Advertisement

ಕೈಗಾರಿಕೆ ಸ್ಥಾಪಿಸಿ ಇಲ್ಲ ನಿರುದ್ಯೋಗ ಭತ್ಯೆ ಕೊಡಿ

10:58 AM Jan 04, 2019 | Team Udayavani |

ಬಳ್ಳಾರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೃಹತ್‌ ಕಂಪನಿಗಳು ಖರೀದಿಸಿದ್ದ ಜಮೀನುಗಳಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ಆ ಗ್ರಾಮಗಳ ಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಐಟಿಯು ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ
ಮನವಿ ಸಲ್ಲಿಸಿದರು.

Advertisement

ಬಳ್ಳಾರಿ ತಾಲೂಕಿನ ಕುಡಿತಿನಿ, ಹರಗಿನಡೋಣಿ, ವೇಣಿವೀರಾಪುರ, ಸಿದ್ದಮ್ಮನಹಳ್ಳಿ, ಕೊಳಗಲ್ಲು ಗ್ರಾಮಗಳ ಬಳಿಯಿರುವ 12 ಸಾವಿರಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ವತಿಯಿಂದ ಮಿತ್ತಲ್‌, ಬ್ರಹ್ಮಿಣಿ, ಎನ್‌ಎಂಡಿಸಿ ಕಂಪನಿಗಳು
ವಶಪಡಿಸಿಕೊಂಡಿದ್ದವು. ಈ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಕಳೆದ ಒಂದು ದಶಕದಿಂದ ಸ್ವಾಧೀನ ಪಡಿಸಿಕೊಂಡಿದ್ದ ಈ ಜಮೀನುಗಳಲ್ಲಿ ಈವರೆಗೂ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಹಾಗಾಗಿ ಜಮೀನುಗಳಲ್ಲಿ
ಕೂಡಲೇ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಂಡಿದ್ದ ಮಿತ್ತಲ್‌ ಕಂಪನಿಯವರು ಎಕರೆಗೆ 8 ಲಕ್ಷ ರೂ. ದರ ನೀಡಿದರೆ, ಬ್ರಹ್ಮಿಣಿ ಕಂಪನಿಯು ಎಕರೆಗೆ 5 ಲಕ್ಷ ರೂ., ಎನ್‌ಎಂಡಿಸಿ ಕಂಪನಿ ಎಕರೆಗೆ 4,3 ಹೀಗೆ ವಿವಿಧ ಕಂಪನಿಗಳು ಅತ್ಯಂತ ಕಡಿಮೆ ಬೆಲೆಗೆ
ಜಮೀನುಗಳನ್ನು ವಶಪಡಿಸಿಕೊಂಡಿವೆ. ಅಂದಿನ ರಾಜ್ಯ ಸರ್ಕಾರ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಕೊಡಿಸುವ ಮೂಲಕ ರೈತರಿಗೆ ಅನ್ಯಾಯ ಎಸಗಿದೆ.

ಪರಿಣಾಮ ಕಳೆದ ಒಂದು ದಶಕದಿಂದ ವಿವಿಧ ಪ್ರತಿಭಟನೆ, ಹೋರಾಟ ಮಾಡಿ, ಎಕರೆ ಜಮೀನಿಗೆ 58 ಲಕ್ಷಕ್ಕೂ ಹೆಚ್ಚು ಬೆಲೆ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ. ಮೇಲಾಗಿ ರೈತರು ಸಹ ರಾಜ್ಯ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿ ದಾವೆ
ಹೂಡಿದ್ದಾರೆ. ಅಲ್ಲದೇ, ರೈತರಿಂದ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 2 ಸಾವಿರ ಎಕರೆ ಜಮೀನನ್ನು ಜಿಲ್ಲಾಡಳಿತ ಎಕರೆ 58 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.

ಹಾಗಾಗಿ ದಶಕದ ಹಿಂದೆ ಕಡಿಮೆ ಬೆಲೆಗೆ ಖರೀದಿಸುವ ಮೂಲಕ ರೈತರಿಗೆ ವಂಚನೆಯಾಗಿದ್ದು, ಇದೀಗ ನಿಜವಾದ ಭೂ ಬೆಲೆಯನ್ನು ನಿಗದಿಪಡಿಸಿ ರೈತರಿಗೆ ಪರಿಹಾರ ನೀಡಬೇಕು. ನಿಗದಿತ ಅವಧಿಯಲ್ಲಿ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗದ
ಹಿನ್ನೆಲೆಯಲ್ಲಿ ಜಮೀನನ್ನು ನೆಚ್ಚಿಕೊಂಡು ಜೀವಿಸುತ್ತಿದ್ದ ರೈತರಿಗೆ, ಮತ್ತವರ ಮಕ್ಕಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಮಿಥಲ್‌, ಎನ್‌ಎಂಡಿಸಿ, ಬ್ರಹ್ಮಿಣಿ ಕಂಪನಿಗಳು ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಲ್ಲಿ ಕೂಡಲೇ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಭೂ ಸ್ವಾಧೀನ ಕಾಯ್ದೆಯನ್ವಯ ಸ್ವಾಧೀನ ಪಡಿಸಿಕೊಂಡ ಜಮೀನುಗಳಲ್ಲಿ 5 ವರ್ಷದೊಳಗೆ ಉದ್ದೇಶಿತ
ಕಾರ್ಖಾನೆಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ರೈತ ಕುಟುಂಬಗಳಿಗೆ ತಿಂಗಳಿಗೆ 20 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಅತ್ಯಂತ ಕಡಿಮೆ ಬೆಲೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳಿಗೆ ಮಾರುಕಟ್ಟೆ ಬೆಲೆ ಆಧರಿಸಿ ಪ್ರತಿ ಎಕರೆಗೆ 58 ಲಕ್ಷ ರೂ.
ಭೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಭಾಸ್ಕರ್‌ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಭೂಸಂತ್ರಸ್ತರ ಹೋರಾಟ ಸಮಿತಿ ಮುಖಂಡ ಬಿ.ಪೋಲಪ್ಪ, ಪಾಂಡುರಂಗ, ಕೃಷ್ಣಪ್ಪ, ಶ್ರೀನಿವಾಸ್‌, ವಿಜ್ಜೆಶ್‌, ಎಸ್‌.ನಾಗೇಶಪ್ಪ, ಮಲ್ಲಿಕಾರ್ಜುನ, ಬಸಪ್ಪ,
ಗೋವಿಂದರಾಜ್‌, ನಾಗರಾಜ, ಬಿ.ಬಸವರಾಜಗೌಡ, ಸಿ.ಸಿದ್ದಪ್ಪ, ಪಲ್ಲೆ ಹನುಮಂತಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next