರ್ಭದಲ್ಲಿ, ಕೇವಲ ವಿಮೆಯನ್ನು ಪೋಷಿಸುವ ಉದ್ದೇಶದಿಂದ ನೀಡಲ್ಪಟ್ಟ ಕರ ವಿನಾಯಿತಿಗಳು ಇಂತಹ ಕುಡಿಕೆ ತುಂಬಿಸುವ ಯೋಜನೆಗಳಿಗೆ ದಯಮಾಡಿಸಬೇಕೇ ಎಂಬ ಮೂಲಭೂತ ಚಿಂತನೆ ನಮ್ಮ ಘನ ಸರಕಾರದ ಮಂಡೆಯೊಳಗೆ ನಿಧಾನವಾಗಿ ಹೊಳೆಯಲಾರಂಭಿಸಿತು. ಅಂತೆಯೇ, ಪ್ರಪ್ರಥಮವಾಗಿ 2003 ರ ಬಜೆಟ್ಟಿನಲ್ಲಿ, ವಿಮೆಯಲ್ಲಿ ಕರ ವಿನಾಯತಿ ಪಡೆದುಕೊಳ್ಳಬೇಕಾದರೆ ಕೆಲ ಮೂಲಭೂತ ತತ್ವಗಳಿಗೆ ಒಳಪಟ್ಟಿರಬೇಕು ಎನ್ನುವ ಕಾನೂನು ಹುಟ್ಟುಹಾಕಲಾಯಿತು. ವಿಮಾ ಆಧಾರಿತ ಕರ ವಿನಾಯಿತಿ ನೈಜವಾದ ವಿಮೆಗಳಿಗೆ ಮಾತ್ರವೇ ಅನ್ವಯವಾಗುವಂತೆ ಹಾಗೂ ವಿಮಾ ಹೆಸರಿನಲ್ಲಿ ನಡೆಯುವ ಬ್ಯಾಂಕಿಂಗ್‌ ಮತ್ತು ಸಟ್ಟಾ ವ್ಯವಹಾರಗಳಿಗೆ ಅನ್ವಯವಾಗದಂತೆ ಹೊಸ ನಿಯಮಾವಳಿಗಳನ್ನು ರೂಪಿಸಲಾಯಿತು. 

ಅಂತೆಯೇ  1-4-2003 ರ ನಂತರ ಪಡಕೊಂಡ ಹೊಸ ವಿಮಾ ಪಾಲಿಸಿಗಳಿಗೆ ಸೆಕ್ಷನ್‌ 80ಸಿ ಅಡಿ ಹೂಡಿಕೆ ಆಧಾರಿತ ಕರ ವಿನಾಯಿತಿ ಹಾಗೂ ಸೆಕ್ಷನ್‌ 10(10ಡಿ) ಅಡಿ ಹಿಂಪಡೆಯುವ ಮೊತ್ತದ ಮೇಲಿನ ಕರ ವಿನಾಯಿತಿ-  ಇವೆರಡರಲ್ಲಿ ಯಾವುದೇ ರೀತಿಯ ಕರ ವಿನಾಯತಿ ಸೌಲಭ್ಯ ಸಿಗಬೇಕಾದರೂ  ಅಂತಹ ಪಾಲಿಸಿಗಳ ಯಾವುದೇ ವರ್ಷದ ಪ್ರೀಮಿಯಂ ವಿಮಾ ಮೊತ್ತದ ಶೇ.20ಕ್ಕಿಂತ ಒಳಗೆ ಇರಬೇಕು ಎನ್ನುವ ಕಾನೂನು ತರಲಾಯಿತು. ಅಂದರೆ,  ಕರ ವಿನಾಯಿತಿ ಬೇಕಾದಲ್ಲಿ ಕಟ್ಟುವ ವಾರ್ಷಿಕ ಪ್ರೀಮಿಯಮ್ಮಿನ 5 ಪಟ್ಟು ವಿಮಾ ಮೊತ್ತ ಇರಬೇಕು ಎನ್ನುವ ಅರ್ಥ. ಆ ಪ್ರಕಾರ ಯಾವುದೇ ಒಂದು ವರ್ಷವಾದರೂ ಪ್ರೀಮಿಯಂ ಮೊತ್ತ ಶೇ.20 ಮೀರಿದರೆ 80ಸಿ ಅಡಿಯಲ್ಲಿ ಕರ ವಿನಾಯಿತಿಯು ವಿಮಾ ಮೊತ್ತದ ಶೇ.20 ಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಅಲ್ಲದೆ, ಅಂಥ ಪಾಲಿಸಿಯ ಮೆಚೂÂರಿಟಿ ಮೊತ್ತದ ಮೇಲೆ 10(10ಡಿ) ಅಡಿಯಲ್ಲಿ ಕರ ವಿನಾಯಿತಿ ಸಿಗಲಾರದು ಮೆಚೂÂರಿಟಿ ಮೊತ್ತವನ್ನು ಆಯಾ ವರ್ಷದ ಆದಾಯಕ್ಕೆ ಸೇರಿಸಿ ಕರಕಟ್ಟತಕ್ಕದ್ದು. ಈ ಲೆಕ್ಕಾಚಾರಕ್ಕೆ ವಿಮಾ ಮೊತ್ತ ಅಂದರೆ ಪಾಲಿಸಿ ಕರಾರು ಪತ್ರದಲ್ಲಿ ನಮೂದಿಸಿದ ಮುಖ ಬೆಲೆ ಮಾತ್ರ; ಅದಕ್ಕೆ ಯಾವುದೇ ರೀತಿಯ ಪ್ರೀಮಿಯಂ ವಾಪಸಾತಿ, ಬೋನಸ್‌, ಇತ್ಯಾದಿ ಮೊತ್ತಗಳನ್ನು ಸೇರಿಸಲಾಗುವುದಿಲ್ಲ ಎಂಬ ಸ್ಪಷ್ಟವಾದ ನಿಲುವನ್ನೂ ಪ್ರಕಟಿಸಿತು.    

ಇದರೊಂದಿಗೆ ಬ್ಯಾಂಕ್‌ ಡೆಪಾಸಿಟ್ಟುಗಳನ್ನು ಹೋಲುವ ಸಿಂಗಲ್‌ ಪ್ರೀಮಿಯಂ ಹಾಗೂ ಅಲ್ಪಕಾಲಿಕ ವಿಮಾ ಪಾಲಿಸಿಗಳಿಗೆ ಆವರೆಗೆ ಸಿಗುತ್ತಿದ್ದ ಎರಡೂ ರೀತಿಯ ಕರ ವಿನಾಯಿತಿಗಳು ಇಲ್ಲವಾಯಿತು. ಆದರೂ, ಪಾಲಿಸಿದಾರನ ಮೃತ್ಯುವಿನ ಸಂದರ್ಭದಲ್ಲಿ ನಾಮಿನಿಗೆ ಸಿಗುವ ಮೊತ್ತಕ್ಕೆ ಮಾತ್ರ ಒಂದು ಮಾನವೀಯ ದೃಷ್ಟಿಯಿಂದ ಈ ಕರವಿನಾಯಿತಿಯನ್ನು ಮುಂದುವರಿಸಲಾಯಿತು. ಇವುಗಳ ಮೆಚೂÂರಿಟಿ ಮೊತ್ತದ ಮೇಲೆ ಆದಾಯ ಕರ ನೀಡಬೇಕಾಗುತ್ತದೆ. 

ಕಾಲ ಕ್ರಮೇಣ 2012 ಬಜೆಟ್ಟಿನಲ್ಲಿ 1-4-2012 ರಿಂದ ಅನ್ವಯವಾಗುವಂತೆ ಈ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಿ ವಾರ್ಷಿಕ ಪ್ರಿಮಿಯಂ ಮೊತ್ತ ವಿಮಾ ಮೊತ್ತದ ಶೇ.10ರಷ್ಟು ಒಳಗಿರಬೇಕು ಎನ್ನುವ ಹೊಸಕಾನೂನು ಮಾಡಿತು. ಒಂದು ವೇಳೆ ಪ್ರೀಮಿಯಂ ಮೊತ್ತ ವಿಮಾ ಮೊತ್ತದ ಶೇ.10 ಕ್ಕಿಂತ ಜಾಸ್ತಿ ಇದ್ದಲ್ಲಿ ಆದಾಯ ತೆರಿಗೆಯ ವಿನಾಯಿತಿಯು ಶೇ.10 ಕ್ಕೆ ಮಾತ್ರವೇ ಸೀಮಿತ. ಆ ಮಿತಿಯನ್ನು ಮೀರಿತ ಪ್ರೀಮಿಯಂಗೆ ಕರ ವಿನಾಯಿತಿಯ ಸೌಲಭ್ಯ ಇರುವುದಿಲ್ಲ. ಆದರೆ ಮೆಚೂÂರಿಟಿ ಮೊತ್ತದ ಮೇಲೆ 10(10ಡಿ) ಅಡಿಯಲ್ಲಿ ಯಾವುದೇ ಕರವಿನಾಯಿತಿ ಸಿಗಲಾರದು. ಅಂತಹ ಮೆಚೂÂರಿಟಿ ಮೊತ್ತವನ್ನು ಆ ವರ್ಷದ ಆದಾಯಕ್ಕೆ ಸೇರಿಸಿ ಕರ ಕಟ್ಟತಕ್ಕದ್ದು. 

ಇದರ ಅರ್ಥ ಎಲ್ಲಾ ರೀತಿಯ ವಿಮಾ ಪಾಲಿಸಿಗಳಿಗೂ ನಾವು ತಿಳಿದುಕೊಂಡಂಥ ಸಂಪೂರ್ಣ ತೆರಿಗೆ ವಿನಾಯತಿ ಸೌಲಭ್ಯಗಳಿಲ್ಲ! ಪ್ರೀಮಿಯಮ್ಮಿನ ಹತ್ತು ಪಟ್ಟು ವಿಮಾ ಮೊತ್ತ ಇರುವಂಥ ದೀರ್ಘ‌ಕಾಲಿಕ ಪಾಲಿಸಿಗಳಿಗೆ ಮಾತ್ರ 80ಸಿ ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ  ಹಾಗೂ 10(10ಡಿ) ಕರ ಸೌಲಭ್ಯಗಳು ಇರುತ್ತವೆ. ಭೀಮಾ ನಿವೇಶ್‌, ಬೀಮಾ ಬಚತ್‌, ಜೀವನ್‌ ಪ್ರಮುಖ್‌ ಮುಂತಾದ ಕೆಲವು ಸಿಂಗಲ… ಪ್ರೀಮಿಯಂ/ಕಡಿಮೆ ಪ್ರೀಮಿಯಂ ಅವಧಿಯ ಪಾಲಿಸಿಗಳು ಈ ನಿಯಮವನ್ನು ಪಾಲಿಸುವುದಿಲ್ಲದ ಕಾರಣ ಅವುಗಳಿಗೆ 80ಸಿ ಅಡಿಯಲ್ಲಿ 10% ಕ್ಕೆ ಸೀಮಿತ ಹಾಗೂ 10(10ಡಿ) ಅಡಿಯಲ್ಲಿ ಯಾವುದೇ ಕರ ವಿನಾಯಿತಿಗಳು ಇರುವುದಿಲ್ಲ.  

ಈ ಸರಳ ಸತ್ಯ ಎಷ್ಟು ಜನರಿಗೆ ಗೊತ್ತು ?
2003 ರಿಂದ ಇಂದಿನವರೆಗೂ ವಿಮಾ ಕಂಪೆನಿಗಳು ತೆರಿಗೆ ವಿನಾಯತಿ ಇಲ್ಲದ ಹಾಗೂ ಇರುವ ಎರಡೂ ರೀತಿಯ ಪಾಲಿಸಿಗಳನ್ನೂ ಯಾವುದೇ ಬೇಧಭಾವ ಇಲ್ಲದೆ ಜನರಿಗೆ ಮಾರಾಟ ಮಾಡುತ್ತಿವೆ. ತೆರಿಗೆ ವಿನಾಯಿತಿ ಇಲ್ಲದ ಪಾಲಿಸಿಗಳ ಬಗ್ಗೆ ಇವಕ್ಕೆ ತೆರಿಗೆ ವಿನಾಯಿತಿ ಇಲ್ಲ ಎಂದು ಸ್ಪಷ್ಟವಾಗಿ ವಿಮಾ ಸಂಸ್ಥೆಗಳಾಗಲಿ, ಜಾಹೀರಾತುಗಳಾಗಲಿ, ಅವುಗಳ ಏಜೆಂಟರಾಗಲಿ ನಿಮಗೆ ಹೇಳುವುದೇ ಇಲ್ಲ. ಕೆಲವರು ಉದ್ಧೇಶ ಪೂರ್ವಕವಾಗಿ ಈ ವಿಚಾರವನ್ನು ಮರೆಮಾಚುತ್ತಾರಾದರೆ ಹಲವಾರು ಏಜೆಂಟರಿಗೆ ಈ ಬಗ್ಗೆ ಸರಿಯಾದ ಅರಿವೂ ಕೂಡಾ ಇರುವುದಿಲ್ಲ. ಎಲ್ಲಾ ವಿಮಾ ಪಾಲಿಸಿಗಳೂ ಸದಾ ಎರಡೂ ತೆರನಾದ ಕರ ವಿನಾಯಿತಿಗಳೊಂದಿಗೇ ಜನ್ಮತಾಳುತ್ತವೆ ಎನ್ನುವ ಓಬೀರಾಯನ ಕಾಲದ ತತ್ವಕ್ಕೆ ನೇತು ಹಾಕಿಕೊಂಡು ನಿಮಗೆ ಅದೇ ಗಿಣಿಪಾಠವನ್ನು ಒಪ್ಪಿಸುತ್ತಾರೆ. ಆದರಿದು ಸತ್ಯಕ್ಕೆ ದೂರ! 

ಇಷ್ಟು ವರ್ಷ ನಡೆದುಕೊಂಡು ಬಂದಂತಹ ಈ ವ್ಯವಹಾರಕ್ಕೆ ಈಗಾಗಲೇ ಹಲವಾರು ಅಮಾಯಕ ಪಾಲಿಸಿದಾರರು ಬಲಿಯಾಗಿದ್ದಾರೆ. ಆದರೂ ಕುಂಭಕರ್ಣ ವಂಶಸ್ಥನಾದ ವಿಮಾ ನಿಯಂತ್ರಕ (ಇರ್ಡಾಬಾಯ…) ಇನ್ನೂ ಸಂಪೂರ್ಣವಾಗಿ ಎಚ್ಚೆತ್ತಿಲ್ಲ; ಸಮಸ್ಯೆಯ ಪೂರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಇರ್ಡಾ ಕಾನೂನಿನ ಅನುಸಾರ ಪ್ರತಿಯೊಂದು ವಿಮಾ ಪಾಲಿಸಿಯೂ 15 ದಿನಗಳ ಉಚಿತ ತಪಾಸಣಾ ಅವಧಿಯೊಂದಿಗೆ ಬರುತ್ತದೆ. ಇದೂ ಕೂಡಾ ಬಹುತೇಕರಿಗೆ ಗೊತ್ತಿಲ್ಲ. ನಿಂಬೆ ಶರಬತ್ತಿಗೆ ಯಾರು ಸ್ವಾಮಿ ಪ್ರಚಾರ ಕೊಡುತ್ತಾರೆ? ಕೊಡುವುದೇನಿದ್ದರೂ ಪೆಪ್ಸಿ/ಕೋಕಿಗೆ ತಾನೆ? ಈ ಸೌಲಭ್ಯದಡಿಯಲ್ಲಿ ನಿಮ್ಮ ಕೈಗೆ ಪಾಲಿಸಿಯ ಕರಾರು/ಬಾಂಡು ಸೇರಿದ 15 ದಿನಗಳ ಒಳಗೆ ಅದು ನಿಮಗೆ ತೃಪ್ತಿ ಕೊಡದಿದ್ದರೆ ಹಾಗೆಯೇ ವಾಪಾಸು ಮಾಡಬಹುದಾಗಿದೆ. ನಿಮ್ಮ ಪಾಲಿಸಿಯನ್ನು ಕ್ಯಾನ್ಸಲ… ಮಾಡಿ ನೀವು ಕೊಟ್ಟ ಪ್ರೀಮಿಯಂ ಅನ್ನು ಯಾವುದೇ ಕಡಿತವಿಲ್ಲದೆ ನಿಮಗೆ ವಾಪಾಸು ಕೊಡಬೇಕೆನ್ನುವ ಕಾನೂನು ಇದೆ; 15 ದಿನ ಕಳೆದ ನಂತರ ಈ ರೀತಿ ಕ್ಯಾನ್ಸಲ್‌ ಮಾಡಿಸಿಕೊಳ್ಳಲು ಬರುವುದಿಲ್ಲ. ಇದೀಗ ಹಳೆ ಪಾಲಿಸಿಗಳು ಹಿಂತೆಗೆಯಲ್ಪಡುತ್ತವೆ ಎಂಬ ಅಬ್ಬರದ ಪ್ರಚಾರದಡಿಯಲ್ಲಿ ಕರ ವಿನಾಯಿತಿ ಇರುವ ಹಾಗೂ ಇರದ ಪಾಲಿಸಿಗಳೂ ಭರ್ಜರಿ ಮಾರಾಟವಾಗಿವೆ. ನೀವು ಸಧ್ಯದಲ್ಲಿಯೇ ವಿಮೆ ಮಾಡಿ¨ªಾದರೆ ಅಂಥ ಪಾಲಿಸಿ ಬಾಂಡು ಕೈಸೇರಿದಾಕ್ಷಣ ನಿಮ್ಮ ಪಾಲಿಸಿಗೆ ಆದಾಯ ತೆರಿಗೆ ವಿನಾಯಿತಿ ಇದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಿ.  

ಟಿಡಿಎಸ್‌ 
ಕರ ಕಾನೂನು ಏನೇ ಇರಲಿ; ಪಾಲನೆ ಮಾಡುವವರು ಬೇಕಲ್ಲ? ಹಾಗಾಗಿ ಸರಕಾರಕ್ಕೆ ಕಾನೂನು ರೀತ್ಯಾ ಬರಬೇಕಾದ ಕರ ನೈಜವಾಗಿ ಬರಲೇ ಇಲ್ಲ. ಎಲ್ಲರೂ ಪಾವತಿಯನ್ನು ತೆಪ್ಪಗೆ ಕುಳಿತುಕೊಳ್ಳುವವರೇ. ಕರಕಟ್ಟಲು ಯಾರೂ ಕೈ ಮುಂದಾಗಿಸಲಿಲ್ಲ. 

ಇದನ್ನು ನೋಡಿದ ಸರಕಾರ ಈ ಬಜೆಟ್ಟಿನಲ್ಲಿ 2014 ಅಕ್ಟೋಬರ್‌ 1 ರಿಂದ ಅನುಷ್ಠಾನಕ್ಕೆ ಬರುವಂತೆ ಟಿಡಿಎಸ್‌ ಪದ್ಧತಿಯನ್ನು ಜಾರಿಗೆ ತಂದಿದೆ. ವಿಮೆಯ ಪಾವತಿಯಲ್ಲಿ ಎಲ್ಲಿಲ್ಲಿ ಆದಾಯ ಕರ ಲಾಗೂ ಆಗುವುದೋ ಅಲ್ಲಲ್ಲಿ ಶೇ.2ರಷ್ಟು ಟಿಡಿಎಸ… ಕಡಿತ ಮಾಡಿ ಸರಕಾರಕ್ಕೆ ನೇರವಾಗಿ ಕಟ್ಟುವಂತೆ ಸೆಕ್ಷನ್‌ 194ಡಿಎ ಪ್ರಕಾರ ಎಲ್ಲಾ ವಿಮಾ ಕಂಪೆನಿಗಳಿಗೆ ತಾಕೀತು ಮಾಡಿದೆ. 

ಇದರಿಂದಾಗಿ ಸರಕಾರಕ್ಕೆ ಮುಂಗಡವಾಗಿ ಶೇ.2ರಷ್ಟು ಕರ ಸಂದಾಯವಾಗುವುದಲ್ಲದೆ ಪ್ಯಾನ್‌ ನಂಬರ್‌ ಸಹಿತ ನಿಮ್ಮ ಪಾವತಿ ಸರಕಾರದ ದೈತ್ಯ ಕಂಪ್ಯೂಟರ್‌ ಕೈಗೆ ಸಿಕ್ಕಿ ಬೀಳುತ್ತದೆ. ಆಮೇಲೆ ಟಿಡಿಎಸ್‌ ಅನ್ನು ನಮೂದಿಸಿ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ನೋಟೀಸು ಕಳುಹಿಸುವ ಕೆಲಸ ಆ ನಕ್ಷತ್ರಿಕ ಕಂಪ್ಯೂಟರೇ ಮಾಡುತ್ತದೆ. ಅದಕ್ಕೆ ಸಹಿ ಹಾಕಲು ಒಬ್ಬ ಅಧಿಕಾರಿಯ ಅವಶ್ಯಕತೆ ಕೂಡಾ ಸರಕಾರಕ್ಕೆ ಇಲ್ಲ! 

ಟಿಡಿಎಸ್‌ ಎನ್ನುವುದೇ ಅಂತಿಮ ಕರವಲ್ಲ. ಅದೊಂದು ತಾತ್ಕಾಲಿಕ ಕಡಿತ ಮಾತ್ರ. ಟಿಡಿಎಸ್‌ ಬಳಿಕ ವೈಯಕ್ತಿಕವಾಗಿ ತಮ್ಮ ಇತರ ಎಲ್ಲಾ ಆದಾಯಗಳ ಜೊತೆಗೂಡಿಸಿದಾಗ ಅನ್ವಯಿಸುವ ಕರದ ಲೆಕ್ಕಾಚಾರವನ್ನು ಪ್ರತ್ಯೇಕವಾಗಿ ಹಾಕಿ, ಕರ ಇಲಾಖೆಗೆ ರಿಟರ್ನ್ ಸಲ್ಲಿಸಿ, ಬಾಕಿ ಕರವನ್ನು ಕಟ್ಟುವ ಅಥವಾ ರಿಫ‌ಂಡ್‌ ಪಡೆಯುವ ಕೆಲಸವನ್ನು ಗ್ರಾಹಕರು ಮಾಡಬೇಕು.  

ಇಷ್ಟೆಲ್ಲಾ ಕೊರೆಯುವುದರ ಹಿಂದಿನ ಉದ್ಧೇಶ ಯಬ್ಟಾ ದೇವರೇ, ಇನ್ನು ಮುಂದೆ ಇನುÒರೆನ್ಸಿನ ಸಹವಾಸವೇ ಬೇಡಪ್ಪಾ ನಮಗೆ ಎಂದು ಒಂದು ದೊಡ್ಡ ನಮಸ್ಕಾರ ಹಾಕಲಿಕ್ಕೆ ಅಲ್ಲವೇ ಅಲ್ಲ. ಸರಕಾರದ ಉದ್ಧೇಶ ಇನುÒರೆನ್ಸಿನ ಹೆಸರಿನಲ್ಲಿ ಅಲ್ಪಕಾಲಿಕ ಡಿಪಾಸಿಟ್‌ಗಳನ್ನು ಇಟ್ಟು ಕರತಪ್ಪಿಸುವ ಹಾದಿಯನ್ನು ಬಂದ್‌ ಮಾಡುವುದಾಗಿದೆಯೇ ಹೊರತು ನೈಜವಾದ ವಿಮೆಯಿಂದ ಜನರನ್ನು ದೂರ ಓಡಿಸುವುದು ಅಲ್ಲ. 

ಹಾಗಾಗಿ, ನೈಜವಾದ ಕರವಿನಾಯತಿಯುಳ್ಳ ದೀರ್ಘ‌ಕಾಲಿಕ ವಿಮಾ ಪಾಲಿಸಿಗಳನ್ನು ಈ ಮೊದಲಿನಂತೆ ನಿಶ್ಚಿಂತೆಯಿಂದ ಕೊಳ್ಳಬಹುದು. 

ಜೀವ ವಿಮೆಗೂ ಟಿಡಿಎಸ್‌ ಕಡಿತ
1.    ಮೃತ್ಯುವಲ್ಲದ ಅಂತಿಮ ಮೆಚೂÂರಿಟಿ ಪಾವತಿಯ ಸಂದರ್ಭದಲ್ಲಿ ಕರಾರ್ಹವಾದ ಪಾಲಿಸಿಗಳಿಗೆ ಮಾತ್ರ (ಅಂದರೆ ಪ್ರೀಮಿಯಂ ಮೊತ್ತ ಮೇಲೆ ಹೇಳಿದ ಶೇ.20, ಶೇ.10ರಷ್ಟು ಇತ್ಯಾದಿ ಮಾಪನಾನುಸಾರ) ಅನ್ವಯವಾಗುತ್ತದೆ. ಮೂಲತಃ ಕರಾರ್ಹವಲ್ಲದ ಇತರ ಪಾಲಿಸಿಗಳ -1-4-2003 ಮೊದಲಿನ ಎÇÉಾ ಪಾಲಿಸಿಗಳ ಸಹಿತ  ಮೇಲೆ ಯಾವುದೇ ಟಿಡಿಎಸ್‌ ಇರುವುದಿಲ್ಲ.  
2.    ಅಕ್ಟೋಬರ್‌ 1 ರ ನಂತರ ಪಾವತಿಯಾಗುವ ಎÇÉಾ ಕರಾರ್ಹ ಪಾಲಿಸಿಗಳಿಗೂ (ಮೇಲ್ಕಾಣಿಸಿದಂತೆ) ಇದು ಅನ್ವಯವಾಗುತ್ತದೆ.  
3.    ಅಂತಿಮ ಪಾವತಿಯ ಬೋನಸ್‌, ಇನ್ನಿತರ ಪಾವತಿ ಸಹಿತವಾದ ಗ್ರಾಸ್‌ ಅಂತಿಮ ಮೊತ್ತದ ಮೇಲೆ ಶೇ.2ರಷ್ಟು ಟಿಡಿಎಸ್‌ ಲಾಗೂ ಆಗುತ್ತದೆ.  
4.    ಸಣ್ಣ ಹೂಡಿಕೆದಾರ ಹಿತದೃಷ್ಟಿಯಿಂದ ಒಂದು ವರ್ಷದಲ್ಲಿ ಎÇÉಾ ಕರಾರ್ಹ ಪಾವತಿಗಳ ಒಟ್ಟು ಗ್ರಾಸ್‌ ಪಾವತಿ ರೂ 1 ಲಕ್ಷದ ಮಿತಿಯವರೆಗೆ ಈ ಟಿಡಿಎಸ್‌ ನಿಂದ ವಿನಾಯತಿ ನೀಡಲಾಗಿದೆ. ಆ ಮಿತಿ ದಾಟಿದವರಿಗೆ ಪೂರ್ತಿ ಮೊತ್ತದ ಮೇಲೆ ಶೇ. 2ರಷ್ಟು  ಟಿಡಿಎಸ್‌ ಕಡಿತವಾಗುತ್ತದೆ. 
5.    ಪ್ಯಾನ್‌ ನಂಬರ್‌/ಕಾಪಿ ನೀಡದವರಿಗೆ ಶೇ.2 ಬದಲು ಶೇ.20ರಷ್ಟು ಟಿಡಿಎಸ್‌ ಕಡಿತವಾಗುತ್ತದೆ. 
6.    ಬ್ಯಾಂಕುಗಳಲ್ಲಿ ಮಾಡಿದಂತೆ ಅರ್ಜಿ 15ಜಿ/15ಎಚ್‌ ನೀಡಿ ಈ ಟಿಡಿಎಸ್‌ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅನ್ವಯವಾಗುವಲ್ಲಿ ಈ ಟಿಡಿಎಸ್‌ ಕಡ್ಡಾಯ.
(ಗಮನಿಸಿ: ದಿನಾಂಕ 1.1.2016 ರ ನಂತರ ಟಿಡಿಎಸ್‌ ಕಡಿತ ಶೇ.2ರಷ್ಟು ಬದಲಾಗಿ ಶೇ.1ರಷ್ಟು ದರದಲ್ಲಿ ಮಾಡಲಾಗುತ್ತದೆ.) 

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next