Advertisement

ಮೀನುಗಾರರಿಗೆ ಸಿಕ್ಕಿಲ್ಲ ಡೀಸೆಲ್‌ ಸಬ್ಸಿಡಿ ಹಣ

09:15 AM Nov 20, 2018 | Team Udayavani |

ಕುಂದಾಪುರ: ಒಂದೆಡೆ ಡೀಸೆಲ್‌ ದರ ಏರಿಕೆ, ಇನ್ನೊಂದೆಡೆ ಮೀನು ದರ ಕುಸಿತದಿಂದ ಕಂಗಾಲಾಗಿರುವ ಮೀನುಗಾರರು ಈಗ ಡೀಸೆಲ್‌ ಸಬ್ಸಿಡಿಯೂ ಸಿಗದೆ ಸಂಕಷ್ಟದಲ್ಲಿದ್ದಾರೆ. ಸರಕಾರ ಹಣ ಇನ್ನೂ ಬಿಡುಗಡೆ ಮಾಡದಿರುವುದೇ ಇದಕ್ಕೆ ಕಾರಣ.  

Advertisement

ಉಡುಪಿಯಲ್ಲಿ 1,600 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 953 ಮಂದಿ ಡೀಸೆಲ್‌ ಸಬ್ಸಿಡಿ ಫ‌ಲಾನುಭವಿ ಮೀನುಗಾರರಿದ್ದಾರೆ. ಇದಕ್ಕಾಗಿ ಸರಕಾರದಿಂದ ಉಡುಪಿ ಜಿಲ್ಲೆಗೆ ತಿಂಗಳಿಗೆ ಒಟ್ಟು 7 ಕೋ.ರೂ. ಹಾಗೂ ದ.ಕನ್ನಡಕ್ಕೆ 6.32 ಕೋ.ರೂ. ನೀಡಲಾಗುತ್ತಿತ್ತು. ಈ ಮುಂಗಾರು ಋತುವಿನ ಆಗಸ್ಟ್‌ನಲ್ಲಿ ದ. ಕನ್ನಡದ 760 ಮೀನುಗಾರರ 6.53 ಕೋ.ರೂ. ಬಿಡುಗಡೆ ಆಗಿದೆ, ಉಡುಪಿಯಲ್ಲಿ ಮಾತ್ರ ಇನ್ನೂ ನೀಡಿಲ್ಲ.

ಬದಲಾವಣೆಯಿಂದ ನಿರಂತರ ಸಮಸ್ಯೆ
ಹಿಂದೆ ಮೀನುಗಾರರಿಗೆ ಸಬ್ಸಿಡಿ ಒದಗಣೆ ನೇರವಾಗಿ ಬಂಕ್‌ಗಳಲ್ಲಿ ರಿಯಾಯಿತಿ ದರದ ಡೀಸೆಲ್‌ ನೀಡುವ ಮೂಲಕ ನಡೆಯುತ್ತಿತ್ತು. ಆದರೆ 2 ವರ್ಷಗಳಿಂದ ಈಚೆಗೆ ಇದನ್ನು ರದ್ದುಗೊಳಿಸಲಾಗಿದೆ. ಈಗ ಲೀಟರ್‌ಗೆ ಸುಮಾರು 9 ರೂ.ಗಳಷ್ಟು ಸಬ್ಸಿಡಿ ಹಣವನ್ನು ಮೀನುಗಾರರ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು ವರ್ಗಾಯಿಸಲಾಗುತ್ತಿದೆ. ಆದರೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಎನ್ನುವುದು ಮೀನುಗಾರರ ಅಳಲು.  ಕಳೆದ ಮಾರ್ಚ್‌- ಎಪ್ರಿಲ್‌ ಮೀನುಗಾರಿಕೆ ಋತುವಿನ ಸಬ್ಸಿಡಿ ಹಣ ಈ ಮೀನುಗಾರಿಕೆ ಋತುವಿನ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಿದೆ. ಈ ವರ್ಷ ಆಗಸ್ಟ್‌ನಿಂದೀಚೆಗೆ ಸಬ್ಸಿಡಿ ಹಣ ಇನ್ನೂ ಸಿಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳೊಂದರ ಸಬ್ಸಿಡಿ ಮಾತ್ರ ಬಿಡುಗಡೆ ಮಾಡಿದ್ದಾರೆ. 

ಸಬ್ಸಿಡಿ ಸಿಕ್ಕರೆ ಪ್ರಯೋಜನ
ಡೀಸೆಲ್‌ ದರ ಈಗ 71 ರೂ. ಇದೆ. ಉತ್ತಮ ಪ್ರಮಾಣದಲ್ಲಿ ಮೀನು ಸಿಗುತ್ತಿದ್ದರೂ ಗೋವಾ ನಿಷೇಧದಿಂದಾಗಿ ದರ ಕಡಿಮೆಯಿದೆ. ಇದರಿಂದ ಲಾಭಕ್ಕೆ ಹೊಡೆತ ಬಿದ್ದಿದೆ. ಸರಕಾರ ಸಬ್ಸಿಡಿ ಹಣವನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿದರೆ ಸ್ವಲ್ಪವಾದರೂ ಪ್ರಯೋಜನವಾಗಬಹುದು. 
 ರಮೇಶ್‌ ಕುಂದರ್‌, ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್‌ ಮೀನುಗಾರರ ಸ್ವ-ಸಹಾಯ ಸಂಘ

ತಾಂತ್ರಿಕ ಸಮಸ್ಯೆಯಿಂದ ವಿಳಂಬ
ಕೆ-2 ಸಾಫ್ಟ್‌ವೇರ್‌ ತಂತ್ರಾಂಶದ ಸಮಸ್ಯೆಯಿಂದ ಡೀಸೆಲ್‌ ಸಬ್ಸಿಡಿ ಹಣ ಸಿಗುವಲ್ಲಿ ವಿಳಂಬವಾಗಿದೆ. ಈ ಬಗ್ಗೆ ಬೆಂಗಳೂರಿನ ಇಲಾಖೆಯ ವರಿಷ್ಠರ ಗಮನಕ್ಕೆ ತರಲಾಗಿದೆ. ಅನುದಾನ ಇದೆ, ಆದರೆ ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿದೆ. ಶೀಘ್ರ ಮೀನುಗಾರರ ಖಾತೆಗೆ ಹಣ ವರ್ಗಾವಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. 
 ಪಾರ್ಶ್ವನಾಥ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ಉಡುಪಿ 

Advertisement

ಕೂಡಲೇ ಬಿಡುಗಡೆ
ದ.ಕ. ಜಿಲ್ಲೆಯಲ್ಲಿ ಆಗಸ್ಟ್‌  ತಿಂಗಳಿನ ಸಬ್ಸಿಡಿ ಹಣ ಮೀನುಗಾರರ ಖಾತೆಗೆ ವರ್ಗಾಯಿಸಲಾಗಿದೆ. ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ಅದು ಬೆಂಗಳೂರು ಮಟ್ಟದಲ್ಲಿ ಆಗಬೇಕಿರುವುದರಿಂದ ಸ್ವಲ್ಪ ವಿಳಂಬವಾಗುತ್ತದೆ. 
  ಚಿಕ್ಕವೀರ ನಾಯ್ಕ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ದ.ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next