Advertisement

ಚುನಾವಣೆ ನಡೆದರೂ ಅಧಿಕಾರ ಇಲ್ಲ

02:33 AM May 06, 2019 | sudhir |

ಬೆಂಗಳೂರು: ಎರಡನೇ ಹಂತದಲ್ಲಿ ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ಆದರೆ 9 ತಿಂಗಳ ಹಿಂದೆ ಚುನಾವಣೆ ನಡೆದ 109 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನೂ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯಾಗದೆ ಇದ್ದು, ಈ ನಗರಗಳ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ.

Advertisement

ರಾಜ್ಯದ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳು ಸೇರಿ 29 ನಗರ ಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯತ್‌ಗಳ ಸಹಿತ ಒಟ್ಟು 109 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ಮತದಾನ ನಡೆದು, ಸೆ. 3ರಂದು ಫ‌ಲಿತಾಂಶ ಹೊರಬಿದ್ದಿತ್ತು. ಇವುಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆ ಸಂಬಂಧ ಹೈಕೋರ್ಟ್‌ ತೀರ್ಪು ಪ್ರಕಟವಾಗದಿರುವುದರಿಂದ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿ ರಾಜ್ಯ ಸರಕಾರ ಇದೆ. ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಅಭಿವೃದ್ಧಿ ಕೆಲಸಗಳಿಗೆ “ಗ್ರಹಣ’ ಹಿಡಿದಂತಾಗಿದೆ.

ಇಲ್ಲಿ ಆಡಳಿತಾಧಿಕಾರಿಗಳೇ ದರ್ಬಾರ್‌ ನಡೆಸುತ್ತಿದ್ದಾರೆ. ಚುನಾವಣೆ ನಡೆದರೂ ಜನರ ಸಮಸ್ಯೆಗೆ ಸ್ಪಂದಿಸಲಾಗದ ಸ್ಥಿತಿ ಸದಸ್ಯರದ್ದು.

109 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರಕಾರ ಸೆ.3ರಂದು ಅಧಿಸೂಚನೆ ಹೊರಡಿಸಿತ್ತು.

ಆಡಳಿತಾಧಿಕಾರಿಗಳ ದರ್ಬಾರ್‌
ಮೀಸಲಾತಿ ವಿವಾದದಿಂದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ರಾಜ್ಯ ಸರಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅಲ್ಲದೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಬೇಕಿರುವ 2019ರ ಮಾರ್ಚ್‌ನಿಂದ ಜುಲೈವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್‌ ಪೀಠಗಳಲ್ಲಿ ವ್ಯಾಜ್ಯ ಗಳಿರುವ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತು ಪಡಿಸಿ, ಉಳಿದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲೂ ಈಗಾಗಲೇ ಹಲವು ಕಡೆ ಆಡಳಿತಾಧಿಕಾರಿಗಳ ನೇಮಕವಾಗಿದ್ದು, ಕೆಲವು ಕಡೆ ಈ ತಿಂಗಳು ಆಡಳಿತಾಧಿ ಕಾರಿ ಗಳ ನೇಮಕ ಆಗಲಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಸಂಪೂರ್ಣ ಅಧಿಕಾರ ಆಡಳಿತಾಧಿಕಾರಿಗಳ ಕೈಗೆ ಹೋಗಲಿದೆ.

Advertisement

2018ರಲ್ಲಿ ಚುನಾವಣೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ರಾಜ್ಯ ಸರಕಾರ ಈ ಹಂತದಲ್ಲಿ ಏನೂ ಮಾಡಲು ಆಗುವುದಿಲ್ಲ. ಶೀಘ್ರ ತೀರ್ಪು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

– ಅಂಜುಂ ಪರ್ವೇಜ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next