ಬೆಳಗಾವಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಕಂಡುಬಂದಿದ್ದು, ಇದು ಇನ್ನೂ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಬಳಿ ಇರುವ ಅಂತಾರಾಜ್ಯ ಚೆಕ್‌ಪೋಸ್ಟ್ ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಹಗಲಿರುಳು ಉತ್ತಮ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಅಂತಾರಾಜ್ಯ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿರುವವರು ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಆರೋಗ್ಯ ಸಿಬ್ಬಂದಿಯ ತಪಾಸಣೆ: ಕೋವಿಡ್ ನಿಯಂತ್ರಣ ಹಾಗೂ ಜನರ ತಪಾಸಣೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಪರಿಶೀಲಿಸಿ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೆಲಸದ ಅವಧಿಯನ್ನು ಎಂಟು ಗಂಟೆಗೆ ಸೀಮಿತಗೊಳಿಸಿ ಪಾಳೆ ಮಾಡಬೇಕು. ತಕ್ಷಣದಿಂದಲೇ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದ ಸಚಿವರು, ಚೆಕ್ ಪೋಸ್ಟ್‌ನಲ್ಲಿ ಕಲ್ಪಿಸಲಾಗಿರುವ ಸಂಚಾರಿ ವಿಶ್ರಾಂತಿ ಗೃಹವನ್ನು ಪರಿಶೀಲಿಸಿದರು. ಇ-ಪಾಸ್ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆ ಕೌಂಟರ್ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿವರ ನೀಡಿದರು.
ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರು ಚೆಕ್‌ಪೋಸ್ಟ್‌ನಲ್ಲಿ ಕ್ವಾರಂಟೈನ್ ಮುದ್ರೆ, ದಿನಾಂಕ ಮುದ್ರೆ
ಹಾಗೂ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ರಿಪೋಟಿಂìಗ್ ಮಾದರಿಯನ್ನು ಆನ್ ಲೈನ್ ಮಾಡಿದರೆ ಸಾಕಷ್ಟು ಸಮಯದ ಉಳಿತಾಯವಾಗುತ್ತದೆ. ಅದೇ ರೀತಿ ಇ-ಪಾಸ್ ವಿತರಿಸಿದ ಬಳಿಕ ಅದರ ಬಗ್ಗೆ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದರೆ ಪ್ರಯಾಣಿಕರ ತಪಾಸಣೆ ಸುಲಭವಾಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಮನವಿ ಮಾಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಡಿಸಿ ಡಾ| ಎಸ್. ಬಿ.ಬೊಮ್ಮನಹಳ್ಳಿ, ರಾಘವೇಂದ್ರ ಸುಹಾಸ್, ಬಿ.ಎಸ್. ಲೋಕೇಶ್ ಕುಮಾರ ಇದ್ದರು.
ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್‌ಪೋಸ್ಟ್ ಪಾತ್ರ ಬಹಳ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಆದರೆ ಮಹಾರಾಷ್ಟ್ರದಿಂದ ಬರುವ ಜನರಿಂದ ಸೋಂಕು ಪ್ರಕರಣ ಹೆಚ್ಚಾಗಿರುವ ಕಾರಣ ಕಳೆದ ವಾರದಿಂದ ಇ-ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸಲಾಗುವುದು.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ