Advertisement

ಅದ್ದೂರಿ ಬರ್ತ್‌ಡೇ ನಿಷಿದ್ಧ

12:44 PM Oct 25, 2021 | Team Udayavani |

ಸಿಂಧನೂರು: ಬಡ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಆಶ್ರಯ ಕಲ್ಪಿಸುವ ಸರ್ಕಾರಿ, ಅನುದಾನಿತ ಇಲ್ಲವೇ ಖಾಸಗಿ ಪಾಲನಾ ಸಂಸ್ಥೆಗಳಲ್ಲಿ ಅದ್ಧೂರಿ ಬರ್ತ್ ಡೇ ಆಯೋಜಿಸುವ ಕ್ರೇಜ್‌ಗೆ ಕಡಿವಾಣ ಹಾಕುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಡಕ್‌ ಸೂಚನೆ ಹೊರಡಿಸಿದೆ.

Advertisement

ಮಕ್ಕಳ ಮಧ್ಯೆ ಜನ್ಮದಿನದ ಸಂಭ್ರಮದ ನೆಪದಲ್ಲಿ ಮನೆ ಮಾಡಬಹುದಾದ ಖನ್ನತೆ ತಪ್ಪಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಾಗುವ ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲು ಬರ್ತ್‌ಡೇ ಆಯೋಜಕರನ್ನು ನಿರ್ಬಂಧಿಸಲು ಸೂಚಿಸಲಾಗಿದೆ. ­

ಏಕೆ ಈ ಕ್ರಮ?

ಸರ್ಕಾರಿ, ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಹೆಚ್ಚಾಗಿ ಬಡವರ ಮಕ್ಕಳೇ ಆಶ್ರಯ ಪಡೆದಿರುತ್ತಾರೆ. ಇನ್ನು ಖಾಸಗಿ ಹಾಗೂ ಸರ್ಕಾರಿ ಬಾಲಮಂದಿರಗಳಲ್ಲಿ ತುಳಿತುಕ್ಕೊಳಗಾದವರು, ಕಾನೂನು ಸಂಘರ್ಷಕ್ಕೆ ಒಳಪಟ್ಟ, ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ, ಬಾಲ್ಯ ವಿವಾಹಕ್ಕೆ ಒಳಗಾದ, ಅತ್ಯಾಚಾರಕ್ಕೆ ಗುರಿಯಾದ, ತಂದೆ ಮತ್ತು ತಾಯಿಯಿಂದ ತಿರಸ್ಕರಿಸಲ್ಪಟ್ಟ, ತಂದೆ-ತಾಯಿಯಿಲ್ಲದ ಅನಾಥರು ಸೇರಿದಂತೆ ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಮಕ್ಕಳೇ ಇರುತ್ತಾರೆ. ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯಮಂಡಳಿ ಆದೇಶದ ಪ್ರಕಾರವೇ ಇಂತಹ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಲಾಗಿರುತ್ತದೆ. ಈ ಎಲ್ಲ ವರ್ಗದ ಮಕ್ಕಳು ಸಮಾಜದಿಂದ ವಂಚಿತರಾಗಿ, ಮನನೊಂದವರಾಗಿಯೇ ಇಲ್ಲಿಗೆ ಬಂದಿರುತ್ತಾರೆ. ಅಂಥವರ ಸಮ್ಮುಖದಲ್ಲಿ ಅದ್ಧೂರಿ ಬರ್ತ್‌ಡೇ ಆಯೋಜನೆ ಸರಿಯಲ್ಲ ಎಂಬ ಕಾರಣಕ್ಕೆ ಈ ಸೂಚನೆ ನೀಡಲಾಗಿದೆ.

­ಮಕ್ಕಳ ಮೇಲೆ ಪರಿಣಾಮ ಸಾಧ್ಯತೆ

Advertisement

ಇಂತಹ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು, ಮಠಾಧೀಶರು ಸೇರಿದಂತೆ ಇತರರು ಬರ್ತ್‌ಡೇಗಳನ್ನು ಆಯೋಜಿಸಿ, ಕೇಕ್‌ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದಾಗ ಅಲ್ಲಿನ ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ತಾವು ಕೂಡ ಇಂತಹ ಆಚರಣೆಯೊಂದಿಗೆ ಹೋಲಿಕೆ ಮಾಡಿಕೊಂಡು, ತಮಗೂ ಈ ರೀತಿ ಆಚರಿಸಿಕೊಳ್ಳಲು ಸಾಧ್ಯವಾಗದಿರುವುದನ್ನು ಗಮನಿಸಿ ನೊಂದುಕೊಳ್ಳುವ ಅಪಾಯವಿರುತ್ತದೆ. ಮಕ್ಕಳಿಗೆ ಇಂತಹ ಬೆಳವಣಿಗೆ ಅಘಾತ ಬೀರುವ ಸಾಧ್ಯತೆ ತಪ್ಪಿಸಲು ಇಂತಹ ಆಚರಣೆಗಳಿಗೆ ಅವಕಾಶ ನೀಡಬಾರದೆಂಬ ತೀರ್ಮಾನಕ್ಕೆ ಮಕ್ಕಳ ಸಂರಕ್ಷಣಾ ಇಲಾಖೆ ಬಂದಿದೆ. ನೊಂದ ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದೇ ಆಗಿರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

ಖಿನ್ನತೆ ತಪ್ಪಿಸಲು ಕ್ರಮ ಅನಿವಾರ್ಯ

ಕುಟುಂಬದೊಂದಿಗೆ ಬೇರ್ಪಟ್ಟು ಇಲ್ಲವೇ ವಂಚಿತರಾದ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಕುಟುಂಬದೊಂದಿಗೆ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳ ಸಂರಕ್ಷಣಾ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಆದೇಶಿಸಿದೆ.

ಈ ಬಗ್ಗೆ ಇಲಾಖೆಯಿಂದ ಆದೇಶ ಬಂದಿದೆ. ಈ ಮೊದಲು ಇದನ್ನು ನಿರ್ಬಂಧಿಸಲಾಗಿತ್ತು. ಈಗ ಮತ್ತೂಮ್ಮೆ ಆದೇಶ ಹೊರಡಿಸಿದ್ದರ ಬಗ್ಗೆ ಗೊತ್ತಾಗಿದ್ದು, ಮುನ್ನೆಚ್ಚರಿಕೆ ನೀಡಲಾಗುವುದು. -ಸುದೀಪ್‌ಕುಮಾರ್‌ ಸುಂಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ,

ಸಿಂಧನೂರು­ ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next