ವರದಿ: ಕೆ. ನಿಂಗಜ್ಜ
ಗಂಗಾವತಿ: ಇಲ್ಲಿನ ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಕುಡಿಯುವ ನೀರು, ಶೌಚಾಲಯ, ವಾಹನ ಪಾರ್ಕಿಂಗ್ ಹಾಗೂ ಸರಿಯಾದ ಬಸ್ ನಿಲ್ದಾಣವಿಲ್ಲದೇ ಪ್ರವಾಸಿಗರು ಮಳೆ ಮತ್ತು ಬಿಸಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿದ್ದು, ಕಳೆದ 10 ವರ್ಷಗಳಿಂದ ಇಲ್ಲಿಗೆ ದೇಶ ವಿದೇಶದ ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ವೀಕ್ ಆ್ಯಂಡ್ ಸಂದರ್ಭದಲ್ಲಿ ಐಟಿ ಬಿಟಿ ಉದ್ಯೋಗಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿಗೆ ಆಗಮಿಸುವವರಿಗೆ ಶುದ್ಧ ಕುಡಿಯುವ ನೀರು, ಸರಿಯಾದ ಶೌಚಾಲಯವಿಲ್ಲ. ಅರ್ಧಂಬರ್ಧ ಅಭಿವೃದ್ಧಿಪಡಿಸಿದ ವಾಹನ ಪಾರ್ಕಿಂಗ್ ಸ್ಥಳ ಇರುವುದರಿಂದ ಬಹಳ ತೊಂದರೆಯಾಗಿದೆ.
ಪ್ರವಾಸಿಗರಿಗೆ ಉಳಿದುಕೊಳ್ಳಲು ಜಾಗವಿಲ್ಲ. ಸಣ್ಣ ಪ್ರಮಾಣದ ಪಾರ್ಕಿಂಗ್ ಜಾಗವಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿದ ಸಾಮೂಹಿಕ ಶೌಚಾಲಯ ಉದ್ಘಾಟನೆಗೂ ಮೊದಲೇ ಮೇಲ್ಛಾವಣಿ ತಗಡು ಕಿತ್ತು ಹೋಗಿವೆ. ಬಾಗಿಲು ಮುರಿಯಲಾಗಿದೆ. ಪಾರ್ಕಿಂಗ್ ಜಾಗದಲ್ಲಿ ಅರ್ಧಂಬರ್ಧ ಕಾಂಕ್ರೀಟ್ ಹಾಕಲಾಗಿದೆ. ಮಳೆ ಬಂದರೆ ನೆಲವೆಲ್ಲ ಕೆಸರಾಗುವುದರಿಂದ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತದೆ. ವಾಹನಗಳನ್ನು ನಿಲ್ಲಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮುನಿರಾಬಾದ್ ಗಂಗಾವತಿ ಮುಖ್ಯ ರಸ್ತೆ ಎರಡು ಕಡೆಗಳಲ್ಲಿ ಭಕ್ತರ ವಾಹನ ನಿಲುಗಡೆಯಿಂದ ಸಂಚಾರ ಅಸ್ತವ್ಯಸ್ತವಾಗುತ್ತದೆ.
ಕುಡಿಯುವ ನೀರಿಲ್ಲ: ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುವ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕೆಳಗಡೆ ಶುದ್ಧ ಕುಡಿಯುವ ನೀರಿನ ಕೊರತೆಯಿದ್ದು, ಪಕ್ಷದ ಆನೆಗೊಂದಿ ಇಲ್ಲವೇ ಸಾಣಾಪುರದಿಂದ ನೀರು ತಂದು ಕುಡಿಯ ಬೇಕಾದ ಅನಿವಾರ್ಯತೆಯುಂಟಾಗಿದೆ. ಅಂಜನಾದ್ರಿ ಬೆಟ್ಟದ ಕೆಳಗೆ ಖಾಸಗಿ ಕಂಪನಿಯ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಅದು ಪದೇ ಪದೆ ಕೆಟ್ಟು ಹೋಗುತ್ತಿದೆ.
ರಸ್ತೆ ಯುದ್ಧಕ್ಕೂ ಸಣ್ಣ ಪುಟ್ಟ ಅಂಗಡಿಗಳಿದ್ದು, ಇಲ್ಲಿಗೆ ಬರುವ ಭಕ್ತರು ಪ್ರವಾಸಿಗರು ಉಪಾಹಾರ ಸೇವನೆ ಅಥವಾ ಚಹಾ ಕುಡಿದರೆ ಮಾತ್ರ ಕುಡಿಯುವ ನೀರು ಕೊಡಲಾಗುತ್ತದೆ. ಇಲ್ಲದಿದ್ದರೆ ದುಬಾರಿ ದರದಲ್ಲಿ ಬಾಟಲ್ ನೀರು ಖರೀದಿಸಿ ಕುಡಿಯಬೇಕು. ಅಂಜನಾದ್ರಿ ಬೆಟ್ಟದ ಕೆಳಗೆ ಸರಿಯಾದ ಬಸ್ ನಿಲ್ದಾಣವಿಲ್ಲದ ª ಕಾರಣ ಮಳೆ ಮತ್ತು ಬಿಸಿಲಲ್ಲಿ ಭಕ್ತರು ಬಸ್ಸಿಗಾಗಿ ಕಾಯುವ ಸ್ಥಿತಿ ಇದೆ. ನಾಮಕಾವಸ್ತೆಗಾಗಿ ದೂರದಲ್ಲಿ ಸಣ್ಣ ಬಸ್ ಸೆಲ್ಟರ್ ನಿರ್ಮಿಸಲಾಗಿದ್ದು, ಅದು ಸಹ ಕಿತ್ತು ಹೋಗಿದೆ. ಪ್ರತಿ ತಿಂಗಳು ಸುಮಾರು 8-10 ಲಕ್ಷ ರೂ. ಗಳಂತೆ ವಾರ್ಷಿಕ ಕೋಟ್ಯಾಂತರ ರೂ.ಗಳ ಭಕ್ತರಿಂದ ಬರುವ ಆದಾಯ ಮತ್ತು ಸರಕಾರದಿಂದ ಕೋಟ್ಯಂತರ ರೂ.ಗಳ ಅನುದಾನ ಬರುವ ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರದಲ್ಲಿ ಭಕ್ತರಿಗೆ ಅನುಕೂಲವಾಗುವಂತಹ ಒಂದು ಸಹ ಕಾರ್ಯಗಳು ಇದುವರೆಗೂ ನಡೆದಿಲ್ಲ.