Advertisement

ಅಭಿವೃದ್ಧಿ ಕೆಲಸಗಳಿಗೆ ಪಕ್ಷ ನೋಡಲ್ಲ: ಸಚಿವ ನಿರಾಣಿ

07:06 PM Jul 08, 2021 | Team Udayavani |

ಅಫಜಲಪುರ: ಜನ ನೀಡಿದ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು. ಹೀಗಾಗಿ ನಾನು ಅಭಿವೃದ್ಧಿ ಕೆಲಸದಲ್ಲಿ ಪಕ್ಷ ನೋಡೋದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ 9.29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಫಜಲಪುರ ಶಾಸಕರ ಕಾರ್ಯಕ್ಷಮತೆ ನೋಡಿದರೆ ಅವರಿಗಿನ್ನೂ ವಯಸ್ಸಾದಂತೆ ಕಾಣುವುದಿಲ್ಲ. ಹೀಗಿದ್ದಾಗ ನಾವೇಕೆ ಸುಮ್ಮನೆ ಕೂರಬೇಕು. ನಾವು ಹೆಚ್ಚು ಕೆಲಸ ಮಾಡೋಣ ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಅಡ್ಡಾಡಿದ್ದೇನೆ. ಸಾಕಷ್ಟು ಕೆಲಸ ಮಾಡೋದು ಬಾಕಿ ಇದೆ. ಹಂತ ಹಂತವಾಗಿ ಎಲ್ಲವನ್ನು ಸರಿಪಡಿಸುವ ಕೆಲಸ ಮಾಡೋಣ. ಈ ಭಾಗದ 14 ಸಾವಿರ ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಶಿಕ್ಷಣದ ನಂತರ ಕೃಷಿ ಮತ್ತು ಕೈಗಾರಿಕೆಗಳಿಗೆ ಒತ್ತು ನೀಡುವ ಮೂಲಕ ಈ ಭಾಗದ ನಿರುದ್ಯೋಗ ಸಮಸ್ಯೆಗೆ
ಮುಕ್ತಿ ನೀಡೋಣ ಎಂದರು.

ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಸಚಿವ ಮುರುಗೇಶ ನಿರಾಣಿ ನಾವು ಯಾವ ಕೆಲಸ ಹೇಳಿದರೂ ಆಗುವುದಿಲ್ಲ ಎಂದವರಲ್ಲ. ಅವರಿಗೆ ಅಭಿವೃದ್ಧಿ ವಿಷಯದಲ್ಲಿ ಪಕ್ಷಭೇದ ಗೊತ್ತಿಲ್ಲ. ಹೀಗಾಗಿ ಅವರು ರಾಜ್ಯದಲ್ಲಿ ಎಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಪಕ್ಷಭೇದ ಮಾಡದೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವ ಮೂಲಕ ಉದಾರತೆ ತೋರಿದ್ದಾರೆ. ಅವರಿಂದ ತಾಲೂಕಿಗೆ ಇನ್ನಷ್ಟು ಅನುದಾನ ಮತ್ತು ಅಭಿವೃದ್ಧಿ
ಕೆಲಸಗಳಾಗಲಿವೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ(ಬಿ) ಮಾತನಾಡಿ, ನಾನು ರಾಜಕೀಯ ಆರಂಭಿಸಿದ್ದು ಬಡದಾಳ ಜಿ.ಪಂ ಮತ ಕ್ಷೇತ್ರದಿಂದ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ. ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿ ನಿಮ್ಮ ಋಣದ ಭಾರ ಇಳಿಸಿಕೊಳ್ಳುತ್ತೇನೆ ಎಂದರು. ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಮಾತನಾಡಿ, ಅರ್ಜುಣಗಿ ಕಾಲೇಜಿಗೆ ಪರಿಷತ್‌ ಸದಸ್ಯರ ಅನುದಾನದಲ್ಲಿ ಎರಡು ಸ್ಮಾರ್ಟ್‌ ಕ್ಲಾಸ್‌ ನೀಡುವುದಾಗಿ ಘೋಷಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಸಹಾಯಕ ನಿರ್ದೇಶಕ ಚೇತನ ಗುರಿಕರ, ಗ್ರಾ.ಪಂ ಅಧ್ಯಕ್ಷ ಅಮೃತ ಮಾತಾರಿ, ಮಾಜಿ ಜಿ.ಪಂ ಸದಸ್ಯರಾದ ಅರುಣಕುಮಾರ ಪಾಟೀಲ, ಸಿದ್ದಾರ್ಥ ಬಸರಿಗಿಡ, ಮತೀನ್‌ ಪಟೇಲ್‌, ಮುಖಂಡರಾದ ಪ್ರಕಾಶ ಜಮಾದಾರ, ಶರಣು ಕುಂಬಾರ, ಗುರುಶಾಂತ ಬಿರಾದಾರ, ಪ್ರಾಂಶುಪಾಲ ದತ್ತು ಸೊನ್ನ ಸೇರಿದಂತೆ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next