ಕುಷ್ಟಗಿ: ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಮಾರಾಟ ಜೋರಾಗಿದ್ದು, ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಜಾಗೃತಿ ಇದ್ದರೂ ಮಣ್ಣಿನ ಮೂರ್ತಿಗಳ ಸಾಂದರ್ಭಿಕ ಕೊರತೆಯನ್ನು ಪಿಒಪಿ ಮೂರ್ತಿಗಳು ನೀಗಿಸುತ್ತಿವೆ. ನಿಷೇಧದ ಹೊರತಾಗಿಯೂ ಮಾರುಕಟ್ಟೆಯಲ್ಲಿಪರಿಸರಕ್ಕೆಹಾನಿಕಾರಕ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಕಂಡು ಬಂದಿದೆ.
ಪಿಒಪಿ ಗಣೇಶ ಮೂರ್ತಿಗಳು ಮುಖ್ಯ ರಸ್ತೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಆಕರ್ಷಕ ಬಣ್ಣಗಳಿಂದ ಗಮನ ಸೆಳೆಯುತ್ತಿದ್ದು, ಕಡಿಮೆ ಬೆಲೆಗೆ ಲಭಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಿಒಪಿ ಗಣೇಶಮೂರ್ತಿಗಳ ಖರೀದಿ ಅನಿವಾರ್ಯತೆ ಸೃಷ್ಟಿಸಿದೆ. ಇನ್ನೂ ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಮೂರ್ತಿಗಳು ತಯಾರಾಗದೇ ಇರುವುದು ಪಿಒಪಿ ಮೂರ್ತಿಗಳ ಮಾರಾಟಕ್ಕೆ ಕಾರಣವಾಗಿದೆ. ಸೀಮಿತ ಸಂಖ್ಯೆಯಲ್ಲಿರುವ ಮಣ್ಣಿನ ಗಣೇಶ ಮೂರ್ತಿ ತಯಾರಕರು ಈ ಕೊರೊನಾ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಪ್ರೋತ್ಸಾಹ ಇಲ್ಲದೇ ಕಂಗೆಟ್ಟಿದ್ದಾರೆ.
ಮೂರ್ತಿ ತಯಾರಕರಿಗೆ ತಾವು ತಯಾರಿಸಿದ ಎಲ್ಲ ಮೂರ್ತಿಗಳನ್ನು ಮಾರಾಟವಾಗುವ ಗ್ಯಾರಂಟಿ ಇಲ್ಲ. ಈ ಮೂರ್ತಿಗಳ ಬೆಲೆ 500 ರೂ. ದಿಂದ 2,500 ರೂ. ವರೆಗೆ ದರ ಇದೆ. ಮೊದಲಿಗೆ ಇದ್ದ ಬೆಲೆ ಹಬ್ಬದ ದಿನ ಕಡಿಮೆಯಾಗುತ್ತದೆ. ಮೂರ್ತಿಗಳು ಉಳಿದರೆ ಅವುಗಳನ್ನು ವರ್ಷಗಳವರೆಗೆ ಕಾಯ್ದಿಡುವುದು ಸಮಸ್ಯೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕುಷ್ಟಗಿ ಗಣೇಶ ತಯಾರಕ ಯಚ್ಚರಪ್ಪ ಬಡಿಗೇರ ಅವರು, ಪ್ರತಿವರ್ಷ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿದ್ದೇವೆ. ಮಾರಾಟವಾಗದೇ ಇದ್ದರೆ ಹಾಕಿದ ಬಂಡವಾಳ ಮರಳಿ ಬರಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಹೆಚ್ಚು ಆಸೆ ಪಡದೇ ಸೀಮಿತ ಸಂಖ್ಯೆಯಲ್ಲಿ ಮೂರ್ತಿ ತಯಾರಿಸುತ್ತಿದ್ದೇವೆ. ಸ್ಥಳೀಯ ಗ್ರಾಹಕರಿಗೆ ಎಷ್ಟು ಬೇಕೋ ಅಷ್ಟು ಪೂರೈಸಲು ಸಿದ್ಧರಿದ್ದೇವೆ. ಆದರೆ ಕುಷ್ಟಗಿ ಮಾರುಕಟ್ಟೆಯಲ್ಲಿಅನ್ಯತಾಲೂಕುಗಳಿಂದ ಗಣೇಶ ಮೂರ್ತಿಗಳನ್ನು (ಪಿಒಪಿ) ತಂದು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಕಳೆದ ವರ್ಷ ಒಂದು ಮೂರ್ತಿ ಖರೀದಿಸಿದರೆ ಮತ್ತೂಂದು ಉಚಿತ ಎಂದು ಆಫರ್ ನೀಡಿದ್ದರು. ಮಾರಾಟಗಾರರ ಈ ತಂತ್ರ ನಮ್ಮ ಗಣೇಶ ಮೂರ್ತಿ ಮಾರಾಟಕ್ಕೆ ಹೊಡೆತ ಬೀಳುತ್ತಿದೆ. ಸರ್ಕಾರ ಪಿಒಪಿ ಮೂರ್ತಿ ಮಾರಾಟವನ್ನು ಸಂಪೂರ್ಣ ನಿರ್ಬಂಧಿಸಬೇಕಿದೆ ಎಂದರು.