Advertisement
ಅಂತೂ ಈ ಹೇಳಿಕೆ ಸಾಕಷ್ಟು ಚಿಂತನೆಗಳಿಗೆ ಒಂದು ವೇದಿಕೆ ಒದಗಿಸಿದೆ. ಈಗ ಇರುವುದು ನಾವು ಎಷ್ಟು ಗಂಟೆ ದುಡಿಯಬೇಕು ಎಂಬ ವಿಷಯ. ಇಲ್ಲಿ ಗಂಟೆ ಮತ್ತು ದುಡಿಯುವ ಶಬ್ದಗಳ ವ್ಯಾಖ್ಯೆ, ಅರ್ಥವೂ ವಿಶಾಲವಾಗಿದೆ. ನಾವು ಕಂಪೆನಿಯಲ್ಲಿ, ಅಥವಾ ವೇತನಕ್ಕಾಗಿ ದುಡಿಯುವ ದುಡಿಮೆಯ ಅವಧಿ ಒಂದು ಕಡೆಯಾದರೆ, ಮನೆಯಲ್ಲಿ ನಾವು ಮಾಡುವ ಕೆಲಸವಿರಬಹುದು, ಕಚೇರಿಯ ಕೆಲಸಕ್ಕೆ ಬೇಕಾದ ಹೋಂವರ್ಕ್ ಇರಬಹುದು…. ಇವೆಲ್ಲವೂ ದಾಖಲೆ ಗಳಿಗೆ ಸಿಗುವ ಸಮಯವೂ ಇಲ್ಲ, ಕೆಲಸವೂ ಅಲ್ಲ.
ಸಮಯಕ್ಕೆ ವಿಶೇಷವಾದ ಮಹತ್ವವಿದೆ. ನಮ್ಮ ದೇಶ ದಲ್ಲಿ ಸಮಯಕ್ಕೆ ಸರಿಯಾದ ಮಹತ್ವ ಸಿಗುತ್ತಿಲ್ಲ. ಒಂದು ಕಚೇರಿಗೆ ಯಾವುದಾದರೂ ಕೆಲಸ ಮಾಡಿಸಿ ಕೊಳ್ಳಲು ಹೋದರೆ ನಾಳೆ ಬಾ, ನಾಳೆ ಬಾ ಎಂಬ ಉತ್ತರ ಈಗಲೂ ಸಿಗುತ್ತದೆ. ಆದರೆ ಆ ನಾಳೆ ಬಾ ಎಂಬ ಒಂದು ಶಬ್ದ ಎಷ್ಟು ಸಮಯ ಹಾಗೂ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ ಎಂಬುದನ್ನು ಯಾರಾದರೂ ಊಹಿಸಿದ್ದಾರಾ? ಸಮಯಕ್ಕೆ ಮಹತ್ವ ಕೊಡುವವರು ಈ ರೀತಿಯ ಉತ್ತರ ಹೇಳಲು ಸಾಧ್ಯವೇ? ಆ ಕೆಲಸ ಮಾಡಿಸಿಕೊಳ್ಳಲು ಬರುವವ ದಿನವೇತನ ಆಧಾರದಲ್ಲಿ ದುಡಿಯುವವನಾಗಿದ್ದರೆ ಆತ ಎಷ್ಟೋ ದಿನಗಳ ಸಂಬಳವನ್ನು ಕಳೆದುಕೊಳ್ಳ ಬೇಕಾಗುತ್ತದೆ.
Related Articles
Advertisement
ಪೋಲಾಗುವ ಸಮಯ ಕೆಟ್ಟ ಚಿಂತನೆಗೆ ಕಾರಣನಾವು ಯಾವತ್ತೂ ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿದ್ದರೆ ಕೆಟ್ಟ ವಿಷಯಗಳ ಕಡೆಗೆ ಗಮನ ಹರಿಸಲು ಆಸ್ಪದವೇ ಇರುವುದಿಲ್ಲ. ಕೆಲಸವಿಲ್ಲದ ಮನಸ್ಸುಗಳನ್ನು ದೆವ್ವಗಳು ಆಳುತ್ತವೆ ಎಂಬ ಒಂದು ಮಾತೂ ಇದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯ, ಆರೋಗ್ಯ, ಜೀವನಶಿಸ್ತು ಮುಂತಾದವು ಅತೀ ಮುಖ್ಯವಾದವು. ಸಮಯವನ್ನು ನಾವು ಬಳಸುವುದಕ್ಕೆ ಪೂರಕವಾಗಿ ಅದು ನಮ್ಮೊಂದಿಗೆ ಹೊಂದಿಕೊಳ್ಳುತ್ತದೆ. ಎಷ್ಟೋ ಮಂದಿ ಯಾವುದಕ್ಕೂ ಪುರುಸೊತ್ತಿಲ್ಲ ಎಂದು ಹೇಳುವುದು ಸಾಮಾನ್ಯ. ಆದರೆ ಏನು ಕೆಲಸ ಮಾಡಲಿಕ್ಕಿದೆ ಎಂದು ಹೇಳಿದರೆ ನೆಟ್ಟಗೆ ಒಂದು ಉತ್ತರ ಸಿಗುವುದಿಲ್ಲ. ನಾವು ಪ್ರತೀ ದಿನ ಬಸ್ಸಿನಲ್ಲಿ ಹೆಚ್ಚು ಹೊತ್ತು ಸಂಚಾರ ಮಾಡು ವವರಾಗಿದ್ದರೆ ಆ ಸಮಯವನ್ನೂ ಸರಿಯಾಗಿ ವಿನಿಯೋಗಿಸಲು ಸಾಕಷ್ಟು ಅವಕಾಶಗಳಿವೆ. ನಾಳೆಯ ಕೆಲಸಕ್ಕೆ ಸಿದ್ಧತೆ, ಯಾರೊಂದಿಗಾದರೂ ದೂರವಾಣಿ ಮೂಲಕ ಮಾತನಾಡುವ ಕೆಲಸವಿ ದ್ದರೂ ಅದನ್ನು ಈ ಸಮಯದ ವೇಳೆಯಲ್ಲಿ ಮಾಡಿಕೊಳ್ಳಬಹುದು. ಇದನ್ನೂ ನಮ್ಮ ಕೆಲಸದ ಅವಧಿಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಾವು ಆ ಬಗ್ಗೆ ಚಿಂತಿಸುವುದೇ ಇಲ್ಲ. ಒತ್ತಡರಹಿತ ಕೆಲಸ ಈಗಿನ ಅಗತ್ಯ
ನಮ್ಮ ಬಹುತೇಕ ಕೆಲಸಗಳಲ್ಲೂ ಒತ್ತಡ ಹೆಚ್ಚು. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೆಡಲು ಇದು ಪ್ರಮುಖ ಕಾರಣ. ಕೆಲಸವನ್ನು ಒತ್ತಡ ರಹಿತವಾಗಿ ಮಾಡಿಕೊಳ್ಳಲು ನಾವು ಯೋಜನೆ ರೂಪಿಸಿಕೊಳ್ಳಬೇಕು. ಕೆಲಸದಲ್ಲಿ ಅತಿಯಾದ ಒತ್ತಡದಿಂದ ಉತ್ತಮ ಫಲಿತಾಂಶ ಸಿಗುವುದು ಸಾಧ್ಯವೇ ಇಲ್ಲ. ಯಾವ ತಜ್ಞರೂ ಒತ್ತಡದಲ್ಲಿ ಕೆಲಸ ಮಾಡಿ ಎಂದು ಹೇಳುವುದಿಲ್ಲ. ಕೆಲಸದ ಜತೆಯಲ್ಲಿ ನಾವು ಮನಸ್ಸು ಹಗುರ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲಸದ ಜತೆಯಲ್ಲಿ ಆರೋಗ್ಯದ ಕಡೆಗೆ ಗಮನ ಕೊಡುವುದು ಅತೀ ಅಗತ್ಯ. ನಾವು ದಿನದಲ್ಲಿ ಮನೆ, ಕಚೇರಿ ಎಂದು 15 ತಾಸುಗಳಿಗೂ ಹೆಚ್ಚು ದುಡಿದರೂ ಅದರಲ್ಲಿ ಒತ್ತಡವಿಲ್ಲದಂತೆ ನೋಡಿಕೊಂಡರೆ ಆಯಾಸ ನಮ್ಮ ಹತ್ತಿರ ಸುಳಿಯು ವುದೇ ಇಲ್ಲ. ಅತಿಯಾದ ಒತ್ತಡದಿಂದ 2 ತಾಸು ದುಡಿದರೂ ಅಯ್ಯಬ್ಟಾ ಸಾಕು ಎಂದನಿಸುತ್ತದೆ. ಆದ್ದ ರಿಂದ ಇಲ್ಲಿ ಕೆಲಸದ ಅವಧಿ ಮುಖ್ಯವಲ್ಲ, ಕೆಲಸದ ಶೈಲಿ ಹಾಗೂ ಕೆಲಸದ ವಾತಾವರಣ ಮುಖ್ಯ ಎಂದೇ ಹೇಳಬೇಕಾಗುತ್ತದೆ. ದುಡಿಯುತ್ತಾ ದುಡಿಯುತ್ತಾ ನಾವು ಮಾನವರಾಗಿಯೇ ಇರಬೇಕು ಹೊರತು ಯಂತ್ರಗಳಾಗಿ ಪರಿವರ್ತಿತರಾಗಬಾರದು. ಪರಿಶ್ರಮ ಅತ್ಯಗತ್ಯ
ಸಾಧಿಸಬೇಕೆಂದರೆ ಪರಿಶ್ರಮ ಅಗತ್ಯ. ಆ ಪರಿಶ್ರಮ ವನ್ನು ಗಂಟೆಗಳ ಮಿತಿಯಲ್ಲಿ ಅಳೆಯುವುದು ಸಲ್ಲದು. ದೈಹಿಕ ಹಾಗೂ ಮಾನಸಿಕ ವ್ಯಾಯಾಮದ ಜತೆಗೆ ಕೆಲಸ ಮಾಡಿದರೆ ಆಯಾಸ ಕಾಡುವುದಿಲ್ಲ. ನಾವೆಲ್ಲರೂ ದಿನನಿತ್ಯ ಮಾಡುವ ಕೆಲಸದ ಅವಧಿ ಹಾಗೂ ಪೋಲು ಮಾಡುವ ಸಮಯವನ್ನು ಲೆಕ್ಕ ಹಾಕಿ ನೋಡೋಣ. ಪೋಲು ಮಾಡುವ ಸಮ ಯದಿಂದ ಏನೇನು ಅನರ್ಥಗಳಾಗಿವೆ, ಮನಸ್ಸಿಗೆ ಎಷ್ಟು ಖುಷಿಯಾಗಿದೆ ಅಥವಾ ಬೇಸರವಾಗಿದೆ ಎಂಬುದನ್ನೂ ತಿಳಿದುಕೊಳ್ಳೋಣ. ಆಗ ಗೊತ್ತಾಗು ತ್ತದೆ ಕೆಲಸ ಮಾಡುತ್ತಲೇ ಇದ್ದರೆ ಖುಷಿ ಜಾಸ್ತಿ ಎಂದು. ಆದರೆ ಕೆಲಸದ ಅವಧಿ ಎಂದು ಕಂಪೆನಿಗಳು ಅತೀ ಯಾಗಿ ಒತ್ತಡ ಹೇರಿದರೆ ಅಥವಾ ನಾರಾಯಣ ಮೂರ್ತಿ ನೀಡಿದ ಸಲಹೆಯನ್ನು ಕಂಪೆನಿಗಳು ಜಾರಿಗೆ ತರಲು ಮುಂದಾದರೆ ಅದರಿಂದ ಯುವಶಕ್ತಿ ಇನ್ನಷ್ಟು ದುರ್ಬಲವಾಗುವುದು ಖಚಿತ. ಏನೇ ಆದರೂ ಯುವಶಕ್ತಿ ಸಮಯದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯ. ಕಳೆದು ಹೋದ ಸಮಯವು ಮತ್ತೆ ಸಿಗುವುದೇ ಇಲ್ಲ. ಜೀವನ ಎಂಬ ಸಣ್ಣ ಅವಧಿಯಲ್ಲಿ ಸಮಯಕ್ಕೆ ಅತೀ ಹೆಚ್ಚಿನ ಮಹತ್ವವಿದೆ. ಇದನ್ನರಿತು ನಾವು ದುಡಿದರೆ ಯಶಸ್ಸು ಕೈಹಿಡಿದೀತು. ಪುತ್ತಿಗೆ ಪದ್ಮನಾಭ ರೈ