ಮಾಲ್ಡೀವ್ಸ್: ಮಾಲ್ಡೀವ್ಸ್ ಉಚಿತ ಮಿಲಿಟರಿ ನೆರವು ಪಡೆಯುವ ಒಪ್ಪಂದಕ್ಕೆ ಚೀನಾ ಜೊತೆ ಸಹಿ ಹಾಕಿದ ಬಳಿಕ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಇದೀಗ ನಾಗರಿಕ ಧಿರಿಸು ಒಳಗೊಂಡಂತೆ ಯಾವುದೇ ಭಾರತೀಯ ಸೈನಿಕರನ್ನು ಮೇ 10ರ ಬಳಿಕ ದ್ವೀಪ ರಾಷ್ಟ್ರ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಫರ್ಮಾನು ಹೊರಡಿಸಿರುವುದಾಗಿ ಮಾಲ್ಡೀವ್ಸ್ ನ್ಯೂಸ್ ಪೋರ್ಟಲ್ ಎಡಿಷನ್.ಎಂವಿ ವರದಿ ಮಾಡಿದೆ.
ಇದನ್ನೂ ಓದಿ:Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ
ಭಾರತೀಯ ಸೇನಾ ಸಿಬಂದಿಗಳನ್ನು ಹಿಂಪಡೆಯಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿರುವ ಮಾರ್ಚ್ 10ರ ಗಡುವಿನ ಮೊದಲೇ ದ್ವೀಪರಾಷ್ಟ್ರದ ಮೂರು ವಾಯುಯಾನ ಫ್ಲ್ಯಾಟ್ ಫಾರಂಗಳಲ್ಲಿ ಒಂದರ ಹೊಣೆಗಾರಿಕೆ ವಹಿಸಲು ಭಾರತೀಯ ನಾಗರಿಕ ತಂಡ ಮಾಲ್ಡೀವ್ಸ್ ಗೆ ತಲುಪಿದ ಬೆನ್ನಲ್ಲೇ ಮುಯಿಝು ಈ ಹೇಳಿಕೆ ಹೊರಬಿದ್ದಿದೆ.
ಎಡಿಶನ್.ಎಂವಿ ಪ್ರಕಾರ, ಮಾಲ್ಡೀವ್ಸ್ ನಿಂದ ಭಾರತೀಯ ಸೈನಿಕರನ್ನು ವಜಾಗೊಳಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿ ಕಂಡಿದ್ದರೂ ಕೂಡಾ ಜನರು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಮುಯಿಝು ಬಾ ಅಡಾಲ್ ಐದಾಫುಶಿಯಲ್ಲಿ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
“ ಈ ಜನರು (ಭಾರತೀಯ ಮಿಲಿಟರಿ) ಮಾಲ್ಡೀವ್ಸ್ ನಿಂದ ನಿರ್ಗಮಿಸುತ್ತಿಲ್ಲ. ಅಲ್ಲದೇ ಅವರು ನಾಗರಿಕ ಉಡುಪನ್ನು ಧರಿಸಿ ಮಾಲ್ಡೀವ್ಸ್ ಗೆ ವಾಪಸ್ ಆಗಿದ್ದಾರೆ ಎಂದು ಮುಯಿಝು ಆರೋಪಿಸಿದ್ದು, ಇವರೇ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ದೂರಿರುವುದಾಗಿ ವರದಿ ತಿಳಿಸಿದೆ.
ಮೇ 10ರ ನಂತರ ಮಾಲ್ಡೀವ್ಸ್ ನಲ್ಲಿ ಯಾವುದೇ ಭಾರತೀಯ ಸೇನಾ ಪಡೆ ಬರುವಂತಿಲ್ಲ, ಅದು ಯೂನಿಫಾರಂ ಆಗಿರಲಿ, ನಾಗರಿಕ ಉಡುಪಾಗಿರಲಿ, ಯಾವುದಕ್ಕೂ ಅವಕಾಶ ಇಲ್ಲ ಎಂದು ಮುಯಿಝು ಹೇಳುವ ಮೂಲಕ ಭಾರತದ ವಿರುದ್ಧ ಮತ್ತೆ ತೊಡೆ ತಟ್ಟಿರುವುದಾಗಿ ವರದಿ ವಿವರಿಸಿದೆ.