ಹುಣಸಗಿ: ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದಲೂ ಯಾವುದೇ ಹೇಳಿಕೊಳ್ಳುವಂತ ಕೆಲಸ ಮಾಡಿಲ್ಲ. ಬಿಜೆಯಿಂದ ರೈತಾಪಿ ಜನರಿಗೆ ಉಳಿಗಾಲವಿಲ್ಲ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆರೋಪಿಸಿದರು.
ಕಕ್ಕೇರಾ ಪಟ್ಟಣದ ಪ್ರಮುಖ ವಾರ್ಡ್‍ಗಳಲ್ಲಿ ಯುಕೆಪಿ ಕ್ಯಾಂಪ್, ಯರಬಂಡಿ ಕ್ಯಾಂಪ್, ಹಿರೆಹಳ್ಳ, ಪೀರಗಾರದೊಡ್ಡಿ, ಕಕ್ಕೇರಾ ತಾಂಡಗಳಲ್ಲಿ ಪುರಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಗ್ಯಾಸ್ ಹಾಗೂ ತೈಲ ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರಿಗೆ ಬರೆ ಎಳೆದಿದೆ. ಹೀಗಾಗಿ ಬಿಜೆಪಿ ಸುಳ್ಳಿನ ಪಕ್ಷ ಎಂದು ದೂರಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕ್ಷೀರಾಭಾಗ್ಯ, ಅನ್ನಭಾಗ್ಯದಂತ ಯೋಜನೆಗಳ ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿದೆ. ಅಲ್ಲದೆ ಸೂರು ಇಲ್ಲದವರಿಗೆ ಲಕ್ಷಾಂತರ ಮನೆಗಳು ಮಂಜೂರು ಮಾಡಿದೆ. ದುರ್ದೈವ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮನೆ ಬಿಲ್ ತಡೆಹಿಡಿದಿದ್ದದಲ್ಲದೆ, ಇವರೆಗೂ ಒಂದೇ ಒಂದು ಮನೆ ಸಹ ನೀಡಿಲ್ಲ ಎಂದು ಹರಿಹಾಯ್ದರು.
ಪುರಸಭೆ ವ್ಯಾಪ್ತಿಯ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಅಭ್ಯರ್ಥಿಗಳಿಗೆ ಗೆಲ್ಲಿಸಿದಾಗ ಈ ಭಾಗದಲ್ಲಿ ಇನ್ನು ಅನೇಕ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆಗೊಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿ, ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಆಡಳಿತದಲ್ಲಿ ಕಕ್ಕೇರಾವನ್ನು ಪುರಸಭೆಯನ್ನಾಗಿ ಮಾಡಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಹೀಗಾಗಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಆಶೀರ್ವದಿಸಬೇಕು ಎಂದು ತಿಳಿಸಿದರು.
ಮುಖಂಡರಾದ ರಾಜಾ ವೇಣುಗೋಪಾಲನಾಯಕ, ನವೀನ್ ಪಾಟೀಲ, ಗುಂಡಪ್ಪ ಸೊಲ್ಲಾಪುರ, ಮಲ್ಲಣ್ಣ ಸಾಹುಕಾರ, ಪರಮಣ್ಣ ಕುಂಬಾರ, ಪರಮಣ್ಣ ಗುತ್ತೇದಾರ, ರವಿಚಂದ್ರ ಸಾಹುಕಾರ ಆಲ್ದಾಳ, ಶರಣಕುಮಾರ ಸೊಲ್ಲಾಪುರ, ಬುಚ್ಚಪ್ಪನಾಯಕ ಸೇರಿದಂತೆ ಇತರರಿದ್ದರು.