Advertisement

ನಗರಸಭೆ ವ್ಯಾಪ್ತಿಗೆ ಸದ್ಯಕ್ಕಿಲ್ಲ ನೀರು ಪೂರೈಕೆ ಸಮಸ್ಯೆ

08:50 AM Apr 28, 2018 | Team Udayavani |

ನಗರ: ಹಲವು ವರ್ಷಗಳಿಂದ ಬೇಸಿಗೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಉಂಟಾಗುತ್ತಿದ್ದ ನೀರಿನ ಸಮಸ್ಯೆ ಈ ಬಾರಿ ಕಡಿಮೆಯಾಗಿದೆ. ನಗರಸಭೆ ಆಡಳಿತ ಇತ್ತೀಚಿನ ವರ್ಷಗಳಲ್ಲಿ ಕಂಡುಕೊಂಡ ಮಾರ್ಗೋಪಾಯಗಳು ಫಲ ನೀಡುತ್ತಿವೆ. ಕೆಲವು ವರ್ಷಗಳಿಂದ ನಗರಸಭೆಯ ವಿಸ್ತರಿತ ಪ್ರದೇಶಗಳಾದ ಸಾಮೆತ್ತಡ್ಕ, ಮಚ್ಚಿ ಮಲೆ, ಪರ್ಲಡ್ಕ, ಗೋಳಿಕಟ್ಟೆ, ಪೆರಿಯತ್ತೋಡಿ ಸಹಿತ ಎತ್ತರದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಕಳೆದ ವರ್ಷ ಬೇಸಿಗೆ ಅಂತಿಮ ದಿನಗಳಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 3 ಟ್ಯಾಂಕರ್‌ಗಳನ್ನು ಗುತ್ತಿಗೆ ಪಡೆದು ದಿನಂಪ್ರತಿ 6 ಟ್ರಿಪ್‌ ಗಳಂತೆ ಸಮಸ್ಯೆಗಳಿದ್ದ ವಿಸ್ತರಿತ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗಿತ್ತು. ಆದರೆ ಈ ವರ್ಷ ಸದ್ಯಕ್ಕೆ ಗುಡ್ಡ ಪ್ರದೇಶ ಪೆರಿಯತ್ತೋಡಿಯನ್ನು ಹೊರತುಪಡಿಸಿ ಎಲ್ಲಿಗೂ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವ ಅಗತ್ಯ ಇದುವರೆಗೆ ಬಂದಿಲ್ಲ.

Advertisement

ಕೂರ್ನಡ್ಕ ಪ್ರದೇಶದಲ್ಲಿ ನೀರು ಸರಬರಾಜು ಕೊಳವೆ ಬಾವಿ ಬತ್ತಿ ಹೋಗಿರುವ ಕಾರಣ ಆರಂಭದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಉಳಿದಂತೆ ನಗರೋತ್ಥಾನ ಕೆಲಸಗಳು ನಡೆಯುತ್ತಿರುವ ಕೊಡಿಪ್ಪಾಡಿ, ಕೆರೆಮೂಲೆ, ಗುಂಪಕಲ್ಲು ಪರಿಸರದಲ್ಲಿ ಪೈಪ್‌ ಒಡೆದ ಕಾರಣ ನೀರಿನ ಸಂಪರ್ಕ ಕಡಿತಗೊಂಡಿದ್ದು, ಸರಿಪಡಿಸುವ ಕಾರ್ಯ ನಡೆಯುತ್ತಿದೆ.

80 ಲಕ್ಷ ಲೀ. ನೀರು ಆವಶ್ಯಕತೆ
27 ವಾರ್ಡ್‌ಗಳನ್ನು ಹೊಂದಿರುವ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ 57,500 ಜನಸಂಖ್ಯೆಯಿದೆ. ಪ್ರತೀ ದಿನ 80 ಲಕ್ಷ ಲೀ. ನೀರು ಪೂರೈಸಲು 10,200 ನೀರು ಸಂಪರ್ಕಗಳನ್ನು ನೀಡಲಾಗಿದೆ. ಇದರ ಜತೆಗೆ 34 ಶಿಕ್ಷಣ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಸಂಪರ್ಕ ಪಡೆದಿವೆ. ಕಾಲನಿ ಪ್ರದೇಶಗಳಲ್ಲಿ ಅಂದಾಜು 500 ಸಾರ್ವಜನಿಕ ನಳ್ಳಿ ಸಂಪರ್ಕಗಳಿವೆ.

ಸುಮಾರು 75 ಲಕ್ಷ ಲೀಟರ್‌ ನೀರು ಉಪ್ಪಿನಂಗಡಿ ಕುಮಾರಧಾರಾ ನದಿಯಿಂದ ನೆಕ್ಕಿಲಾಡಿ ರೇಚಕ ಸ್ಥಾವರದ ಮೂಲಕ ನಗರಸಭಾ ವ್ಯಾಪ್ತಿಗೆ ಪೂರೈಕೆಯಾಗುತ್ತದೆ. ಉಳಿದ ನೀರನ್ನು ಬೋರ್‌ವೆಲ್‌ಗ‌ಳಿಂದ ಪಡೆಯಲಾಗುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 144 ಬೋರ್‌ವೆಲ್‌ ಗ‌ಳಿದ್ದು, ಒಂದು ವರ್ಷದ ಅವಧಿಯಲ್ಲಿ 22 ಹೊಸ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ.

ಕೆಲವು ವಿಸ್ತರಿತ ಹಾಗೂ ಎತ್ತರದ ಪ್ರದೇಶಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಆವಶ್ಯಕತೆಯನ್ನು ಮನಗಂಡು ಒಂದು ವರ್ಷ ನಗರಸಭೆ ಕಾರ್ಯಯೋಜನೆ ರೂಪಿಸಿ ಮುಂದಿನ ವರ್ಷದಿಂದ ಟ್ಯಾಂಕರ್‌ನಲ್ಲಿ ನೀರು ನೀಡುವ ಪ್ರಕ್ರಿಯೆಯನ್ನು ಸಂಪೂರ್ಣ ನಿಲ್ಲಿಸಲು ಯತ್ನ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಅಗತ್ಯ ಇರುವಲ್ಲಿ 22 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಪೈಪ್‌ ಒಡೆಯುವುದು ಸಹಿತ ನೀರು ಪೂರೈಕೆ ವ್ಯತ್ಯಯಗಳ ಸಂದರ್ಭ ಟ್ಯಾಂಕರ್‌ಗಳಲ್ಲಿ ತತ್‌ಕ್ಷಣಕ್ಕೆ ನೀರು ಪೂರೈಕೆ ಮಾಡಲು ಒಂದು ಟ್ಯಾಂಕರ್‌ನ ವ್ಯವಸ್ಥೆ ಮಾಡಲಾಗಿದೆ.

Advertisement

ಶುಲ್ಕ ವಸೂಲಾತಿ
ವಸತಿ ಪ್ರದೇಶಗಳ ಮನೆಗಳಿಗೆ 90 ರೂ., ವಾಣಿಜ್ಯ ಉದ್ದೇಶಗಳಿಗೆ 500 ರೂ., ಇತರ ಉದ್ದೇಶಗಳಿಗೆ 225 ರೂ. ಮಾಸಿಕ ನೀರಿನ ಕರ ವಿಧಿಸಲಾಗುತ್ತದೆ. 10 ಸಾವಿರ ಲೀ. ನೀರಿನ ಬಳಕೆಯ ತನಕ ಈ ಶುಲ್ಕ ಅನ್ವಯವಾಗುತ್ತಿದ್ದು, ಹೆಚ್ಚುವರಿ ಬಳಕೆಗೆ ಹೆಚ್ಚುವರಿ ಶುಲ್ಕವನ್ನು ಮೀಟರ್‌ ರೀಡಿಂಗ್‌ ಮೂಲಕ ವಿಧಿಸಲಾಗುತ್ತದೆ. ಗುತ್ತಿಗೆದಾರರಿಗೆ ಮೀಟರೊಂದರ 15 ರೂ. ನೀಡಲಾಗುತ್ತದೆ.

ಬಿಲ್‌ ಸಂಗ್ರಹ ಯಶಸ್ವಿ
ನಗರಸಭೆಯಲ್ಲಿ ಸಿಬಂದಿ ಕೊರತೆಯ ಕಾರಣದಿಂದ ನೀರಿನ ಬಿಲ್‌ ಸಂಗ್ರಹವನ್ನು ಒಂದು ವರ್ಷದಿಂದ ಪ್ರಸನ್ನ ಟೆಕ್ನಾಲಜಿಗೆ ಗುತ್ತಿಗೆ ನೀಡಲಾಗಿದೆ. ಅನಂತರದಲ್ಲಿ ಸಮರ್ಪಕ ಸಂಗ್ರಹಣೆ ಸಾಧ್ಯವಾಗುತ್ತಿದ್ದು, ಶೇ. 95.6ರಷ್ಟು ನೀರಿನ ತೆರಿಗೆ ಸಂಗ್ರಹಿಸುವ ಮೂಲಕ ಇಲಾಖೆಯ ಸಚಿವರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಸಮಸ್ಯೆ ಇಲ್ಲ
ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆಯಿಂದ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರಣದಿಂದ ಈ ಬಾರಿ ಸಮಸ್ಯೆ ಎದುರಾಗುವುದಿಲ್ಲ. ನೆಕ್ಕಿಲಾಡಿ ಡ್ಯಾಂನಲ್ಲೂ 630 ಮಿಲಿಯ ಲೀಟರ್‌ ನೀರಿನ ಸಂಗ್ರಹವಿದ್ದು, ಉತ್ತಮವಿದೆ. ಪೈಪ್‌ ಒಡೆಯುವುದು ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳು ಗಮನಕ್ಕೆ ಬಂದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next