ಹೊಸದಿಲ್ಲಿ: ಚಲನಚಿತ್ರದ ನಾಯಕ, ನಾಯಕಿ ಪರಸ್ಪರ ಆಲಿಂಗಿಸದೆ, ಮುತ್ತಿಟ್ಟು ಮುದ್ದಾಡದೆ, ಕನಿಷ್ಠ ಮೈ ಕೈ ಕೂಡ ತಾಗಿಸದಂತೆ ನಟಿಸುವುದು, ರೊಮ್ಯಾಂಟಿಕ್ ಹಾಡುಗಳಿಗೆ ದೂರದಲ್ಲಿ ನಿಂತು ನರ್ತಿಸುವುದನ್ನೊಮ್ಮೆ ಊಹಿಸಿಕೊಳ್ಳಿ…
ನಿಮಗೆ 50, 60ರ ದಶಕದ ಸಿನಿಮಾಗಳು ನೆನಪಾಗಿರಲೇಬೇಕು. ಆದರೆ, ಎರಡು ತಿಂಗಳ ಬಳಿಕ ಚಿತ್ರೀಕರಣ ಮರು ಆರಂಭಿಸಲಿರುವ ಚಿತ್ರರಂಗ ಹಾಗೂ ಕಿರುತೆರೆ ಉದ್ಯಮ ಇದೇ ರೀತಿ ಚಿತ್ರೀಕರಣ ನಡೆಸುವ ಪರಿಸ್ಥಿತಿ ಎದುರಾಗಿದೆ, ಕಾರಣ, ಕೋವಿಡ್!
ಕೋವಿಡ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮನೋರಂಜನಾ ಉದ್ಯಮ ತನ್ನ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ಚಿತ್ರೀಕರಣದ ಸ್ಥಳದಲ್ಲಿ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಮತ್ತಿತರ ವೃತ್ತಿಪರ ಸಿಬಂದಿ ಪಾಲಿಸಬೇಕಿರುವ ಸಾಮಾನ್ಯ ಅಭ್ಯಾಸಗಳ ಕುರಿತು ಭಾರತೀಯ ನಿರ್ಮಾಪಕರ ಸಂಘ 37 ಪುಟಗಳ ಹೊಸ ಕಾರ್ಯನಿರ್ವಹಣೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಉದ್ಯಮದ ಪಾಲುದಾರರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಎರಡು ದಿನಗಳ ಬಳಿಕ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕಲಾವಿದರು, ಸಿಬಂದಿಗೆ ಕೆಲವು ನಿತ್ಯ ಅಭ್ಯಾಸಗಳ ಸಲಹೆ ನೀಡಲಾಗಿದೆ. ಅದರಂತೆ, 45 ನಿಮಿಷ ಮೊದಲೇ ಸೆಟ್‌ಗೆ ಬರಬೇಕು, ಸಾಮಾಜಿಕ ಅಂತರ ಪಾಲಿಸಲು ನೆಲದ ಮೇಲೆ ಮಾರ್ಕಿಂಗ್ ಮಾಡಬೇಕು, ಸ್ನಾನ, ಕೈತೊಳೆಯುವಿಕೆಗೆ, ಸ್ವಚ್ಛತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.
ಇನ್ನೊಂದೆಡೆ ಕೇಶ ವಿನ್ಯಾಸ, ಮೇಕಪ್ ಸಂದರ್ಭದಲ್ಲಿ ಉತ್ಪನ್ನಗಳನ್ನು ಒಮ್ಮೆ ಮಾತ್ರ ಬಳಸಬೇಕು, ವಿಗ್‌ಗಳನ್ನು ಬಳಕೆಗೆ ಮುನ್ನ, ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು, ಸ್ವಂತ ಮೇಕಪ್ ಕಿಟ್ ಬಳಸಬೇಕು, ಮೇಕಪ್ ಮಾಡುವಾಗ ಮಾಸ್ಕ್ ಬದಲು ಫೇಸ್ ಶೀಲ್ಡ್‌ಗಳನ್ನು ಧರಿಸಲು ಸಲಹೆ ನೀಡಲಾಗಿದೆ.
ಸುರಕ್ಷತಾ ಸಲಹೆಗಳೇನು?
– ಎಲ್ಲರೂ ಮುಖಕ್ಕೆ ಮೂರು ಪದರಗಳ ವೈದ್ಯಕೀಯ ಮಾಸ್ಕ್, ಕೈಗವಸು ಧರಿಸುವುದು ಕಡ್ಡಾಯ
– ಚುಂಬನ, ಆಲಿಂಗನ, ಕೈಕುಲುಕುವುದು ಸೇರಿ ಯಾವುದೇ ರೀತಿಯ ದೈಹಿಕ ಶುಭಾಶಯಗಳಿಗೆ ಅವಕಾಶವಿಲ್ಲ
– ಸಹೋದ್ಯೋಗಿಗಳ ನಡುವೆ ಕನಿಷ್ಠ ಎರಡು ಮೀಟರ್ ಅಂತರ ಕಡ್ಡಾಯ
– ಚಿತ್ರೀಕರಣದ ಸೆಟ್, ಕಚೇರಿ, ಸ್ಟುಡಿಯೋಗಳಲ್ಲಿ ಸಿಗರೇಟ್ ಶೇರ್ ಮಾಡುವಂತಿಲ್ಲ
– 60 ವರ್ಷ ಮೇಲ್ಪಟ್ಟ ಕಲಾವಿದರು, ಸಿಬ್ಬಂದಿಯನ್ನು ಕನಿಷ್ಠ ಮೂರು ತಿಂಗಳು ಸೆಟ್‌ಗೆ ಕರೆಸುವಂತಿಲ್ಲ