ವರದಿ: ಬಸವರಾಜ ಹೊಂಗಲ್
ಧಾರವಾಡ: ಶ್ಯೂರಿಟಿಯೇ ಇಲ್ಲದಾಗಿರುವ ಟೆಂಡರ್ ಶ್ಯೂರ್ ರಸ್ತೆ, ಅಗೆತವೇ ನಿಲ್ಲದ ಒಳರಸ್ತೆಗಳು, ಸಾವಿನ ಕೂಪಕ್ಕೆ ಬಾಯಿ ತೆರೆದು ನಿಂತ ಚರಂಡಿ ಮೋರಿಗಳು, ಅತಿಕ್ರಮಣಕ್ಕೆ ಒಳಗಾದ ಪಾಲಿಕೆ ಆಸ್ತಿಗಳು, ಆಮೆಗತಿಯಲ್ಲಿ ಸಾಗಿರುವ ಕಾಮಗಾರಿಗಳು. ಒಟ್ಟಿನಲ್ಲಿ ಇಲ್ಲೇನಿದ್ದರೂ ಹೈಟೆಕ್ ವಾರ್ಡ್‌ಗಳೇ. ಆದರೂ ಕಾಣುತ್ತಿಲ್ಲ ಮೂಲಸೌಕರ್ಯಗಳ ಪರಿಪೂರ್ಣತೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 10 ರಿಂದ 34ರ ವರೆಗಿನ ವಾರ್ಡ್‌ಗಳ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿವೆ ಈಮೇಲಿನ ವಿಚಾರಗಳು. ಧಾರವಾಡದ ಉಳವಿ ಚೆನ್ನಬಸವೇಶ್ವರ ಗುಡ್ಡದಿಂದ ಹಿಡಿದು ಹುಬ್ಬಳ್ಳಿ ಗೋಕುಲ ರಸ್ತೆ ವರೆಗಿನ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಒಟ್ಟು 25 ವಾರ್ಡ್‌ಗಳು ಸದ್ಯಕ್ಕೆ ಅಭಿವೃದ್ಧಿ ಪಥದಲ್ಲಿದ್ದರೂ ಮೂಲಸೌಕರ್ಯಗಳ ಕೊರತೆ ಮಾತ್ರ ಎದ್ದು ಕಾಣುತ್ತಿದೆ.
ಅವಳಿ ನಗರವನ್ನು ಪೂರ್ವ-ಪಶ್ಚಿಮವಾಗಿ ವಿಭಜಿಸುವ ರಾಷ್ಟ್ರೀಯ ಹೆದ್ದಾರಿ-4ರ (ಇಂದಿನ ಬಿಆರ್‌ಟಿಎಸ್ ರಸ್ತೆ ) ಪಶ್ಚಿಮ ಭಾಗ ವ್ಯಾಪ್ತಿಯ ಈ ವಾರ್ಡ್‌ಗಳಲ್ಲಿ ಸಿರಿವಂತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರೂ, ಇಲ್ಲಿರುವ ಕೊಳಚೆ ಪ್ರದೇಶಗಳಲ್ಲಿನ ಬಡವರಿಗೆ ಇನ್ನೂ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
ಅಭಿವೃದ್ಧಿ ಕಾಣದ ಒಳರಸ್ತೆಗಳು: ಧಾರವಾಡದ 18 ವಾರ್ಡ್‍ಗಳ ಪೈಕಿ ಸದ್ಯಕ್ಕೆ ಕೆಸಿಡಿಯಿಂದ ಕೆಯುಡಿ ವೃತ್ತದ ಮೂಲಕ ತಪೋವನ ವರೆಗಿನ ರಾ.ಹೆ.28ರ ಭಾಗ ಸಿಮೆಂಟ್ ರಸ್ತೆಯಾಗಿ ಮಾರ್ಪಾಟಾಗಿದೆ. ಇದರಂತೆ ಲಿಂಗಾಯತ ಭವನದಿಂದ ದಾಸನಕೊಪ್ಪ ವೃತ್ತದ ವರೆಗಿನ ರಸ್ತೆ ಕೂಡ ಸಿಮೆಂಟ್ ರಸ್ತೆಯಾಗಿದ್ದು, ಈವೆರಡು ರಸ್ತೆಗಳು ಸದ್ಯಕ್ಕೆ ಪ್ರಧಾನವಾಗಿ ಅಭಿವೃದ್ಧಿ ಹೊಂದಿದ್ದು ಬಿಟ್ಟರೆ, ಒಳರಸ್ತೆಗಳು ಮಾತ್ರ ಇನ್ನೂ ಅಭಿವೃದ್ಧಿ ಕಂಡಿಲ್ಲ. ರಸ್ತೆ ಅಗೆತವಂತೂ ವರ್ಷವಿಡೀ ನಡೆಯುತ್ತಲೇ ಇರುತ್ತದೆ. ಶಾಶ್ವತ ಕಾಮಗಾರಿ, ಸಿಮೆಂಟ್ ರಸ್ತೆಗಳನ್ನು ಸಹ ಮೇಲಿಂದ ಮೇಲೆ ಅಗೆಯಲಾಗುತ್ತಿದ್ದು, ಯೋಜನೆಗಳು ಪರಿಪೂರ್ಣ ಸ್ವರೂಪದಲ್ಲಿ ಜಾರಿಯಾಗುತ್ತಲೇ ಇಲ್ಲ.