ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯನ್ನು ನೂತನ ತಾಲೂಕಾಗಿ ಘೋಷಣೆ ಮಾಡುತ್ತಿದ್ದಂತೆ ತಾಲೂಕಿನ ಜನರು ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದ್ದರು. ಆದರೆ ತಾಲೂಕು ರಚನೆಗೊಂಡು ನಾಲ್ಕು ವರ್ಷಗಳು ಗತಿಸಿದರೂ ಇದುವರೆಗೆ ಸಮರ್ಪಕ ಸೇವೆ, ಮೂಲಭೂತ ಸೌಕರ್ಯಗಳು ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ತಾಲೂಕು ಕೇಂದ್ರ ಅಸ್ತಿತ್ವಕ್ಕೆ ಬರದೇ ಜನರು ಸಮಸ್ಯೆ ಎದುರಿಸುವಂತಾಗಿದೆ.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಟ್ಟಿಹಳ್ಳಿ ತಾಲೂಕಿನ ಕನಸ್ಸನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017-2018ನೇ ಸಾಲಿನ ಬಜೆಟ್‌ನಲ್ಲಿ ಈಡೇರಿಸಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿತು. ಆಗ ರಟ್ಟಿಹಳ್ಳಿ ತಾಲೂಕಿನ 63 ಗ್ರಾಮಗಳ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಕೆಲವು ತಿಂಗಳ ಬಳಿಕ ತಾಲೂಕು ಕೇಂದ್ರ ಕಚೇರಿಗಳಿಗೆ ತುಂಗಾ ಮೇಲ್ದಂಡೆ ಯೋಜನೆಯ ಕಟ್ಟಡಗಳನ್ನು ಗುರುತಿಸಿ 2018, ಫೆ.24ರಂದು ನೂತನ ತಾಲೂಕು ಆಡಳಿತ ಕೇಂದ್ರ ಉದ್ಘಾಟಿಸಲಾಯಿತು. ಆದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಬೇಕಾದ ಸರ್ಕಾರಿ ಇಲಾಖೆಗಳು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭ ಮಾಡದಿರುವ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ.
5-6 ಇಲಾಖೆಗಳ ಕಾರ್ಯಾರಂಭ: ತಾಲೂಕು ಆಡಳಿತ ಕೇಂದ್ರ ಉದ್ಘಾಟನೆ ದಿನ ತಹಸೀಲ್ದಾರ್ ಕಚೇರಿ ಹಾಗೂ ಹೆಸ್ಕಾಂ ಕಚೇರಿ ಪ್ರಾರಂಭಿಸಲಾಗಿತ್ತು. ನೂತನ ತಾಲೂಕಾಗಿ ರಚನೆಗೊಂಡು ನಾಲ್ಕು ವರ್ಷ ಕಳೆದರೂ ಇವರೆಗೆ ಕಂದಾಯ ಇಲಾಖೆ, ತಾಪಂ, ಪಶು ಸಂಗೋಪನಾ ಇಲಾಖೆ, ಖಜಾನೆ, ಆರೋಗ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸೇರಿದಂತೆ ಕೇವಲ ಐದಾರು ಸರ್ಕಾರಿ ಇಲಾಖೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ತಾಲೂಕಿನ ಜನರಿಗೆ ಸರ್ಕಾರಿ ಇಲಾಖೆಗಳ ಸೇವೆ ಸಮರ್ಪಕವಾಗಿ ದೊರಕುತ್ತಿಲ್ಲ. ಇತರ ಇಲಾಖೆಗಳ ಕೆಲಸಕ್ಕಾಗಿ ಜನರು ಹಿರೇಕೆರೂರಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ.
ನಾಮಫಲಕ್ಕೆ ಮಾತ್ರ ಸೀಮಿತ: ತುಂಗಾ ಮೇಲ್ದಂಡೆ ಕಚೇರಿ ಕಟ್ಟಡಗಳನ್ನು ವಿವಿಧ ಇಲಾಖೆಗೆ ನೀಡಲಾಗಿದ್ದು, ಕೆಲವು ಕಟ್ಟಡಗಳಿಗೆ ನಾಮಫಲಕ ಅಳವಡಿಸಲಾಗಿದ್ದು, ಇದುವರೆಗೆ ಯಾವುದೇ ಇಲಾಖೆಗೆ ಸಿಬ್ಬಂದಿ ನೇಮಕವಾಗದೇ ಕೆಲಸ ಆರಂಭಿಸಿಲ್ಲ. ಹೀಗಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಶಿಶು ಅಭಿವೃದ್ಧಿ ಯೋಜನಾ ಕಾರಿಗಳ ಕಚೇರಿ, ಉಪ ನೋಂದಣಿ ಅಧಿಕಾರಿ ಹಾಗೂ ವಿಹಾನ ನೋಂದಣಿ ಅಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗೆ ನಾಮಫಲಕ ಹಾಕಿದ್ದು ಬಿಟ್ಟರೆ ಇವರೆಗೆ ಸಿಬ್ಬಂದಿ ನೇಮಕಗೊಳಿಸಿ ಕಚೇರಿ ಆರಂಭಕ್ಕೆ ಸರ್ಕಾರ ಆದೇಶ ನೀಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
29 ಎಕರೆ ಮಂಜೂರು: ಎಲ್ಲ ಕಚೇರಿಗಳ ನಿರ್ಮಾಣ ಕ್ಕಾಗಿ ಪಟ್ಟಣದ ಮಧ್ಯ ಭಾಗದಲ್ಲಿರುವ ಸರ್ವೇ ನಂಬರ್ 87, 88ರ ಜಮೀನಿನಲ್ಲಿ 29.10 ಎಕರೆ ಸರ್ಕಾರದಿಂದ ಮಂಜೂರಾಗಿದ್ದು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಅಗ್ನಿಶಾಮಕ ದಳದ ಕಚೇರಿ ಕಾರ್ಯಾರಂಭಕ್ಕೆ ಎರಡು ಎಕರೆ ಮಂಜೂರಾತಿ ನೀಡಲಾಗಿದೆ. 10 ಕೋಟಿ ರೂ. ಗಳಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸ ಲಾಗಿದೆ. ಲೋಕೋಪಯೋಗಿ ಇಲಾಖೆ ಕಚೇರಿ ನಿರ್ಮಾಣದ ಫೈನಲ್ ಎಸ್ಟಿಮೆಟ್ ಪ್ಲಾನ್ ಸಹ ಕಳುಹಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣ ಗೊಂಡರೆ ಕಂದಾಯ, ಖಜಾನೆ, ಸಬ್ ರಿಜಿಸ್ಟರ್ ಹಾಗೂ ಸರ್ವೇ ಇಲಾಖೆ ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿ ಸಲಿವೆ. ಒಟ್ಟಾರೆ ಮೂಲಭೂತ ಸೌಲಭ್ಯ ಏನು ಬೇಕೋ ಅದನ್ನು 29 ಎಕರೆ ಜಾಗದಲ್ಲಿ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
ರಟ್ಟಿಹಳ್ಳಿಯಲ್ಲಿ ಈಗಾಗಲೇ 6 ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಕಚೇರಿಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ 29 ಎಕರೆ 10 ಗುಂಟೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈಗಾಗಲೇ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿದೆ. –
ಅರುಣಕುಮಾರ ಕಾರಗಿ, ತಹಶೀಲ್ದಾರ್, ರಟ್ಟಿಹಳ್ಳಿ
ರಟ್ಟಿಹಳ್ಳಿ ತಾಲೂಕು ಹೆಸರಿಗೆ ಮಾತ್ರ ಸೀಮಿತಗೊಂಡಿದೆ. ತಾಲೂಕಾಗಿ ರಚನೆಗೊಂಡು ನಾಲ್ಕು ವರ್ಷ ಗತಿಸುತ್ತಾ ಬಂದರೂ ಪೂರ್ಣ ಪ್ರಮಣದಲ್ಲಿ ತಾಲೂಕು ಕೇಂದ್ರ ಅಸ್ತಿತ್ವಕ್ಕೆ ಬಂದಿಲ್ಲ. ಬೆರಳಣಿಕೆಯಷ್ಟು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಸಮರ್ಪಕ ಸೇವೆ ದೊರಕದೇ ಹಿರೇಕೆರೂರಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ. ಕೃಷಿ ಸಚಿವ ಹಾಗೂ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ ಅವರು ರಟ್ಟಿಹಳ್ಳಿ ತಾಲೂಕಿನ ಅಭಿವೃದ್ಧಿಗೆ ಆಧ್ಯತೆ ನೀಡಿ ಇಲಾಖೆಗಳಿಗೆ ಸಿಬ್ಬಂದಿ ನಿಯೋಜಿಸಿ ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು.
-ರಾಜು ವೇರ್ಣೇಕರ, ರಟ್ಟಿಹಳ್ಳಿ ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ
-ವೀರೇಶ ಮಡ್ಲೂರ