Advertisement

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

05:00 AM May 29, 2020 | Hari Prasad |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ತಮ್ಮೂರುಗಳಿಗೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರ ಬಸ್ಸು ಮತ್ತು ರೈಲು ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕು ಎಂಬ ಮಹತ್ವದ ನಿರ್ದೇಶ ನವನ್ನು ಸುಪ್ರೀಂ ಕೋರ್ಟ್‌ ಗುರುವಾರ ನೀಡಿದೆ.

Advertisement

ಕಾರ್ಮಿಕರು ಬಸ್ಸು ಅಥವಾ ರೈಲು ಯಾವುದರಲ್ಲಿ ತೆರಳಿದರೂ ಪ್ರಯಾಣದ ಶುಲ್ಕವನ್ನು ಅವರಿಂದ ಪಡೆದುಕೊಳ್ಳುವಂತಿಲ್ಲ.

ಅವರ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಅವರನ್ನು ಕಳುಹಿಸಿಕೊಡುವ ಮತ್ತು ಸ್ವೀಕರಿಸಲಿರುವ ರಾಜ್ಯಗಳು ಹಂಚಿಕೊಳ್ಳಬೇಕು ಎಂದೂ ನ್ಯಾ| ಅಶೋಕ್‌ ಭೂಷಣ್‌, ನ್ಯಾ| ಎಸ್‌.ಕೆ.ಕೌಲ್‌ ಮತ್ತು ನ್ಯಾ| ಎಂ.ಆರ್‌.ಶಾ ಅವರನ್ನೊಳಗೊಂಡ ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ಸೂಚಿಸಿದೆ.

ತಿಂಗಳಾರಂಭದಲ್ಲೇ ಕೇಂದ್ರ ಸರಕಾರವು ಕಾರ್ಮಿಕರನ್ನು ಊರು ತಲುಪಿಸಲು ಶ್ರಮಿಕ ರೈಲು ವ್ಯವಸ್ಥೆ ಮಾಡಿದರೂ, ಕಾರ್ಮಿಕರ ದುರಂತದ ಕಥೆಗಳು ಮುಂದುವರಿದಿವೆ. ಹಸಿವು ತಾಳಲಾರದೇ ಹತಾಶೆಗೊಂಡ ಕಾರ್ಮಿಕರು ರೈಲು ನಿಲ್ದಾಣಗಳಲ್ಲಿ ಆಹಾರವನ್ನು ಲೂಟಿ ಮಾಡಿದ ಘಟನೆಗಳು ವರದಿಯಾಗುತ್ತಿವೆ. ಬುಧವಾರವಷ್ಟೇ ಮೃತ ತಾಯಿಯನ್ನು ಕಂದಮ್ಮ ಎಬ್ಬಿಸಲು ಪ್ರಯತ್ನಿಸುತ್ತಿರುವ ಕರುಳುಹಿಂಡುವಂಥ ವಿಡಿಯೋ ಕೂಡ ಭಾರೀ ಸುದ್ದಿ ಮಾಡಿದೆ. ಈ ಎಲ್ಲ ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನ ಈ ಆದೇಶ ಮಹತ್ವ ಪಡೆದಿದೆ.

ಕ್ರಮ ಕೈಗೊಳ್ಳಿ: ದೇಶವ್ಯಾಪಿ ನಿರ್ಬಂಧದಿಂದಾಗಿ ಜೀವನಕ್ಕೆ ಆಸರೆಯಾಗಿದ್ದ ಉದ್ಯೋಗವನ್ನೂ ಕಳೆದುಕೊಂಡು, ತವರಿಗೆ ವಾಪಸಾಗಲು ಹೆಣಗುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟಗ ಳನ್ನು ನೋಡಿದರೆ ಬೇಸರವಾಗುತ್ತದೆ ಎಂದ ನ್ಯಾಯಪೀಠ, ದೇಶದ ವಿವಿಧ ಭಾಗಗಳಲ್ಲಿ ಸಿಲುಕಿ ಕೊಂಡಿರುವ ವಲಸೆ ಕಾರ್ಮಿಕರಿಗೂ ಅವರಿರುವಂಥ ರಾಜ್ಯಗಳು ಹಾಗೂ ಕೇಂದ್ರಾ ಡಳಿತ ಪ್ರದೇಶಗಳು ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅವರು ರೈಲು ಅಥವಾ ಬಸ್ಸು ಹತ್ತುವವರೆಗೂ ಅವರ ಆಹಾರದ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

Advertisement

ಪ್ರತಿಕ್ರಿಯೆ ಸಲ್ಲಿಸಲು ಸೂಚನೆ: ಸಂಬಂಧಪಟ್ಟ ರಾಜ್ಯ ಸರಕಾರಗಳು ಕಾರ್ಮಿಕರ ವಿಚಾರದಲ್ಲಿ ಕ್ರಮಕೈಗೊಳ್ಳುತ್ತಿವೆ ಎನ್ನುವುದು ನಿಜವಾದರೂ, ಅವರ ನೋಂದಣಿ, ಸಾಗಣೆ, ಆಹಾರ, ವಸತಿಯ ವಿಚಾರದಲ್ಲಿ ಲೋಪದೋಷಗಳೂ ಕಂಡುಬಂದಿವೆ. ಈ ಎಲ್ಲ ಪರಿಸ್ಥಿತಿಗಳನ್ನು ಪರಿಗಣಿಸಿ, ನಾವು ಮಧ್ಯಂತರ ಆದೇಶ ನೀಡುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿತು. ಜತೆಗೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ತಮ್ಮ ವ್ಯಾಪ್ತಿಯ ವಲಸೆ ಕಾರ್ಮಿಕರೆಷ್ಟು, ಆ ಪೈಕಿ ಎಷ್ಟು ಮಂದಿಗೆ ಸಹಾಯ ಸಿಕ್ಕಿದೆ ಎಂಬ ಕುರಿತು ಶುಕ್ರವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜೂ.5ಕ್ಕೆ ಮುಂದೂಡಿತು.

ವ್ಯಾಖ್ಯಾನ ಬದಲಿಗೆ ನಿರ್ಧಾರ: ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಈ ವರ್ಷಾಂತ್ಯದ ಹೊತ್ತಿಗೆ ಕೇಂದ್ರ ಸರಕಾರ ರೂಪಿಸಲು ಉದ್ದೇಶಿಸಿರುವ ಸಾಮಾಜಿಕ ಭದ್ರತಾ ಕಾನೂನಿನಲ್ಲಿ ವಲಸೆ ಕಾರ್ಮಿಕರ ವ್ಯಾಖ್ಯಾನವನ್ನೇ ಬದಲಾಯಿಸಲು ನಿರ್ಧರಿಸಲಾಗಿದೆ. 40 ವರ್ಷಗಳಷ್ಟು ಹಳೆಯದಾದ ಕೂಲಿ ಕಾರ್ಮಿಕರ ಸಾಮಾಜಿಕ ಭದ್ರತಾ ಕಾನೂನಿಗೆ ಈಗ ತಿದ್ದುಪಡಿ ತರಲಾಗುತ್ತಿದೆ.

ಟೀಕಾಕಾರರ ವಿರುದ್ಧ ಕಿಡಿ
ವಲಸೆ ಕಾರ್ಮಿಕರ ಸ್ಥಿತಿಗತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವವರು, ಸರಕಾರ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ಹೋರಾಟಗಾರರು, ಪ್ರತಿಪಕ್ಷಗಳ ನಾಯಕರ ವಿರುದ್ಧ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ವಾದಿಸಿದ ಮೆಹ್ತಾ, ಕೆಲವರು ಕೇವಲ ನಕಾರಾತ್ಮ ಕತೆಯನ್ನೇ ಹಬ್ಬಿಸುತ್ತಾರೆ. ಅವರಿಗೆ ಸರಕಾರಗಳು ಕೈಗೊಂಡ ಕ್ರಮಗಳು ಕಾಣಿಸುತ್ತಿಲ್ಲ. ಅವುಗಳ ಬಗ್ಗೆ ಅವರು ಚಕಾರವೆತ್ತುವುದಿಲ್ಲ. ಸುಖಾಸುಮ್ಮನೆ ಸರಕಾರದ ವಿರುದ್ಧ ಹರಿಹಾಯುವುದೇ ಇವರ ಕೆಲಸ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜತೆಗೆ, ತಮ್ಮ ವಾದದ ವೇಳೆ, 1983ರಲ್ಲಿ ಪುಲಿಟ್ಜರ್‌ ಪ್ರಶಸ್ತಿ ಪಡೆದ (ಹಸಿವಿನಿಂದ ಕಂಗೆಟ್ಟ ಮಗು ಹಾಗೂ ಆ ಮಗುವನ್ನು ತಿನ್ನಲು ಹವಣಿಸುತ್ತಿದ್ದ ರಣಹದ್ದುವಿನ ಫೋಟೋ) ಛಾಯಾಚಿತ್ರ ಮತ್ತು ಅದನ್ನು ಕ್ಲಿಕ್ಕಿಸಿದವನ ಆತ್ಮಹತ್ಯೆಯ ಕಥೆಯನ್ನು ಕೂಡ ಪ್ರಸ್ತಾಪಿಸಿದ ಮೆಹ್ತಾ, ಸರಕಾರದ ಮೇಲೆ ಆರೋಪ ಮಾಡುತ್ತಿರುವವರಲ್ಲಿ ಯಾರಾದರೂ ಹವಾನಿಯಂತ್ರಿತ ಕೊಠಡಿಯಿಂದ ಹೊರಬಂದು ಯಾರಿಗಾದರೂ ಸಹಾಯ ಮಾಡಿದ್ದಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಹೇಳಿದ್ದೇನು?
– ಕಾರ್ಮಿಕರ ಸಾಗಣೆಗೆ ರೈಲಿನ ಅಗತ್ಯವಿದೆ ಎಂದು ರಾಜ್ಯ ಸರಕಾರ ಕೋರಿಕೆ ಸಲ್ಲಿಸಿದ ಕೂಡಲೇ ರೈಲಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಬೇಕು. ಕಾರ್ಮಿಕರಿಂದ ರೈಲು ಅಥವಾ ಬಸ್ಸಿನ ಪ್ರಯಾಣ ಶುಲ್ಕ ವಸೂಲಿ ಮಾಡುವಂತಿಲ್ಲ.

– ಅತಂತ್ರರಾಗಿರುವ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರಕಾರಗಳೇ ಆಹಾರ, ನೀರು ಒದಗಿಸಬೇಕು.

– ರೈಲಲ್ಲಿ ಪ್ರಯಾಣ ಆರಂಭಿಸುವಾಗ, ಆ ರಾಜ್ಯವೇ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಪ್ರಯಾಣದ ವೇಳೆ ರೈಲ್ವೆ ಇಲಾಖೆಯೇ ಆಹಾರದ ಜವಾಬ್ದಾರಿ ಹೊತ್ತುಕೊಳ್ಳಬೇಕು. ಬಸ್ಸಲ್ಲಿ ಪ್ರಯಾಣಿಸುವವರಿಗೂ ರಾಜ್ಯ ಸರಕಾರ ಈ ವ್ಯವಸ್ಥೆ ಮಾಡಬೇಕು.

– ಸರಕಾರಗಳು ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಂಡು, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರ್ಮಿಕರು ರೈಲು-ಬಸ್ಸು ಹತ್ತುವಂತೆ ನೋಡಿಕೊಳ್ಳಬೇಕು. ಆ ಕುರಿತ ಮಾಹಿತಿಯನ್ನೂ ಸಂಬಂಧಪಟ್ಟವರಿಗೆ ಒದಗಿಸಬೇಕು.

– ಕಾಲ್ನಡಿಗೆಯಲ್ಲೇ ಸಾಗುತ್ತಿರುವ ಎಲ್ಲ ಕಾರ್ಮಿಕರಿಗೂ ಕೂಡಲೇ ವಸತಿ ವ್ಯವಸ್ಥೆ ಮಾಡಿ, ಆಹಾರ ಮತ್ತು ಇತರೆ ಸೌಕರ್ಯವನ್ನು ಕಲ್ಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next