Advertisement

ಏಪ್ರಿಲ್ ವರೆಗೆ ವಿಜಯಪುರ ವಿಮಾನ ಹಾರಾಟ ಅಸಾಧ್ಯ: ಸಚಿವ ಎಂ.ಬಿ.ಪಾಟೀಲ

05:17 PM Jul 28, 2023 | keerthan |

ವಿಜಯಪುರ: ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡಲಾಗದೆ ಕೇಂದ್ರ ಸರ್ಕಾರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಂಬಾನಿ, ಅದಾನಿ ಅವರಂಥಹ ಬಂಡವಾಳಿಗರಿಗೆ ನಿಲ್ದಾಣಗಳನ್ನು ನೀಡುತ್ತಿದೆ. ಹೀಗಾಗಿ ವಿಜಯಪುರ ಸೇರಿದಂತೆ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳ ನಿರ್ವಹಣೆಗೆ ರಾಜ್ಯ ಸರ್ಕಾರವೇ ಪ್ರತ್ಯೇಕ ಪ್ರಾಧಿಕಾರ ರಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಮೂಲಸೌಕರ್ಯ ಹಾಗೂ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಯಂ ನಿರ್ವಹಣೆ ಮಾಡಲಾಗದೆ ಖಾಸಗಿಯವರ ನಿರ್ವಹಣೆಗೆ ವಹಿಸುತ್ತದೆ ಎಂದಾರೆ ರಾಜ್ಯದ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಿ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಹೀಗಾಗಿ ಮೂಲಸೌಕರ್ಯಗಳ ಇಲಾಖೆ ಮಾದರಿಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳ ನಿರ್ವಹಣೆಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಚಿಂತನೆ ನಡೆದಿದೆ ಎಂದರು.

ಶಿವಮೊಗ್ಗ, ವಿಜಯಪುರ ಸೇರಿದಂತೆ ವಿಮಾನ ನಿಲ್ದಾಣ ಯೋಜನೆಯಲ್ಲಿ ನಡೆದಿರುವ ಲೋಪಗಳ ಕುರಿತು ತನಿಖೆ ನಡೆಸಲು ನಮ್ಮ ಸರ್ಕಾರ ಯೋಚಿಸುತ್ತಿದೆ. ಆದರೆ ಇದೇ ನೆಪದಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಅಡ್ಡಿಯಾಗದಂತೆ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ನಾನು ರಾಜಕೀಯ ಬೆರೆಸಲು ಹೋಗುವುದಿಲ್ಲ ಎಂದರು.

ವಿಜಯಪುರ ವಿಮಾನ ನಿಲ್ದಾಣದ ಭೌತಿಕ ಸ್ಥಿತಿಗತಿ ಅವಲೋಕಿಸಿದರೆ ಬರುವ ಏಪ್ರಿಲ್ ವೇಳೆಗೆ ವಿಮಾನ ಹಾರಾಟ ಅಸಾಧ್ಯ. ಹಿಂದಿನ ಸರ್ಕಾರದಲ್ಲಿದ್ದವರು ಕಳೆದ ಮಾರ್ಚ್ ಅಂತ್ಯದೊಳಗೆ ವಿಜಯಪುರ ನಿಲ್ದಾಣದಿಂದ ವಿಮಾನ ಹಾರಾಟ ಮಾಡಲಿದೆ ಎಂದಿದ್ದರು. ಆದರೆ ವಾಸ್ತವಿಕವಾಗಿ ಆಗಬೇಕಿರುವ ಕೆಲಸಗಳು ದೊಡ್ಡ ಮಟ್ಟದಲ್ಲಿ ಬಾಕಿ ಉಳಿದಿವೆ ಎಂದರು.

Advertisement

ವಿಮಾನ ಹಾರಾಟಕ್ಕೆ ನಿಲ್ದಾಣದಲ್ಲಿ ಇರಬೇಕಾದ ಅಗತ್ಯ ಮೂಲಸೌಲಭ್ಯಗಳು, ಯಂತ್ರೋಪಕರಣಗಳ ಅಳವಡಿಕೆ, ಅಗ್ನಿಶಾಮಕ ಘಟಕ ಸ್ಥಾಪನೆ, ಪರಿಸರ ಇಲಾಖೆ ನಿರಪೇಕ್ಷಣಾ ಪತ್ರ ಬೇಕಿದೆ. ಹೀಗೆ ಸಾಕಷ್ಟು ಕೆಲಸ ಬಾಕಿ ಇದ್ದು, ಕಾಮಗಾರಿ ವೇಗ ನೀಡಲು ನಮ್ಮ ಸರ್ಕಾರ 50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ವಿಜಯಪುರ ನಿಲ್ದಾಣದಲ್ಲಿ ಹಗಲು ಮಾತ್ರವಲ್ಲ ರಾತ್ರಿಯೂ ವಿಮಾನಗಳು ಇಳಿಯುವ ಹಾಗೂ ಜಿಲ್ಲೆಯ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಾಗಾಟಕ್ಕೆ ಸರಕು ಸಾಗಾಟದ ವಿಮಾನ ಇಳಿಕೆ ಯೋಜಿಸುತ್ತಿದ್ದೇವೆ. ಇದಲ್ಲದೇ ಪ್ರವಾಸೋದ್ಯಮ ಕೇಂದ್ರವಾದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸಿಗರ ಆಕರ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಇದಕ್ಕೂ ಮೊದಲು ಕಾಮಗಾರಿ ಸ್ಥಿತಿಗತಿ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ, ನಿರ್ಮಾಣಗೊಂಡಿರುವ ನಿಲ್ದಾಣದ ಕಟ್ಟಡ ಆಕರ್ಷಕವಾಗಿರುವಂತೆ ವರ್ಣ ಲೇಪನ ಹಾಗೂ ಟೈಲ್ಸ್ ಅಳವಡಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿಲ್ದಾಣದ ಪ್ರವೇಶ ದ್ವಾರ ಹಾಗೂ ಖಾಲಿ ಸ್ಥಳಗಳಲ್ಲಿ ರಾಕ್ ಗಾರ್ಡನ್ ನಿರ್ಮಾಣದ ಮೂಲಕ ನಿಲ್ದಾಣದ ಸೌಂದರ್ಯೀಕರಣ ಮಾಡುವಂತೆ ಸೂಚಿಸಿದ ಸಚಿವರು, ಇದಕ್ಕಾಗಿ ಪ್ರಾಯೋಜಕರ ಸಹಕಾರ ಪಡೆಯಬೇಕು. ಬಿಎಲ್‍ಡಿಇ ಸಂಸ್ಥೆಯಿಂದ ಪ್ರಾಯೋಜಕತ್ವ ನೀಡಲು ಸಿದ್ಧವಿದ್ದು, ಎನ್‍ಟಿಪಿಸಿ ಸೇರಿದಂತೆ ಇತರರನ್ನು ಇದಕ್ಕಾಗಿ ಸಂಪರ್ಕಿಸುವಂತೆ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next