ದಾವಣಗೆರೆ: ಬಿಜೆಪಿ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಮತ ಕೇಳುವುದಕ್ಕೆ ಯಾವುದೇ ಸಂಕೋಚವಿಲ್ಲ. ಏಕೆಂದರೆ ಅವರು ನಮ್ಮ ಧೀಮಂತ ನಾಯಕ. ಅಂತಹ ನಾಯಕರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಾಡುತ್ತಿದೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ರಾಹುಲ್ ಗಾಂಧಿ ಹೆಸರು ಹೇಳಿ ಮತ ಕೇಳಲಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಸವಾಲು ಹಾಕಿದರು.
ನಗರದ ಎಸ್‌ಜೆಎಂ ನಗರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ನಮ್ಮ ನಾಯಕ ನರೇಂದ್ರ ಮೋದಿಜೀ ಅಂತ ಗರ್ವದಿಂದ ಹೇಳಿಕೊಳ್ಳುತ್ತೇವೆ. ಅವರೇ ನಮ್ಮ ಮುಂದಿನ ಪ್ರಧಾನಿ ಅಂತ ಘೋಷಣೆ ಕೂಡ ಮಾಡಿದ್ದೇವೆ. ಆದರೆ ಕಾಂಗ್ರೆಸ್ಸಿಗರಿಗೆ ತಮ್ಮ ನಾಯಕರು, ನಾಯಕತ್ವ, ದೂರದೃಷ್ಟಿ ಹೇಳಿಕೊಳ್ಳುವಂತಹ ಯಾವುದೇ ವ್ಯಕ್ತಿ ಇಲ್ಲ ಎಂದು ಟೀಕಿಸಿದರು.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ನಾಯಕರು ನರೇಂದ್ರ ಮೋದಿಜಿ ಮತ್ತೂಮ್ಮೆ ಪ್ರಧಾನಿ ಆಗಬೇಕು ಎಂದು ಎದುರು ನೋಡುತ್ತಿದ್ದಾರೆ. ಆದರೆ ಯಾರೂ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಬಯಸುತ್ತಿಲ್ಲ. ನರೇಂದ್ರ ಮೋದಿಜಿ ಪ್ರಧಾನ ಮಂತ್ರಿಯಾದ ಮೇಲೆ ದೇಶದ ಸಾರ್ವಭೌಮತ್ವ, ಸಂವಿಧಾನ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ವಿದ್ಯಾವಂತ ಯುವತಿಯರು ಇಂದಿಗೂ ಮೋದಿ ಪರ ಇದ್ದಾರೆ. ಏಕೆಂದರೆ ಅವರು ದಿಟ್ಟತನದಿಂದ ತೆಗೆದುಕೊಂಡ ತ್ರಿವಳಿ ತಲಾಖ್ ರದ್ದತಿ ಕಾಯ್ದೆ ಇದಕ್ಕೆ ಕಾರಣ.
ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಮುದಾಯದ ಯುವತಿಯರು ಸಂಕಷ್ಟಕ್ಕೆ ಸಿಲುಕಿದ್ದರು. ಅವರಿಗೆಒಬ್ಬ ಸಹೋದರನಾಗಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯದ ಮುಸ್ಲಿಮರು ಬಿಜೆಪಿ, ಮೋದಿಜಿ ಅವರ ಪರ ಇದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಸ್ಲಿಮರ ಓಲೈಕೆ ಮಾಡಿಕೊಂಡು ಹಿಂದುಗಳ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಮಾಜಿ ಮೇಯರ್ ಅಜಯ್‌ಕುಮಾರ್ ಮಾತನಾಡಿದರು. ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಿಜಯ್, ರಾಜು, ಶಾರದಮ್ಮ, ಗೀತಾ, ಭಾಗ್ಯಮ್ಮ, ಗ್ಯಾರಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಹನುಮಂತು ಮತ್ತಿತರರು ಇದ್ದರು.