ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಪ್ರಕರಣಗಳನ್ನು ನ್ಯಾಯಾಧೀಶರುಗಳಲ್ಲಿ ಹಂಚಿ ಹಾಕುವ ವರಿಷ್ಠ ನ್ಯಾಯಮೂರ್ತಿಗಳ ಮಾಸ್ಟರ್ ಆಫ್ ರೋಸ್ಟರ್ ಪಾತ್ರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣಗಳನ್ನು ಹಂಚಿ ಹಾಕುವ ವಿಷಯದಲ್ಲಿ ವರಿಷ್ಠ ನ್ಯಾಯಮೂರ್ತಿಗಳು ಐವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ‘ವರಿಷ್ಠ ಮಂಡಳಿ’ ಯ (ಕೊಲೆಜಿಯಂ) ಓರ್ವ ಸದಸ್ಯರೆಂದು ಪರಿಭಾವಿಸಲಾಗದು; ಹಾಗೆ ಮಾಡಿದಲ್ಲಿ ಸುಪ್ರೀಂ ಕೋರ್ಟಿನ ದಿನವಹಿ ಕಾರ್ಯಕಲಾಪಗಳು ಸುಲಲಿತವಾಗಿ ಮತ್ತು ಸಾಂಗವಾಗಿ ನಡೆಯುವುದೇ ಕಷ್ಟವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವರಿಷ್ಠ ನ್ಯಾಯಮೂರ್ತಿಗಳು ನ್ಯಾಯಾಧೀಶರುಗಳಿಗೆ ಕೇಸುಗಳನ್ನು ಹಂಚಿ ಹಾಕುವ ಈಗಿನ ರೋಸ್ಟರ್ ಪದ್ಧತಿಯನ್ನು ಪ್ರಶ್ನಿಸಿ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟು ಸುಪ್ರೀಂ ಕೋರ್ಟ್ ಇಂದು ಈ ಆದೇಶ ನೀಡಿತು.
ಸಿಜೆಐ ಅವರು ಮಾಸ್ಟರ್ ಆಫ್ ರೋಸ್ಟರ್ ಎಂಬ ವಿಷಯದಲ್ಲಿ ಯಾವುದೇ ವಿವಾದ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ತಾವೇ ಆಯ್ಕೆ ಮಾಡುವ ನಾಯಾಧೀಶರುಗಳಿಗೆ ಅಥವಾ ನಿರ್ದಿಷ್ಟ ನ್ಯಾಯಾಧೀಶರಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ಸಿಜೆಐ ಅವರ ಈಗ ಚಾಲ್ತಿಯಲ್ಲಿರುವ ಮಾಸ್ಟರ್ ಆಫ್ ರೋಸ್ಟರ್ ಪದ್ಧತಿಯು ಮಾರ್ಗಸೂಚಿ ಇಲ್ಲದ, ಪ್ರಶ್ನಾತೀತವಾದ, ಸ್ವೇಚ್ಚಾಚಾರದ ಅಧಿಕಾರವಾಗಿರಲು ಸಾಧ್ಯವಿಲ್ಲ ಎಂದು ಶಾಂತಿ ಭೂಷಣ್ ಆರೋಪಿಸಿದ್ದರು.
ಸಿಜೆಐ ಅವರ ಮಾಸ್ಟರ್ ಆಫ್ ರೋಸ್ಟರ್ ಅಧಿಕಾರವನ್ನು ಪ್ರಶ್ನಿಸಿ ತಾನು ಈ ಅರ್ಜಿ ಸಲ್ಲಿಸುತ್ತಿರುವುದು ನ್ಯಾಯಾಲಯವನ್ನು ಬಲಪಡಿಸುವಉದ್ದೇಶದ್ದಾಗಿದೆಯೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಎಂದು ಶಾಂತಿಭೂಷಣ್ ಹೇಳಿದ್ದರು.