Advertisement

ಕೈತಪ್ಪಿದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ

10:54 AM Jun 08, 2019 | Team Udayavani |

ಜೊಯಿಡಾ: ಪ್ರಸಕ್ತ ವರ್ಷದಿಂದ ಪ್ರಾಯೋಗಿಕವಾಗಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿರುವ ಸರಕಾರದ ಯೋಜನೆಯಲ್ಲಿ ಜೋಯಿಡಾ ತಾಲೂಕಿಗೆ ಅನ್ಯಾಯವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜಿಪಂ ಸದಸ್ಯ ಸಂಜಯ ಹಣಬರ ಹೇಳಿದರು.

Advertisement

ಅವರು ಕೆಡಿಪಿ ಸಭೆಯಲ್ಲಿ ಶಿಕ್ಷಣದ ವಿಷಯ ಪ್ರಸ್ತಾಪಗೊಂಡ ಸಂದರ್ಭದಲ್ಲಿ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವರು ಇಂಗಿಷ್‌ ಮಾಧ್ಯಮ ಶಾಲೆಗಳ ಅಗತ್ಯತೆ ಕುರಿತು ಮಾಹಿತಿ ನೀಡುವಂತೆ ಡಿಡಿಪಿಐಗೆ ತಿಳಿಸಿದಾಗ ಜೋಯಿಡಾ ತಾಲೂಕಿನಿಂದ ಮಾಹಿತಿ ನೀಡಲು ವಿಳಂಬವಾದ ಪರಿಣಾಮ ಜೋಯಿಡಾ ತಾಲೂಕು ಇಂಗ್ಲಿಷ ಮಾಧ್ಯಮ ಶಾಲೆಯಿಂದ ವಂಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ 133 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೊರತೆ ಇದ್ದು, ತಾಲೂಕಿನ 12 ಸರಕಾರಿ ಪ್ರೌಢ ಶಾಲೆಗಳ ಪೈಕಿ 9 ಶಾಲೆಗಳಲ್ಲಿ ಕಾಯಂ ಮುಖ್ಯ ಶಿಕ್ಷಕರಿಲ್ಲ, ಸಹಶಿಕ್ಷಕರ ಕೊರತೆ ಕೂಡಾ ಇದೆ. ಇದು ಪ್ರೌಢಶಾಲೆಗಳ ಗುಣಮಟ್ಟದ ಶಿಕ್ಷಕಣಕ್ಕೆ ಅಡ್ಡಿಯಾಗುತ್ತಿದೆ ಎಂದರು.

ತಾಲೂಕು ಕೇಂದ್ರ ಭಾಗದಲ್ಲಿರುವ ಶ್ರೀರಾಮ ಪ್ರೌಢಶಾಲೆ ಈ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದು, ಗಣಿತದಲ್ಲಿ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗ‌ಳು ಅನುತ್ತೀರ್ಣರಾಗಿ ಕಳಪೆಮಟ್ಟದ ಫಲಿತಾಂಶ ನೀಡಿದೆ. ಇಲ್ಲಿ ಇದಕ್ಕೆ ಕಾರಣ ಯಾರು ಎಂದು ಸಭೆಯಲ್ಲಿ ಪ್ರಶ್ನಿಸಿದ ಜನಪ್ರತಿನಿಧಿಗಳು, ಸಭೆಗೆ ಹಾಜರಿದ್ದ ತಾಲೂಕು ಶಿಕ್ಷಣ ಸಮನ್ವಯ ಅಧಿಕಾರಿ ರೆಹಮಾನರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಪರಿಶೀಲಿಸಿ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಕ್ರಮಕೂಗೊಳ್ಳುವಂತೆ ಸೂಚಿಸಲಾಯಿತು.

ಅತಿಥಿ ಶಿಕ್ಷಕರ ನೇಮಕಾತಿಯಲ್ಲೂ ಬಿಇಒ ಕಾರ್ಯಾಲಯ ತಾರತಮ್ಯ ಮಾಡುತ್ತಿದ್ದು, 8ನೇ, 10ನೇ ತರಗತಿ ಪಾಸಾದವರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಂಡು ಬಿ.ಎ, ಬಿ.ಕಾಂ, ಡಿ.ಎಡ್‌, ಬಿ.ಎಡ್‌, ಆದವರನ್ನು ನಿರ್ಲಕ್ಷಿಸುತ್ತಿದೆ ಎಂದರು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾಮುಖ್ಯತೆ ನೀಡುವುದಕ್ಕಿಂತ ವಿದ್ಯಾರ್ಹತೆಗೆ ಪ್ರಾಶಸ್ತ್ಯ ನೀಡುವಂತೆ ಕುಂಬಾರವಾಡಾ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕಾಮತ್‌ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳಿದರು. ಈ ಬಗ್ಗೆ ಸಭೆಯಲ್ಲಿ ಠರಾವು ಕೈಗೊಳ್ಳಲಾಯಿತು.

Advertisement

ಕಾರ್ಟೋಳ್ಳಿ ಶಾಲೆಯಲ್ಲಿ 70 ಮಕ್ಕಳಿಗೆ ಇಬ್ಬರು ಶಿಕ್ಷಕರಿದ್ದು, ಹೆಚ್ಚಿನ ಗೌರವ ಶಿಕ್ಷಕರ ನೇಮಕ ಮಾಡುವಂತೆ ಗ್ರಾಪಂ ಸದಸ್ಯ ದಿಗಂಬರ ದೇಸಾಯಿ ಒತ್ತಾಯಿಸಿದರು.

ತಾಲೂಕಿನಲ್ಲಿ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ಜೊಯಿಡಾ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ದೂರು ಜನಪ್ರತಿನಿಧಿಗಳಿಂದ ಕೇಳಿಬಂತು. ತಾಲೂಕಿನ ಗುಂದ ಗ್ರಾಮದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿದ್ದು, ತಾಲೂಕು ಆರೋಗ್ಯ ಇಲಾಖೆ ನಿರ್ಲಕ್ಷದಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಪಂ. ಸದಸ್ಯರು ದೂರಿದರು.

ತಾಲೂಕಿನ ಡಿಗ್ಗಿ ಭಾಗಕ್ಕೆ ಸಂಪರ್ಕ ಕಲ್ಪಿಸಲು ಕಾಳಿ ನದಿಗೆ ಕಟ್ಟಲಾಗುತ್ತಿರುವ ಸೇತುವೆ ಪೂರ್ಣಗೊಳಿಸಲು, ತೇರಾಳಿ ಭಾಗದ ಭಾಮಣೆ, ಶಿರೋಳಿ ಗ್ರಾಮಗಳಲ್ಲಿ ವಿದ್ಯುತ್‌ ಟ್ರಾನ್ಸಫಾರ್ಮರ್‌ ಅಳವಡಿಸಲು ಹಾಗೂ ತಾಲೂಕಿನಲ್ಲಿ ಡಾಂಬರಿಕರಣ ಪೂರ್ಣಗೊಳ್ಳದೇ ಉಳಿದಿರುವ ತೇರಾಳಿ, ಮಾಸೆತ, ನೀಗುಂಡಿ ರಸ್ತೆಗಳ ಕೆಲಸ ಪೂರ್ಣಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ತಾಪಂ ಅಧ್ಯಕ್ಷೆ ನವರ್ದಾ ಪಾಟ್ನೆಕರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಜಯ ಪಂಡಿತ, ಇಒ ಪ್ರಕಾಶ ಹಾಲಮ್ಮನವರ, ಜಿಪಂ ಸದಸ್ಯರಾದ ರಮೆಶ ನಾಯ್ಕ, ರಾಮನಗರ ಭಾಗದ ಸಂಜಯ ಹಣಬರ, ತಾ.ಪಂ ಸದಸ್ಯರು, ಅಧಿಕಾರಿಗಳು, ಗ್ರಾಪಂ ಪಿ.ಡಿ.ಒಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next