ನವದೆಹಲಿ: ದೇಶದಲ್ಲಿ ಯುವಕರು ಸರ್ಕಾರಿ ಉದ್ಯೋಗದ ಅವಕಾಶದಿಂದ ವಂಚಿತರಾಗುತ್ತಿದ್ದು, ಅವರು ಇನ್ನೆಷ್ಟು ದಿನ ತಾಳ್ಮೆಯಿಂದ ಇರಬೇಕಾಗಿದೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ವರುಣ್ ಗಾಂಧಿ ಟೀಕಿಸಿದ್ದಾರೆ.
ಇದನ್ನೂ ಓದಿ:ಅಧಿಕಾರಕ್ಕೆ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ
ಭಾರತದಲ್ಲಿ ಗ್ರಾಮೀಣ ಪ್ರದೇಶದ ಯುವಕರೇ ಹೆಚ್ಚಾಗಿ ಸರ್ಕಾರಿ ಉದ್ಯೋಗವನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಸರ್ಕಾರ ರಕ್ಷಣಾ, ಪೊಲೀಸ್, ರೈಲ್ವೆ ಅಥವಾ ಶಿಕ್ಷಣ ಇಲಾಖೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗಿಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ.
ಮೊದಲೇ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಒಂದು ವೇಳೆ ಸರ್ಕಾರಿ ಉದ್ಯೋಗದ ಅವಕಾಶ ಬಂದರೂ ಅದರ ಜತೆಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುತ್ತದೆ. ಒಂದು ವೇಳೆ ಪರೀಕ್ಷೆ ಬರೆದರೂ ವರ್ಷಗಟ್ಟಲೇ ಫಲಿತಾಂಶವೇ ಪ್ರಕಟವಾಗುವುದಿಲ್ಲ ಅಥವಾ ಹಗರಣಗಳಿಂದ ಪರೀಕ್ಷೆಯನ್ನೇ ರದ್ದುಪಡಿಸುತ್ತಾರೆ.
ದೇಶದಲ್ಲಿ ಸುಮಾರು 1.25 ಕೋಟಿ ಯುವಕರು ಕಳೆದ ಎರಡು ವರ್ಷಗಳಿಂದ ರೈಲ್ವೆ ಗ್ರೂಪ್ ಡಿ ಕೆಲಸದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸೇನಾ ನೇಮಕಾತಿಯಲ್ಲಿಯೂ ಇದೇ ರೀತಿ ಆಗಿದೆ. ಹೀಗಾಗಿ ದೇಶದ ಯುವಕರು ಎಲ್ಲಿಯವರೆಗೆ ತಾಳ್ಮೆಯಿಂದ ಇರಬೇಕಾಗಿದೆ ಎಂದು ವರುಣ್ ಗಾಂಧಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 17 ಪರೀಕ್ಷೆಗಳು ರದ್ದಾಗಿವೆ. ಆದರೆ ಈವರೆಗೂ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿಲ್ಲ ಎಂದು ವರುಣ್ ಗಾಂಧಿ ಅಸಮಧಾನವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಆರ್ಥಿಕ ನೀತಿ ಮತ್ತು ಉದ್ಯೋಗದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಸಂಸದ ವರುಣ್ ಗಾಂಧಿ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರೈತ ಕಾಯ್ದೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೂ ವರುಣ್ ಗಾಂಧಿ ಬೆಂಬಲ ಘೋಷಿಸಿದ್ದರು.