Advertisement

ಉಚಿತ ಲ್ಯಾಪ್‌ಟಾಪ್‌ ಇಲ್ಲ?

06:00 AM Oct 10, 2018 | |

ಬೆಂಗಳೂರು: ಸರಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಲ್ಯಾಪ್‌ಟಾಪ್‌ ಮರೀಚಿಕೆ! ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲು ಅನುದಾನ ಇಲ್ಲ.  ಅನುದಾನ ಒದಗಿಸುವಂತೆ ಕೋರಿ ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೂ ಉತ್ತರ ಬಂದಿಲ್ಲ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಸರಕಾರಿ ಪದವಿ ಕಾಲೇಜುಗಳ‌ಲ್ಲಿ ವಿವಿಧ ಪದವಿ, ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರಿರುವ ವಿದ್ಯಾರ್ಥಿಗಳಿಗೆ ಸರಕಾರದ ಲ್ಯಾಪ್‌ಟಾಪ್‌ ಸಿಗುವುದು ಸಂಶಯ.

Advertisement

ಸರಕಾರಿ ಕಾಲೇಜುಗಳಲ್ಲಿ ವಿವಿಧ ಪದವಿ ಕೋರ್ಸ್‌ಗಳಿಗೆ ಸೇರಿರುವ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ನೀಡು ವುದಾಗಿ ಹಿಂದಿನ ಸರಕಾರ ಘೋಷಣೆ ಮಾಡಿತ್ತು. 2017-18ರಲ್ಲಿ ಪ್ರಥಮ ವರ್ಷದ ಪದವಿಗೆ ಸೇರಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ. ಆದರೆ ಉಳಿದ ವರಿಗೆ ಇನ್ನೂ ಸಿಕ್ಕಿಲ್ಲ. ವಾರ್ಷಿಕ ವರಮಾನ 2.50 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರದಿಂದ ಕಲಿಕಾ ಸಾಮಗ್ರಿ ಒಳಗೊಂಡಿರುವ  ಇ-ಪಠ್ಯಾಂಶದ ಲ್ಯಾಪ್‌ಟಾಪ್‌ ಉಚಿತವಾಗಿ ವಿತರಿಸಲಾಗುತ್ತದೆ. 2016-17ನೇ ಸಾಲಿನಲ್ಲಿ  24,367 ವಿದ್ಯಾರ್ಥಿಗಳಿಗೆ ಹಾಗೂ 2017-18ರಲ್ಲಿ 1,800 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲಾಗಿತ್ತು. ಇದನ್ನು ಹೊರತುಪಡಿಸಿ ಪದವಿ ಓದುವ ಬೇರ್ಯಾವ ವಿದ್ಯಾರ್ಥಿಗಳಿಗೂ ಸರಕಾರದಿಂದ ಉಚಿತ ಲ್ಯಾಪ್‌ಟಾಪ್‌ ನೀಡಿಲ್ಲ. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ಸಂಬಂಧ ಕಾಲೇಜುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿ ಇಲಾಖೆಯಿಂದ ಕಲೆಹಾಕಲಾಗಿದೆ. ಕುಟುಂಬದ ವಾರ್ಷಿಕ ವರಮಾನದ ಆಧಾರದಲ್ಲಿ ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದಾರೆ. ಒಂದು ಲ್ಯಾಪ್‌ಟಾಪ್‌ಗೆ 15ರಿಂದ 16 ಸಾವಿರ ರೂ.ಗಳಂತೆ ಒಟ್ಟು ಸುಮಾರು 150ರಿಂದ 160 ಕೋಟಿ.ರೂ. ಆವಶ್ಯಕತೆ ಇದೆ.

1.30 ಲಕ್ಷ ವಿದ್ಯಾರ್ಥಿಗಳಿಗೆ ಬೇಕು ಲ್ಯಾಪ್‌ಟಾಪ್‌
ಇದರ ಜತೆಗೆ 2017-18ರಲ್ಲಿ ಪ್ರಥಮ ವರ್ಷಕ್ಕೆ ದಾಖಲಾತಿ ಪಡೆದಿರುವ ಸುಮಾರು 1.30 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಬೇಕಿದೆ. ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಬೇಕಿದ್ದ ಟೆಂಡರ್‌ ಪ್ರಕ್ರಿಯೆಯೂ ಸರಿಯಾಗಿ ನಡೆದಿಲ್ಲ. ಹೀಗಾಗಿ ಇಲಾಖೆಯಲ್ಲಿ ಸದ್ಯ ಇರುವುದು 120 ಕೋಟಿ ರೂ. ಮಾತ್ರ ಇದೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಕನಿಷ್ಠ 200 ಕೋಟಿ ರೂ.ಗಳ ಅಗತ್ಯವಿದೆ. 80 ಕೋಟಿ ರೂ.ಗಳನ್ನು ಒದಗಿಸುವಂತೆ ತಿಂಗಳ ಹಿಂದೆಯೇ ಸರಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರಕಾರದಿಂದ ಅನುದಾನ ಒದಗಿಸುವ ಬಗ್ಗೆ ಯಾವ ಭರವಸೆಯೂ ಇಲಾಖೆಗೆ ಬಂದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ಸೆಮಿಸ್ಟರ್‌ ಪರೀಕ್ಷೆ ಸನಿಹ
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ವಿವಿಧ ಪದವಿ ಕೋರ್ಸ್‌ಗಳು ಈಗಾಗಲೇ ಆರಂಭವಾಗಿದ್ದು, ಮೊದಲ ವರ್ಷದ ಮೊದಲ ಸೆಮಿಸ್ಟರ್‌ ಪರೀಕ್ಷೆ ಸಮೀಪಿಸುತ್ತಿದೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕೋರ್ಸ್‌ಗಳು ಆರಂಭವಾಗಿವೆೆ. ಸರಕಾರದ ಉಚಿತ ಲ್ಯಾಪ್‌ಟಾಪ್‌ಗಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಅಂತ್ಯದ ವರೆಗೂ ಲ್ಯಾಪ್‌ಟಾಪ್‌ ಸಿಗುವ ಸಾಧ್ಯತೆ ಇಲ್ಲ. ಅನುದಾನದ ಕೊರತೆ ನೀಗಿಸಿದರೂ, ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

ಪ್ರಸಕ್ತ ಸಾಲಿನಲ್ಲಿ ಸರಕಾರಿ ಕಾಲೇಜಿನಲ್ಲಿ ವಿವಿಧ ಪದವಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡುವಷ್ಟು ಅನುದಾನ ಇಲಾಖೆಯಲ್ಲಿ ಲಭ್ಯವಿಲ್ಲ. ಹೆಚ್ಚುವರಿ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಲ್ಯಾಪ್‌ಟಾಪ್‌ ಖರೀದಿಗೆ ಟೆಂಡರ್‌ ಪ್ರಕ್ರಿಯೆಯೂ ಆರಂಭವಾಗಿಲ್ಲ.
ಡಾ| ಎನ್‌.ಮಂಜುಳಾ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ 

Advertisement

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next