ಕಲಬುರಗಿ: ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಕಾರಣ ಉಚಿತ ಊಟ ನೀಡಬೇಕೆಂಬ ಸರ್ಕಾರದ ಆದೇಶ ಬುಧವಾರ ನಗರದಲ್ಲಿ ಜಾರಿಯಾಗಲಿಲ್ಲ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬುಧವಾರ ಮೇ 24ರಿಂದ ನಿರ್ಗತಿಕರು, ಬಡವರಿಗೆ ಇಂದಿರಾ ಕ್ಯಾಂಟೀನ್‌ದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಮೂರು ಹೊತ್ತು ಉಚಿತ ಊಟ ನೀಡುವ ಕುರಿತು ಸರ್ಕಾರ ಆದೇಶಿಸಿತ್ತು. ಆದರೆ, ಮಹಾನಗರ ಪಾಲಿಕೆ ಕಳೆದ 19 ತಿಂಗಳಿನಿಂದ 7.5 ಕೋಟಿ ರೂ. ಹಣವನ್ನು ಗುತ್ತಿಗೆದಾರರಿಗೆ ಕೊಡದೇ ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ಗುತ್ತಿಗೆದಾರರು ಸರ್ಕಾರದ ಆದೇಶವಿದ್ದರೂ ಜನರಿಗೆ ಉಚಿತ ಊಟ ಪೂರೈಕೆ ಮಾಡಲಿಲ್ಲ.
ಕೇಂದ್ರ ಬಸ್ ನಿಲ್ದಾಣ, ಜಿಮ್ಸ್ ಆಸ್ಪತ್ರೆ ಆವರಣ, ಮಹಾನಗರ ಪಾಲಿಕೆ ಆವರಣ ಸೇರಿ ನಗರದಲ್ಲಿರುವ ಏಳು ಇಂದಿರಾ ಕ್ಯಾಂಟೀನ್‌ಗಳಲ್ಲೂ ಬೆಳಗ್ಗೆ ಉಪಹಾರ, ಮಧ್ಯಾಹ್ನದ ಊಟವನ್ನು ಹಣ ಪಡೆದೇ ನೀಡಲಾಯಿತು. ಮಧ್ಯಾಹ್ನದ ವೇಳೆ ಈ ವಿಷಯ ತಿಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಸರ್ಕಾರಿ ಆದೇಶದ ಅನ್ವಯ ಕೂಲಿ ಕಾರ್ಮಿಕರು, ವಲಸಿಗರು ಮತ್ತು ದುರ್ಬಲ ವರ್ಗದವರಿಗೆ ಉಚಿತವಾಗಿ ಊಟ ನೀಡಬೇಕೆಂದು ಪಾಲಿಕೆ ಆದೇಶ ಪ್ರತಿಯನ್ನು ಕ್ಯಾಂಟೀನ್‌ಗಳಿಗೆ ಅಂಟಿಸಿದರು. ಅಲ್ಲದೇ, ಉಚಿತವಾಗಿ ಊಟ ನೀಡಲಾಗುತ್ತಿದೆ ಎನ್ನುವ ಸಾರ್ವಜನಿಕ ಪ್ರಕಟಣೆಯ ಪ್ರತಿಯನ್ನು ಕಾಂಟೀನ್‌ಗಳಲ್ಲಿ ಲಗತ್ತಿಸಿದರು. ಇಂದಿನಿಂದ ಉಚಿತ: ಬುಧವಾರ ಉಚಿತವಾಗಿ ಊಟ ಕೊಡುತ್ತಿಲ್ಲ ಎನ್ನುವ ವಿಷಯ ತಿಳಿದ ತಕ್ಷಣವೇ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಗುತ್ತಿಗೆದಾರ ಬಸಲಿಂಗಪ್ಪ ಸೇರಿ ಕ್ಯಾಂಟೀನ್ ನಿರ್ವಾಹಕರೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಆದೇಶ ಪಾಲಿಸಿ ಉಚಿತವಾಗಿ ನೀಡುವ ಬಗ್ಗೆ ಸೂಚಿಸಿದರು.
ಬಾಕಿ ಹಣ ಪಾವತಿಸುವಂತೆ ಗುತ್ತಿಗೆದಾರರು ಪಟ್ಟು ಹಿಡಿದಿದ್ದರಿಂದ ಪಾಲಿಕೆ ಆಯುಕ್ತರು ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು. ಹೀಗಾಗಿ ಗುರುವಾರ (ಮೇ 14) ದಿಂದ ಮೂರು ಹೊತ್ತು ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಊಟ ಪೂರೈಕೆ ಆಗಲಿದೆ. ಈ ಕುರಿತು ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಮತ್ತು ಗುತ್ತಿಗೆದಾರ ಬಸಲಿಂಗಪ್ಪ ಇಬ್ಬರೂ “ಉದಯವಾಣಿ’ಗೆ ಖಚಿತ ಪಡಿಸಿದರು. ಕಳೆದ 19 ತಿಂಗಳಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆ ಹಣವನ್ನು ಮಹಾನಗರ ಪಾಲಿಕೆ ಪಾವತಿಸಿಲ್ಲ. ಇದುವರೆಗೆ ಅಂದಾಜು 7.5 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ.
ಇಷ್ಟೊಂದು ಹಣ ಬಾಕಿ ಉಳಿಸಿಕೊಂಡರೆ ನಿರ್ವಹಣೆ ಮಾಡುವುದಾರೂ ಹೇಗೆ? ಆದ್ದರಿಂದ ಬುಧವಾರ ಉಚಿತವಾಗಿ ಊಟ ನೀಡಲಿಲ್ಲ ಎಂದು ಗುತ್ತಿಗೆದಾರ ಬಸಲಿಂಗಪ್ಪ ಹೇಳಿದರು. ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ ಮಾಡಿದಾಗ ಬಾಕಿ ಲಭಿಸುವ ಭರವಸೆ ಸಿಕ್ಕಿದೆ. ಎಷ್ಟು ಬಿಡುಗಡೆ ಮಾಡುತ್ತರೋ ಗೊತ್ತಿಲ್ಲ. ಆದರೂ, ಗುರುವಾರದಿಂದ ಉಚಿತವಾಗಿ ಊಟ ನೀಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.