Advertisement

ಕೃಷಿ ಆದಾಯಕ್ಕೆ ತೆರಿಗೆ ಇಲ್ಲ: ಜೇಟ್ಲಿ

03:45 AM Mar 23, 2017 | Team Udayavani |

ನವದೆಹಲಿ: ಕೃಷಿ ಆದಾಯದ ಮೇಲೆ ಯಾವುದೇ ತೆರಿಗೆ ಹೇರುವ ಪ್ರಸ್ತಾವನೆ ಇಲ್ಲ. ಇದು ಸಂಸತ್ತಿನ ಶಾಸನ ಸಭೆಗೆ ಹೊರತಾದ್ದು. ಅದೇನಿದ್ದರೂ, ರಾಜ್ಯದ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.  

Advertisement

2017ರ ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆಗೆ ಜೇಟ್ಲಿ ಈ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸರ್ಕಾರ ಆಧಾರ್‌ ಅನ್ನು ತೆರಿಗೆ ರಿಟನ್ಸ್‌ ಅನ್ನು ಸಲ್ಲಿಸುವಲ್ಲಿ ಕಡ್ಡಾಯ ಮಾಡುತ್ತಿರುವುದಕ್ಕೆ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್  ಸಲ್ಲಿಸುವ ವೇಳೆ ಆಧಾರ್‌ ಕಡ್ಡಾಯ ಮಾಡುವುದರಿಂದ ತೆರಿಗೆ ವಂಚನೆಯನ್ನು ತಡೆಯಲು ಸಾಧ್ಯವಾಗುತ್ತದೆ. ಅದನ್ನು ಪುನರ್‌ ಪರಿಶೀಲನೆ ಮಾಡುವುದಿಲ್ಲವೆಂದರು.

ಸರ್ಕಾರ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್‌ ಕಡ್ಡಾಯ ಮಾಡುವುದರ ಮೂಲಕ ಆಧಾರ್‌ ಅನ್ನು ಜನರ ಮೇಲೆ ಹೇರುತ್ತದೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ಬಿಜೆಡಿ ಆಕ್ಷೇಪಕ್ಕೆ ಉತ್ತರಿಸಿದ ಜೇಟ್ಲಿ, ತೆರಿಗೆ ರಿಟನ್ಸ್‌ ಮತ್ತು ಪಾನ್‌ಗೆ ಅರ್ಜಿ ಸಲ್ಲಿಸುವ ವೇಳೆಗೆ ಆಧಾರ್‌ ಅನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಜನರು ಒಂದಕ್ಕಿಂತ ಹೆಚ್ಚು ಪಾನ್‌ ಸಂಖ್ಯೆ ಪಡೆದು ತೆರಿಗೆ ವಂಚನೆ ಮಾಡುವುದನ್ನು  ತಪ್ಪಿಸಿದಂತಾಗುತ್ತದೆ. 108 ಕೋಟಿ ಮಂದಿ ಆಧಾರ್‌ ಅನ್ನು ಹೊಂದಿರುವಾಗ, ಅಕ್ರಮವನ್ನು ತಡೆಯುವ ಆ ತಾಂತ್ರಿಕತೆ ಬಳಸುವುದಕ್ಕೇನು ಸಮಸ್ಯೆ  ಎಂದು ಪ್ರತಿ ಪ್ರಶ್ನೆ ಎಸೆದರು. 

ಐದು ಮಸೂದೆ ಮಂಡನೆ: ಜುಲೈ 1ರಿಂದ ಜಿಎಸ್‌ಟಿಗೆ ಜಾರಿಗೆ ಅನುಕೂಲವಾಗುವಂತೆ ಸಂಸತ್‌ನಲ್ಲಿ ಐದು ವಿಧೇಯಕಗಳನ್ನು ಮಂಡಿಸಲಾಗುತ್ತದೆ ಎಂದರು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಜಿಎಸ್‌ಟಿ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ ಎಂದರು.

ಜೇಟ್ಲಿ ಅವರ ಭಾಷಣ ಬಳಿಕ 2017ರ ಹಣಕಾಸು ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು. ಇದರಲ್ಲಿ 40 ತಿದ್ದುಪಡಿ  ಮಾಡಲಾಗಿದ್ದು, ಅದರಲ್ಲಿ ನಗದು ವ್ಯವಹಾರ ಮಿತಿಯನ್ನು 3 ಲಕ್ಷದಿಂದ 2 ಲಕ್ಷ ರೂಪಾಯಿಗೆ ಇಳಿಸುವ ವಿಚಾರವೂ ಸೇರಿದೆ. 

Advertisement

ಐಟಿ ನೋಟಿಸ್‌ಗೆ 9.29 ಲಕ್ಷ ಮಂದಿ ಉತ್ತರಿಸಿಲ್ಲ!
ಅಪನಗದೀಕರಣ ಬಳಿಕ ಮಿತಿಗಿಂತ ಹೆಚ್ಚು ನಗದು ಠೇವಣಿ ಇರಿಸಿದ ಬಗ್ಗೆ ತೆರಿಗೆ ಇಲಾಖೆ ಕಳಿಸಿದ ನೋಟಿಸ್‌ಗೆ 9.29 ಲಕ್ಷ ಮಂದಿ ಉತ್ತರಿಸಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಈ ಕುರಿತಂತೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. 

ಅಪನಗದೀಕರಣ ಬಳಿಕ 50 ದಿನಗಳಲ್ಲಿ 18 ಲಕ್ಷ ಮಂದಿ ಮಿತಿಗಿಂತ ಹೆಚ್ಚು 500 ಮತ್ತು 1000 ರೂ. ನೋಟುಗಳನ್ನು ಠೇವಣಿ ಇಟ್ಟಿದ್ದಾರೆ. ಇವರಿಗೆ ಎಸ್‌ಎಂಎಸ್‌ ಮತ್ತು ಇಮೇಲ್‌ ಮೂಲಕ ನೋಟಿಸ್‌ಗಳನ್ನು ಕಳಿಸಲಾಗಿದ್ದು, 8.71 ಲಕ್ಷ ಮಂದಿ ಅವುಗಳಿಗೆ ಉತ್ತರ ನೀಡಿದ್ದಾರೆ. ಉತ್ತರ ನೀಡದವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಅಪನಗದೀಕರಣಕ್ಕೆ ಜನ ಮೆಚ್ಚುಗೆ
ನೋಟುಗಳ ಅಪದೀಕರಣ ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಪ್ರತಿಬಾರಿಯೂ ಟೀಕೆ ನಡೆಸುವ ಕಾಂಗ್ರೆಸ್‌ ಕಾಲೆಳೆದ ಜೇಟ್ಲಿ, ಜನರು ನೀಡಿದ ಅಭಿಪ್ರಾಯ ನೋಡಿ ಎಂದು ಐದು ರಾಜ್ಯಗಳ ಚುನಾವಣಾ ಫ‌ಲಿತಾಂಶ ವಿಚಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ಈ  ಮೂಲಕ ಪ್ರಧಾನಿ ಮೋದಿ ಪ್ರಭಾವಿ ನಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು. 

ಪರೋಕ್ಷವಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧ ಟೀಕಿಸಿದ ಜೇಟ್ಲಿ ಅಪನಗದೀಕರಣದ ಬಳಿಕ ಜಿಡಿಪಿ ಪ್ರಮಾಣ ಶೇ.2ಕ್ಕೆ ಇಳಿಯುತ್ತದೆ ಎಂದ ಕಾಂಗ್ರೆಸ್‌ ತನ್ನ ಸಲಹೆ ನೀಡುವವರನ್ನು ಬದಲಿಸಲಿ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next