Advertisement

ಉದ್ಯಾನವನಕ್ಕಿಲ್ಲ ಉದ್ಘಾಟನೆ ಭಾಗ್ಯ

11:20 AM Aug 03, 2019 | Team Udayavani |

ಗದಗ: ನಗರದಲ್ಲಿ ಲಕ್ಷಾಂತರ ರೂ. ಮೊತ್ತದಲ್ಲಿ ನಿರ್ಮಿಸಿರುವ ಅತ್ಯಾಧುನಿಕವಾದ ಶಿವಯೋಗಿ ಸಿದ್ಧರಾಮೇಶ್ವರ ಉದ್ಯಾನವನ ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸಾರ್ವಜನಿಕರ ಉಪಯೋಗವಿಲ್ಲದೇ ಮುಳ್ಳು ಕಂಟಿಗಳು ಬೆಳೆದು ಉದ್ಯಾನ ಈಗ ಅದ್ವಾನದ ಸ್ಥಿತಿ ತಲುಪಿದೆ.

Advertisement

ಗದಗ- ಬೆಟಗೇರಿ ನಗರಸಭೆಯ ವಾರ್ಡ್‌ ನಂ. 34ರ ವ್ಯಾಪ್ತಿಯ ಸಿದ್ಧಲಿಂಗೇಶ್ವರ ನಗರದಲ್ಲಿ 2017ನೇ ಸಾಲಿನಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಎಸ್‌ಎಫ್‌ಸಿ, ಟಿಎಸ್‌ಪಿ ಲೆಕ್ಕಶೀರ್ಷಿಕೆಯಡಿ ಸುಮಾರು 36 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ.

ಸುಮಾರು 100×30 ಅಡಿ ಅಳತೆಯ ಉದ್ಯಾನದ ಸುತ್ತಲೂ ಫೆನ್ಸಿಂಗ್‌, ಗಾರ್ಡನ್‌ ಪ್ಲೇವರ್(ಪಾದಚಾರಿ), ಉದ್ಯಾನದ ಮೆರಗು ಹೆಚ್ಚಿಸುವ ಬಣ್ಣ ಬಣ್ಣದ ವಿದ್ಯುತ್‌ ದೀಪಗಳು, ಮಕ್ಕಳ ಆಟಿಕೆಗಳಾದ ಜೋಕಾಲಿ, ಸ್ಪ್ರಿಂಗ್‌ ಡಕ್‌, ಜಾರುವ ಬಂಡಿ, ಸೀಸೋ(ತಕ್ಕಡಿ ಮಾದರಿಯ ಆಟಿಕೆ), ಸಾರ್ವಜನಿಕರು ಕೂರಲು ಆಕರ್ಷಕ ಕಲ್ಲು ಬೆಂಚುಗಳು, ಹುಲ್ಲಿನ ಹಾಸು(ಗ್ರೀನ್‌ ಲಾಂಜ್‌), ತರಹೇವಾರಿ ಹೂವಿನ ಗಿಡಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಅದರೊಂದಿಗೆ ಉದ್ಯಾನದ ಅಲ್ಲಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಲು ಬೆಂಚಿನ ಆಸನಗಳನ್ನು ಅಳವಡಿಸಲಾಗಿದೆ. ಆದರೆ, ವರ್ಷಗಳು ಕಳೆದರೂ ಉದ್ಘಾಟನೆಗೊಳ್ಳದ ಕಾರಣ ಅತ್ಯಾಧುನಿಕ ಉದ್ಯಾನ ಸಾರ್ವಜನಿಕರ ಉಪಯೋಗಕ್ಕಿಲ್ಲದಂತಾಗಿದೆ.

 

Advertisement

ಉದ್ಘಾಟನೆಗೆ ಕೈಗೂಡದ ಮುಹೂರ್ತ: 2018ರ ವೇಳೆಗೆ ಉದ್ಯಾನದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿತ್ತು. ಸ್ಥಳೀಯ ವಾರ್ಡ್‌ನ ಸದಸ್ಯ ಹಾಗೂ ನಗರಸಭೆ ಅಧ್ಯಕ್ಷರೂ ಆಗಿದ್ದ ಸುರೇಶ ಕಟ್ಟಿಮನಿ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಹೆಚ್ಚಿನ ಆಸಕ್ತಿ ತೋರಿದ್ದರು. ಅಲ್ಲದೇ, 2018ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾದ ಎಚ್.ಕೆ. ಪಾಟೀಲ ಅವರಿಗೆ ಮಂತ್ರಿ ಸ್ಥಾನ ಒಲಿಯುತ್ತದೆ. ಅವರಿಂದಲೇ ಉದ್ಘಾಟಿಸಬೇಕು ಎಂದು ಉದ್ದೇಶಿಸಿದ್ದರು. ಆದರೆ, ಮೈತ್ರಿ ಸರಕಾರದಲ್ಲಿ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಒಲಿಯಲಿಲ್ಲ. ಈ ನಡುವೆ ನಗರಸಭೆ ಸದಸ್ಯರ ಅವಧಿಯೂ ಪೂರ್ಣಗೊಂಡು ಸುರೇಶ್‌ ಕಟ್ಟಿಮನಿ ಅವರ ಅಧಿಕಾರ ಅವಧಿಯೂ ಕೊನೆಗೊಂಡಿತು. ಹೀಗಾಗಿ ಉದ್ಯಾನದ ಉದ್ಘಾಟನೆಯೂ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ತುಕ್ಕು ಹಿಡಿಯುತ್ತಿವೆ ಆಟಿಕೆಗಳು: ಮಕ್ಕಳ ಆಕರ್ಷಣೆಗಾಗಿ ಉದ್ಯಾನದಲ್ಲಿ ಅಳವಡಿಸಿರುವ ಆಟಿಕೆ ಪರಿಕರಗಳು ಬಳಕೆಗಿಲ್ಲದೇ ತುಕ್ಕು ಹಿಡಿಯುತ್ತಿವೆ. ಉದ್ಯಾನದಲ್ಲಿ ಮುಳ್ಳು ಕಂಟಿ, ನಿರುಪಯುಕ್ತ ಗಿಡಗಳು ಬೆಳೆದು ನಿಂತಿವೆ. ಉದ್ಯಾನದ ನಿರ್ವಹಣೆಯಿಲ್ಲದೇ ಪಾದಚಾರಿಗಳಿಗೆ ಅಳವಡಿಸಿರುವ ಪ್ಲೇವರ್ಗಳೂ ಮುಚ್ಚಿ ಹೋಗಿದ್ದು, ದಾರಿ ಹುಡುಕುವಂತಾಗಿದೆ. ಉದ್ಯಾನದ ಹತ್ತಿರ ಹೋದರೆ ಸಾಕು ವಿಷ ಜಂತುಗಳ ಭಯ ಆವರಿಸುತ್ತದೆ. ಹೀಗಾಗಿ ಮಕ್ಕಳನ್ನು ಉದ್ಯಾನದ ಸುಳಿಯಲೂ ಬಿಡುವುದಿಲ್ಲ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.

ಒಟ್ಟಾರೆ ನಗರಸಭೆ ಸ್ಥಳೀಯ ವಾರ್ಡ್‌ನ ಸದಸ್ಯರ ಪ್ರತಿಷ್ಠೆ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಉದ್ಯಾನ ಅದ್ವಾನದ ಸ್ಥಿತಿ ತಲುಪಿರುವುದು ವಿಪರ್ಯಾಸದ ಸಂಗತಿ.

ಕೆಎನ್‌ಎಲ್ನಿಂದ ಅವಳಿ ನಗರದ ನಾಲ್ಕು ಕಡೆ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಮೂರು ಉದ್ಯಾನಗಳನ್ನು ವಶಕ್ಕೆ ಪಡೆದಿರುವ ನಗರಸಭೆ, ಸಿದ್ಧರಾಮೇಶ್ವರ ನಗರ ಉದ್ಯಾನ ವಶಕ್ಕೆ ಪಡೆಯಲು ಹಿಂದೇಟು ಹಾಕುತ್ತಿದೆ. ಈ ಕುರಿತು ಪ್ರಸ್ತಾವನೆಗೂ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಮತ್ತೂಮ್ಮೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆಯುತ್ತೇವೆ.•ಮಲ್ಲಿಕಾರ್ಜುನ ಜಾಲನ್ನವರ, ಎಇ, ಕೆಎನ್‌ಎಲ್

ಉದ್ಯಾನ ಹಸ್ತಾಂತರಕ್ಕೆ ಹಿಂದೇಟು?:

ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಿಸಲಾಗಿರುವ ಉದ್ಯಾನವನ್ನು ವಶಕ್ಕೆ ಪಡೆಯುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಉದ್ಯಾನದಲ್ಲಿರುವ ಕೊಳವೆ ಬಾವಿಯ ವಿದ್ಯುತ್‌ ಶುಲ್ಕವೂ ಇಲಾಖೆಗೆ ಹೊರೆಯಾಗುತ್ತಿದೆ ಎಂಬುದು ಕಳೆದ ಒಂದೂವರೆ ವರ್ಷದಿಂದ ಉದ್ಯಾನ ವಶಕ್ಕೆ ಪಡೆಯುವಂತೆ ಕೋರಿ ಸಲ್ಲಿಸಿದ ಪತ್ರಗಳಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಕೆಎನ್‌ಎಲ್ ಅಧಿಕಾರಿಗಳ ಅಳಲು.
ಸಿದ್ಧರಾಮೇಶ್ವರ ನಗರದಲ್ಲಿ ಕೆಎನ್‌ಎಲ್ ವತಿಯಿಂದ ಉದ್ಯಾನ ನಿರ್ಮಿಸಿರುವುದು, ಅದರ ಹಸ್ತಾಂತರಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಯಾವುದೇ ಮಾಹಿತಿ ಇಲ್ಲ. ಸಂಬಂಧಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ. •ಮನ್ಸೂರ್‌ ಅಲಿ, ನಗರಸಭೆ ಪೌರಾಯುಕ್ತ
ಈ ಉದ್ಯಾನವನ್ನು ಸಾರ್ವಜನಿಕರ ಉಪಯೋಗಕ್ಕಿಂತ ಗುತ್ತಿಗೆದಾರರ ಜೇಬುತುಂಬಿಸಲು ಮಾಡಿದಂತಿದೆ. ಉದ್ಯಾನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲು ತೋರಿದಷ್ಟು ಉತ್ಸಾಹವನ್ನು ಅದರ ಉದ್ಘಾಟನೆ, ಜನರ ಬಳಕೆಗೆ ಮುಕ್ತಗೊಳಿಸಲು ತೋರಿಸುತ್ತಿಲ್ಲ. ಹೀಗಾಗಿ ಉದ್ಯಾನ ಪಾಳು ಬಿದ್ದಿದೆ. ಈ ಸಂಬಂಧಿಸಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. • ವಂದನಾ ವೆರ್ಣೇಕರ, ಸ್ಥಳೀಯ ಬಿಜೆಪಿ ನಾಯಕಿ
•ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next