ಹೊಸದಿಲ್ಲಿ : ”ನಾನು ರಾಜ್ಯದ ಉನ್ನತ ಹುದ್ದೆಯನ್ನು ತೊರೆಯಲು ಬಯಸುತ್ತೇನೆ, ಆದರೆ ಹುದ್ದೆಯೇ ನನ್ನನ್ನು ಬಿಡುತ್ತಿಲ್ಲ ಮತ್ತು ಬಹುಶಃ ಭವಿಷ್ಯದಲ್ಲಿಯೂ ನನ್ನನ್ನು ಬಿಡುವುದಿಲ್ಲ” ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗುರುವಾರ ವಿಶ್ವಾಸದ ಹೇಳಿಕೆ ನೀಡಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಕ್ಷದ ಹೈಕಮಾಂಡ್ ಮೂರು ಬಾರಿ ರಾಜ್ಯವನ್ನು ಮುನ್ನಡೆಸಲು ನನ್ನನ್ನು ಆಯ್ಕೆ ಮಾಡಿದೆ ಎಂಬುದು ನನ್ನಲ್ಲಿ ಇರುತ್ತದೆ. ಆದರೆ ನಾಯಕತ್ವದ ಯಾವುದೇ ನಿರ್ಧಾರ ಮುಂದೆ ಕೈಗೊಂಡರೂ ಅದು ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ” ಎಂದರು.
ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರನ್ನು ಬಿಜೆಪಿ ಶಿಕ್ಷಿಸಬಾರದು ಎಂದ ಗೆಹ್ಲೋಟ್, ಅದು ಅವರಿಗೆ “ಅನ್ಯಾಯ” ಎಂದರು. 2020 ರಲ್ಲಿ ಬಂಡಾಯದ ನಂತರ ಅವರ ಕಾಂಗ್ರೆಸ್ ಸರ್ಕಾರವು ಬೆದರಿಕೆಗೆ ಒಳಗಾದಾಗ ರಾಜೇ ಅವರ ಹೇಳಿಕೆಗಳನ್ನು ಅವರು ಉಲ್ಲೇಖಿಸಿದರು.
ವಿಪಕ್ಷ ನಾಯಕರನ್ನು ಗುರಿಯಾಗಿರಿಸಿಕೊಂಡು ಇಡಿ ಮತ್ತು ಐಟಿ ದಾಳಿಯ ಕುರಿತು ಆಕ್ರೋಶ ಹೊರ ಹಾಕಿದ ಗೇಹ್ಲೋಟ್, ಪ್ರಧಾನಿ ನರೇಂದ್ರ ಮೋದಿ ಅವರು ತತ್ ಕ್ಷಣ ಮಧ್ಯಪ್ರವೇಶಿಸಬೇಕು, ಚುನಾವಣ ಆಯೋಗವೂ ಮಧ್ಯಪ್ರವೇಶಿಸಬೇಕು. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದರು.
ಟಿಕೆಟ್ ಹಂಚಿಕೆ ಕುರಿತು ಪಕ್ಷದಲ್ಲಿ ಅಸಮಾಧಾನಗಳಿವೆಯೇ ಎಂದು ಪ್ರಶ್ನಿಸಿದಾಗ, ಯಾವುದೇ ಭಿನ್ನಮತಗಳಿಲ್ಲ. ಸರ್ವಾನುಮತದಿಂದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು. ಯಾವಾಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಕುರಿತು ಪ್ರತಿಕ್ರಿಯಿಸಲಿಲ್ಲ.
ನವೆಂಬರ್ 25 ರಂದು ರಾಜಸ್ಥಾನ ದಲ್ಲಿ ಮತದಾನ ನಡೆಯಲಿದ್ದು,ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.