ಹುಣಸೂರು: ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ.,ನ ನೆರವಿನ ಬದಲು ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತೆ ಕಾರ್ಯಕ್ರಮ ರೂಪಿಸಿದ್ದಲ್ಲಿ ಮಾತ್ರ ರೈತನ ಉಳಿಗಾಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅಭಿಪ್ರಾಯಪಟ್ಟರು. ತಾಲೂಕಿನ ಬಿಳಿಕೆರೆ ಹೋಬಳಿ ಶಿರಿಯೂರು ಗ್ರಾಮದಲ್ಲಿ ರೈತರ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ರೈತರ ಅಭ್ಯುದಯಕ್ಕಾಗಿ ವೈದ್ಯನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವ ಹಾಗೂ ಬೆಂಬಲ ಬೆಲೆ ನೀಡುವುದನ್ನು ಬಿಟ್ಟು ಹಣಕಾಸಿನ ನೆರವು ನೀಡಿದರೆ ರೈತರು ಉದ್ಧಾರವಾಗಲ್ಲವೆಂದು ಟೀಕಿಸಿದರು. ರೈತ ಸಂಘ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಬಂದಿದ್ದು, ಕಳೆದ 40 ವರ್ಷಗಳಿಂದ ರೈತರ ಸಂಘಕ್ಕೆ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಚುಕ್ಕಿ ನಂಜುಂಡಸ್ವಾಮಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆಂದರು.
ಈ ರೈತಪರ ಸಂಘಟನೆ ಸೇರಿ ಮತ್ತಷ್ಟು ಸದೃಢಗೊಳಿಸಬೇಕು, ಕೆಲಸ ಕಾರ್ಯಗಳಿಗೆ ಹೋಗುವ ವೇಳೆ ರೈತರು ಹೆಗಲ ಮೇಲೆ ಹಸಿರು ಟವಲ್ ಹಾಕುವುದನ್ನು ಮರೆಯಬಾರದೆಂದರು. ತಾಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಗೌರವ ಅಧ್ಯಕ್ಷ ತಟ್ಟೆಕೆರೆರಾಮೇಗೌಡ ಮಾತನಾಡಿದರು.
ಹೊಸೂರು ಮಣಿ, ತಂಬಾಕು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣೇಗೌಡ, ಮುಖಂಡರಾದ ಉಂಡವಾಡಿಚಂದ್ರೇಗೌಡ, ಕೃಷ್ಣಪ್ಪ, ದೇವಪ್ಪನಾಯಕ, ಜಗದೀಶ್, ಸಹದೇವ, ಪುಟ್ಟರಾಮೇಗೌಡ, ಸೊಮಣ್ಣ, ತಮ್ಮಣ್ಣ, ರವಿ, ಈರಮ್ಮ, ರಮೇಶ, ಬಸವಣ್ಣ, ಮಹದೇವು ಮತ್ತಿತರರಿದ್ದರು.
ಪದಾಧಿಕಾರಿಗಳ ಆಯ್ಕೆ: ಶಿರಿಯೂರು ಗ್ರಾಮ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ, ಗೌರವ ಅಧ್ಯಕ್ಷರಾಗಿ ಬಸವರಾಜೇಗೌಡ, ಸೋಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಶಿವಕುಮಾರ್,ಉಪಾಧ್ಯಕ್ಷರಾಗಿ ಲೋಕೇಶ್, ರವಿಕುಮಾರ್, ಮಹದೇವು, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್‌ಕುಮಾರ್, ರಾಘವೇಂದ್ರ, ಬಸವರಾಜು, ಖಜಾಂಚಿಯಾಗಿ ಜಯಣ್ಣ, ಸಂಚಾಲಕರಾಗಿ ಸಂಜಯ್, ವಿನಯಕುಮಾರ್ ಆಯ್ಕೆಮಾಡಿ ಆದೇಶ ಪತ್ರವನ್ನು ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ವಿತರಿಸಿದರು.