ಉತ್ತರಪ್ರದೇಶ: ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದ ನೂತನ ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲ್ಪಟ್ಟು ಸುಮಾರು ಎರಡು ವಾರಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದ ಮುಸ್ಲಿಂ ಯುವಕ ಮತ್ತು ಆತನ ಸಹೋದರನನ್ನು ಕೋರ್ಟ್ ಶನಿವಾರ(ಡಿಸೆಂಬರ್ 19, 2020) ಬಂಧಮುಕ್ತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಮುಸ್ಲಿಂ ಯುವಕ ಮತ್ತು ಆತನ ಸಹೋದರನ ವಿರುದ್ಧ ಬಲವಂತದ ಮತಾಂತರ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಪೊಲೀಸರು ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಕ್ನೋದಿಂದ 350 ಕಿಲೋ ಮೀಟರ್ ದೂರದ ಮೊರಾದಾಬಾದ್ ನ ಕಾಂತ್ ಪ್ರದೇಶದ 22 ವರ್ಷದ ಹಿಂದು ಯುವತಿ ಜತೆಗಿನ ವಿವಾಹ ನೋಂದಣಿ ಮಾಡಲು ಮುಸ್ಲಿಂ ಯುವಕ ಪ್ರಯತ್ನಿಸಿದ್ದ.
ವಿವಾಹ ನೋಂದಣಿಗೆ ತೆರಳಿದ್ದ ಯುವಕ ಮತ್ತು ಯುವತಿಯನ್ನು ಬಜರಂಗದಳದ ಸದಸ್ಯರು ಅಡ್ಡಗಟ್ಟಿ ಪ್ರಶ್ನಿಸಿತ್ತು. ಈ ವೇಳೆ ಪೊಲೀಸರು ಮುಸ್ಲಿಮ್ ಯುವಕನನ್ನು ಬಂಧಿಸಿದ ನಂತರ ಗರ್ಭಿಣಿ ಯುವತಿಯನ್ನು ನಿರಾಶ್ರಿತ ಧಾಮಕ್ಕೆ ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಅಣ್ಣನ ನೆರವಿಗೆ ಬಂದಿದ್ದ ಸಹೋದರನನ್ನು ಕೂಡ ಪೊಲೀಸರು ಬಂಧಿಸಿದ್ದರು.
ನಾನೇನು ಪ್ರತಿಕ್ರಿಯೆ ನೀಡಲಿ. ನಾವು ಇಬ್ಬರು ಪರಸ್ಪರ ಒಪ್ಪಿಯೇ ವಿವಾಹವಾಗಿದ್ದೇವು. ನಾನೀಗ ಹದಿನೈದು ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದು, ಕೋರ್ಟ್ ಆದೇಶದಿಂದ ಸಂತೋಷವಾಗಿದೆ ಎಂದು ಜೈಲಿನಿಂದ ಹೊರಬಂದ ಮುಸ್ಲಿಮ್ ಯುವಕ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ. ಒಂದು ವೇಳೆ ಪೊಲೀಸರು ಈ ನೂತನ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆಯೇ ಎಂದು ಅನ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿರುವುದಾಗಿ ವರದಿ ಹೇಳಿದೆ.
ಉತ್ತರಪ್ರದೇಶದಲ್ಲಿ ನೂತನ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರುವ ಮುನ್ನವೇ ಜುಲೈನಲ್ಲಿ ಈ ಜೋಡಿ ವಿವಾಹವಾಗಿತ್ತು. ನನಗೆ 22 ವರ್ಷ ವಯಸ್ಸಾಗಿದೆ. ನನ್ನ ಸ್ವ ಇಚ್ಚೆಯಿಂದ ಜುಲೈ 24ರಂದು ವಿವಾಹವಾಗಿದ್ದೇನೆ. ನಾವು ಮದುವೆಯಾಗಿ ಐದು ತಿಂಗಳು ಕಳೆದಿದೆ ಎಂದು ಯುವತಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾಳೆ.