ಕಲಬುರಗಿ: ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾಪ ಸಂಸ್ಥೆ ಮುಂದಿಲ್ಲ ಎಂದು ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ದಿ.ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ದ ಉಚಿತ ಡಯಾಲಿಸಿಸ್ ಕೇಂದ್ರದ ವೈದ್ಯಕೀಯ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡೀಸೆಲ್ ದರ ಹೆಚ್ಚಳ ಅವಲೋಕಿಸಿದರೆ ದರ ಹೆಚ್ಚಿಸಬೇಕು. ಆದರೆ ಸಂಸ್ಥೆಯ ಬಸ್ ಗಳಲ್ಲಿ ಸಂಚರಿಸುವರು ಬಡ ಹಾಗೂ ಮಧ್ಯಮ ವರ್ಗದವರಿರುತ್ತಾರೆ. ಕೊರೊನಾದಿಂದ ಅವರಿಗೂ ಹೊಡೆತ ಬಿದ್ದಿದೆ. ಹೀಗಾಗಿ ಸದ್ಯಕ್ಕಂತು ಬಸ್ ದರ ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಪ್ರಿಲ್ ಹೊತ್ತಿಗೆ ಬಸ್ ಸಂಚಾರ ಮೊದಲಿನ ಸ್ಥಿತಿಗೆ ಬರಲಿದೆ ಎಂಬುದಾಗಿ ದೃಢ ವಿಶ್ವಾಸ ಹೊಂದಲಾಗಿದೆ. ಎನ್ಇಕೆಎಸ್ಆರ್ ಟಿಸಿ ಯಲ್ಲಿ ಶೇ. 90ರಷ್ಟು, ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಶೇ. 80ರಷ್ಟು, ಕೆಎಸ್ಆರ್ಟಿಸಿಯಲ್ಲಿ ಶೇ. 75ರಷ್ಟು ಹಾಗೂ ಬಿಎಂಟಿಸಿಯಲ್ಲಿ ಶೇ. 60ರಷ್ಟು ಬಸ್ ಸಂಚಾರ ಮೊದಲಿನ ಸ್ಥಿತಿಗೆ ಬಂದಿದೆ. ಬಿಎಂಟಿಸಿಯಲ್ಲೇ ದಿನಕ್ಕೆ 1.50 ಕೋ. ರೂ ನಷ್ಟವಾಗುತ್ತಿದೆ ಎಂದು ವಿವರಣೆ ನೀಡಿದರು.
ಮೂರು ಸಾವಿರ ಬಸ್ ನೀಡಿಕೆಗೆ ಪ್ರಸ್ತಾಪ: ಬರುವ ಬಜೆಟ್ ದಲ್ಲಿ ಸಾರಿಗೆ ಸಂಸ್ಥಗಳಿಗೆ ಮೂರು ಸಾವಿರ ಬಸ್ ಗಳನ್ನು ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಕಳೆದ ಬಜೆಟ್ ದಲ್ಲಿ ನಾಲ್ಕು ಸಾವಿರ ಬಸ್‌ಗಳ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಈಗಲೂ ಪರಿಸ್ಥಿತಿ ಮೊದಲಿನ ಸ್ಥಿತಿ ಬಂದಿಲ್ಲ. ಆದರೆ ಕೊರೊನಾ ದಿಂದ ಸಾರಿಗೆ ನೌಕರರ ಎರಡು ತಿಂಗಳ ಪೂರ್ಣ ಸಂಬಳ, ಇನ್ನೆರಡು ಅರ್ಧ ಹಾಗೂ ಇನ್ನೆರಡು ತಿಂಗಳು ಶೇ 25ರಷ್ಟು ಸೇರಿ ಒಟ್ಟಾರೆ 1760 ಕೋ ರೂ ಸರ್ಕಾರವೇ ನೀಡಿದೆ ಎಂದು ತಿಳಿಸಿದರು.
ಹಳೆಯ ಬಸ್‌ಗಳನ್ನು ಗುಜರಿಗೆ ಹಾಕುವ ಬದಲು ಅವುಗಳನ್ನು ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಹಾಗೂ ಮಹಿಳೆಯರು ಚಿಕ್ಕ ಮಕ್ಕಳಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೌಂಟರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಡಿಸಿಎಂ ಸವದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಸವ ಕಲ್ಯಾಣ ಇಲ್ಲವೇ ಸಿಂದಗಿ ಕ್ಷೇತ್ರದ ಉಪಚುನಾವಣೆಯಲ್ಲಿ ತಾವು ಅಭ್ಯರ್ಥಿಯಾಗುವ ಸುದ್ದಿ ಕೇವಲ ಊಹಾಪೋಹಗಳು ಎಂದು ವಿವರಣೆ ನೀಡಿದರು. ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎಂಎಲ್ ಸಿ ಬಿ.ಜಿ.ಪಾಟೀಲ ಸೇರಿ ಮುಂತಾದವರಿದ್ದರು.