ಸ್ಯಾನ್‌ಫ್ರಾನ್ಸಿಸ್ಕೊ: ಟ್ವಿಟರ್ ನೂತನ ಮಾಲಿಕರಾಗಿ ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಂಡಿದ್ದೇ ತಡ, ದಿನಕ್ಕೊಂದು ವಿಚಿತ್ರ ವರ್ತಮಾನಗಳು ಬರುತ್ತಿವೆ. ವಿಶ್ವವಿಖ್ಯಾತ ಸಾಮಾಜಿಕ ತಾಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಚಿಂತೆ ಬಳಕೆದಾರರಲ್ಲಿ ಶುರುವಾಗಿದೆ. 44 ಬಿಲಿಯನ್ ಡಾಲರ್ ಕೊಟ್ಟು ಟ್ವಿಟರ್ ಅನ್ನು ಖರೀದಿಸಿರುವ ಮಸ್ಕ್, ತಾವೇ ಸ್ವತಃ ಈ ತಾಣ ದಿವಾಳಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರಂತೆ!
ಮೊದಲ ಬಾರಿಗೆ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿರುವ ಮಸ್ಕ್, “ಹೆಚ್ಚು ನಗದು ಉತ್ಪತ್ತಿ ಆರಂಭಿಸದೇ ಇದ್ದರೆ ಕಂಪನಿ ದಿವಾಳಿಯಾಗಲಿದೆ’ ಎಂದಿದ್ದಾರೆ. ಅಲ್ಲದೇ, ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು, ಕಚೇರಿಯಲ್ಲಿನ್ನು ಉಚಿತ ಆಹಾರ ಸಿಗುವುದಿಲ್ಲ ಎಂದೂ ಹೇಳಿದ್ದಾರೆ. ಈಗಾಗಲೇ ಅರ್ಧದಷ್ಟು ಉದ್ಯೋಗಿಗಳನ್ನು ಕಿತ್ತುಹಾಕಿರುವ ಮಸ್ಕ್, ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಜಾಹೀರಾತುದಾರರಲ್ಲಿ ಗೊಂದಲ ಹುಟ್ಟಿಸಿದೆ.
ಇದು ಆ ಸಂಸ್ಥೆಯ ಆರ್ಥಿಕಸ್ಥಿತಿ ಬಿಗಡಾಯಿಸುವ ಆತಂಕ ಹುಟ್ಟು ಹಾಕಿದೆ. ಜಾಹೀರಾತುದಾರರ ಆತಂಕವನ್ನು ಮಸ್ಕ್ಗೆ ತಲುಪಿಸಲು ಯತ್ನಿಸಿದ ವ್ಯಕ್ತಿಯೇ ರಾಜೀನಾಮೆ ಕೊಟ್ಟು ಹೊರ ನಡೆದಿದ್ದಾರೆ! ಟ್ವಿಟರ್‌ನ ಅತಿಮುಖ್ಯ ವ್ಯಕ್ತಿಗಳು ಹೀಗೆ ಸತತವಾಗಿ ರಾಜೀನಾಮೆ ನೀಡುತ್ತಿರುವುದನ್ನು ಅಮೆರಿಕದ ವಾಣಿಜ್ಯ ಆಯೋಗವೂ ಕಳವಳದಿಂದ ಪರಿಶೀಲಿಸುತ್ತಿದೆ.
ಜೀಸಸ್ ಕ್ರೈಸ್ಟ್ ಖಾತೆಗೇ ನೀಲಿ ಗುರುತು!
ಟ್ವಿಟರ್ ಆದಾಯ ವೃದ್ಧಿಸಲು 8 ಡಾಲರ್ ನೀಡಿದವರಿಗೆ ನೀಲಿ ಗುರುತನ್ನು ನೀಡಿ ಎಂದಿದ್ದಾರೆ
ಮಸ್ಕ್. ಇದು ತಮ್ಮ ಖಾತೆಯನ್ನು ಅಧಿಕೃತ ಮಾಡಿಕೊಳ್ಳಲು ಬಳಕೆದಾರರಿಗೆ ಇರುವ ಅವಕಾಶ. ಆದರೆ ಇದೇ ದೊಡ್ಡಪ್ರಮಾಣದಲ್ಲಿ ದುರುಪಯೋಗಕ್ಕೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ನಿಷೇಧಕ್ಕೊಳಗಾಗಿರುವ ಡೊನಾಲ್ಡ್ ಟ್ರಂಪ್ ಹೆಸರಿನಲ್ಲೂ ನೀಲಿ ಗುರುತಿನ ಖಾತೆ ತೆರೆದುಕೊಂಡಿದೆ.
ಬಾಸ್ಕೆಟ್‌ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್, ಸೂಪರ್ ಮಾರಿಯೊ ಹೆಸರಲ್ಲೂ ಖಾತೆಗಳು ಹುಟ್ಟಿಕೊಂಡಿವೆ. ಅಷ್ಟು ಮಾತ್ರ ಯಾಕೆ ಕ್ರೈಸ್ತರು ದೇವರೆಂದು ಪೂಜಿಸುವ ಯೇಸುಕ್ರಿಸ್ತನ ಹೆಸರಿನಲ್ಲಿರುವ ಖಾತೆಗೇ ನೀಲಿ ಗುರುತನ್ನು ನೀಡಲಾಗಿದೆ. ಇದೊಂದು ನಕಲಿ ಖಾತೆ, ಆದರೆ ಕ್ರಿಸ್ತನ ಹೆಸರಿನಲ್ಲಿದೆ!