ಬಾಗಲಕೋಟೆ: ಕೋವಿಡ್ ಮಹಾಮಾರಿ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಸರ್ಕಾರ ಕಡ್ಡಾಯಗೊಳಿಸಿದ್ದು, ಶನಿವಾರ ಒಂದೇ ದಿನ ನಗರಸಭೆ ಅಧಿಕಾರಿಗಳು ನಗರದಲ್ಲಿ 3600 ರೂ. ದಂಡ ವಸೂಲಿ ಮಾಡಿದ್ದಾರೆ. ಹೌದು, ಜನರಿಗಾಗಿ ಎಷ್ಟೇ ಕಾನೂನು-ನಿಯಮ ಜಾರಿಗೊಳಿಸಿದರೂ ಅದರಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಜನರು ಮಾಡುತ್ತಲೇ ಇರುತ್ತಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೋವಿಡ್ ಎಂಬ ವೈರಸ್ ದೂರ ಇಡಬಹುದು ಎಂಬ ಸರ್ಕಾರದ ಕಾಳಜಿಗೆ ಬಹುತೇಕರು ಕೈಜೋಡಿಸಿದ್ದಾರೆ. ಆದರೂ ಕೆಲವರು, ಕೋವಿಡ್ ನಮಗೆಲ್ಲಿ ಬರುತ್ತದೆ ಎಂಬ ಅಸಡ್ಡೆಯಲ್ಲೇ ತಿರುಗುತ್ತಿದ್ದು, ಅಂತಹವರಿಗೆ ನಗರಸಭೆ ದಂಡ ಪ್ರಯೋಗ ಶುರು ಮಾಡಿದೆ.
ನಗರದಲ್ಲಿ 198 ಜನರಿಗೆ ದಂಡ: ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ನಗರ, ಪೊಲೀಸರಿಗೆ ಅಧಿಕಾರವಿದ್ದು, ನಗರಸಭೆಯಿಂದ ಹಳೆಯ ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಸೇರಿದಂತೆ ಈ ವರೆಗೆ ಒಟ್ಟು 198 ಜನರಿಗೆ ದಂಡ ವಿಧಿಸಿ, ಒಟ್ಟು 19,800 ರೂ. ವಸೂಲಿ ಮಾಡಲಾಗಿದೆ. ರವಿವಾರ ಒಂದೇ ದಿನ ವಿದ್ಯಾಗಿರಿ ಹಾಗೂ ನವನಗರದಲ್ಲಿ ಒಟ್ಟು 36 ಜನರಿಗೆ ದಂಡ ವಿಧಿಸಿ, 3600 ದಂಡದ ಶುಲ್ಕ ವಸೂಲಿ ಮಾಡಲಾಗಿದೆ. ನಗರಸಭೆಯ ಪೌರಾಯುಕ್ತ ಮುನಿಶಾಮಪ್ಪ, ಪರಿಸರ ಅಭಿಯಂತರ ಹನಮಂತ ಕಲಾದಗಿ ಸೇರಿದಂತೆ ನಗರಸಭೆಯ ಇತರ ಸಿಬ್ಬಂದಿ, ವಿದ್ಯಾಗಿರಿ ಸೇರಿದಂತೆ ನಗರದ ಹಲವೆಡೆ ತಪಾಸಣೆ ನಡೆಸುತ್ತಿದ್ದಾರೆ.
ವಿದ್ಯಾಗಿರಿ ವೃತ್ತದಲ್ಲಿ ನಗರಸಭೆ ಅಧಿಕಾರಿಗಳು, ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕಾರ್ಯ ನಡೆಸಿದರು. ಈ ವೇಳೆ ಜನರು, ತಪ್ಪಿಸಿಕೊಂಡು ಹೋಗುವ ಪ್ರಯತ್ನಗಳೂ ನಡೆದಿದ್ದವು. ಮಾಸ್ಕ್ ಹಾಕದವರನ್ನು ತಡೆದು, ಕೋವಿಡ್ ಬಂದ್ರೆ ಸಾಯುತ್ತೀರಿ. ನೀವಲ್ಲದೇ, ನಿಮ್ಮ ಮನೆಯವರನ್ನು, ನಿಮ್ಮೊಂದಿಗೆ ತಿರುಗಾಡು ಜನರಿಗೂ ತೊಂದರೆ ಆಗುತ್ತದೆ. ಈಗ ಕೇವಲ 100 ರೂ. ದಂಡ ಹಾಕುತ್ತೇವೆ. ಮತ್ತೆ ಮಾಸ್ಕ್ ಹಾಕದೇ ರಸ್ತೆಗೆ ಬಂದರೆ ಹೆಚ್ಚಿನ ದಂಡ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರು.
ಕಾಲ್ಕಿತ್ತ ಜನ !: ವಿದ್ಯಾಗಿರಿ ವೃತ್ತದಲ್ಲಿ ನಗರಸಭೆ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದ್ದಾರೆ ಎಂದು ತಿಳಿದ ಜನರು, 22ನೇ ಕ್ರಾಸ್‌ನಲ್ಲೇ ಹೊರಳಿ, ಕಲಾದಗಿ ಮುಖ್ಯ ರಸ್ತೆಯ ಮೂಲಕ ಪುನಃ 17ನೇ ಕ್ರಾಸ್ ಮೂಲಕ ಹಾಯ್ದು ಕಾಲೇಜು ರಸ್ತೆಗೆ ಸೇರುತ್ತಿದ್ದರು. ಇನ್ನು ಕೆಲವರು, ಸರ್ಕಲ್ ನಲ್ಲಿ ಬೈಕ್, ಪಾದಚಾರಿ ವ್ಯಕ್ತಿಗಳನ್ನು ಪೌರ ಕಾರ್ಮಿಕರು ತಡೆಯಲು ಮುಂದಾದಾಗ ಓಡಿ ಹೋಗುತ್ತಿದ್ದರು. ಜೀವಕ್ಕಾಗಿ ಮಾಸ್ಕ್ ಧರಿಸಿ ಎಂದು ಹೇಳಿದರೆ, ಇನ್ನೂ ಕೆಲವರು ಸರ್ ವಾಕಿಂಗ್ ಬಂದಿದ್ದೇನೆ. ನಮ್ಮ ಮನೆ ಇಲ್ಲೇ ಇದೆ. ಹೋಗುತ್ತೇನೆ ಬಿಡಿ, ಮಾಸ್ಕ್ ಮರೆತು ಬಂದೆ ಎಂದೆಲ್ಲ ಸಬೂಬು ಹೇಳಿ ದಂಡದಿಂದ
ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಕೋವಿಡ್ ವೈರಸ್‌ನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಇದು ಜನರ ಆರೋಗ್ಯದ ದೃಷ್ಟಿಯಿಂದ ಮಾಡಿರುವುದೇ ಹೊರತು, ಅಧಿಕಾರಿಗಳಿಗಾಗಿ ಅಲ್ಲ. ನಾವೂ ಸಹಿತ ನಿತ್ಯ ಮಾಸ್ಕ್ ಹಾಕಿಕೊಂಡೇ ಕೆಲಸ ಕಾರ್ಯ ನಿರ್ವಹಿಸುತ್ತಿದ್ದೇವೆ. ನಗರದ ಎಲ್ಲ ಜನರು, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಂಚರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸುವುದು ಶತಸಿದ್ಧ.
ಮುನಿಶಾಮಪ್ಪ. ನಗರಸಭೆ ಪೌರಾಯಕ
ನಗರಸಭೆಯಿಂದ ಪೌರಾಯುಕ್ತರು ಸಹಿತ ಎಲ್ಲ ಅಧಿಕಾರಿ-ಸಿಬ್ಬಂದಿ ಗಳು ನಗರದಲ್ಲಿ ರೌಂಡ್ಸ್ ಹಾಕುತ್ತಿದ್ದೇವೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದು, ರವಿವಾರ ಒಂದೇ ದಿನ 36 ಜನರಿಗೆ ದಂಡ ಹಾಕಿ, 3600 ವಸೂಲಿ ಮಾಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ.
ಹನಮಂತ ಕಲಾದಗಿ, ನಗರಸಭೆ ಪರಿಸರ ಅಭಿಯಂತರ
ಶ್ರೀಶೈಲ ಕೆ. ಬಿರಾದಾರ