ಉಡುಪಿ: ಪ್ರತೀ ಆರು ತಿಂಗಳಿಗೊಮ್ಮೆ ಸೂರ್ಯ ಹಾಗೂ ಚಂದ್ರ ಗ್ರಹಣಗಳು ಸಂಭವಿಸುತ್ತವೆ. 2024ರಲ್ಲಿ ಮೂರು ಗ್ರಹಣಗಳು ಸಂಭವಿಸಲಿವೆ.
ಆದರೆ ಅವು ಭಾರತದಲ್ಲಿ ಗೋಚರಿಸುವುದಿಲ್ಲ. ಅಪರೂಪದ ಎರಡು ಸೂರ್ಯಗ್ರಹಣ, ಒಂದು ಚಂದ್ರ ಗ್ರಹಣ ಅಮೆರಿಕದಲ್ಲಿ ಗೋಚರಿಸಲಿದೆ. ಎ. 8ಕ್ಕೆ ಖಗ್ರಾಸ ಸೂರ್ಯಗ್ರಹಣ, ಅ. 2ಕ್ಕೆ ಕಂಕಣ ಸೂರ್ಯಗ್ರಹಣ ಹಾಗೂ ಸೆ. 17ಕ್ಕೆ ಪಾರ್ಶ್ವ ಚಂದ್ರ ಗ್ರಹಣವು ಅಮೆರಿಕ ಹಾಗೂ ಆಸುಪಾಸು ದೇಶಗಳಲ್ಲಿ ಗೋಚರಿಸಲಿದೆ.
ನಾಲ್ಕು ಸೂಪರ್ ಮೂನ್ ಆ. 19, ಸೆ. 18, ಅ. 17 ಹಾಗೂ ನ. 15ರಂದು ಕಾಣಿಸಿಕೊಳ್ಳಲಿದೆ. 28 ದಿನಗಳಿಗೊಮ್ಮೆ ದೀರ್ಘವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುವ ಚಂದ್ರ ಒಮ್ಮೆ ಎಪೊಜಿ (ಸಮೀಪದ ದೂರ) ಬರುವುದಿದೆ. ಆ ದಿನ ಹುಣ್ಣಿಮೆಯಾದರೆ ಚಂದ್ರ ಮಾಮೂಲಿಗಿಂತ ಸುಮಾರು 14 ಅಂಶ ದೊಡ್ಡದಾಗಿ ಕಂಡು 24 ಅಂಶ ಹುಣ್ಣಿಮೆ ಪ್ರಭೆ ಹೆಚ್ಚು ಇದನ್ನು ಸೂಪರ್ ಮೂನ್ ಎನ್ನುವರು.
ಚಂದ್ರ ಭೂಮಿಯ ಸರಾಸರಿ ದೂರ ಸುಮಾರು 3,84,400 ಕಿ.ಮೀ. ಆದರೆ ಈ ಸೂಪರ್ ಮೂನ್‌ಗಳಲ್ಲಿ ಸುಮಾರು 3,56,000 ಕಿ.ಮೀ. ಆಸುಪಾಸು ಬರುವುದಿದೆ. ಅಂದರೆ ಸುಮಾರು 28,000 ಕಿ.ಮೀ. ಭೂಮಿಗೆ ಚಂದ್ರ ಹತ್ತಿರ ಬರುತ್ತದೆ. ಹಾಗಾಗಿ ಸೂಪರ್ ಮೂನ್‌ಗಳಲ್ಲಿ ಚಂದ್ರನ ಪ್ರಭೆ ಹೆಚ್ಚಿರುತ್ತದೆ.
ಆ.19ರಂದು 3,61,970 ಕಿ.ಮೀ., ಸೆ.18ರಂದು 3,57,486 ಕಿ.ಮೀ., ಅ. 17ರಂದು 3,57,364 ಕಿ.ಮೀ. ಹಾಗೂ ನ. 15ರಂದು 3,61,867 ಕಿ.ಮೀ. ಇರಲಿದೆ ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.