Advertisement

ಉತ್ತರ ಕರ್ನಾಟಕ ಅಭಿವೃದ್ಧಿ ಶೂನ್ಯ: ವಾಟಾಳ್‌

03:20 PM Aug 25, 2020 | Suhan S |

ಹುಬ್ಬಳ್ಳಿ: ಕರ್ನಾಟಕ ಏಕೀಕರಣವಾಗಿ ದಶಕಗಳೇ ಉರುಳಿದರೂ ಉತ್ತರ ಕರ್ನಾಟಕದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ಹೇಳಿದರು.

Advertisement

ಇಲ್ಲಿನ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸೋಮವಾರ ಚಾಪೆಯ ಮೇಲೆ ಮಲಗುವ ಮೂಲಕ ಅವರು ವಿನೂತನ ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕದ ಕಣ್ಣೀರಿನ ಕಥೆ ಕೇಳುವವರು ಯಾರೂ ಇಲ್ಲದಂತಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ಹೋರಾಟಗಳ ನಂತರ ಕರ್ನಾಟಕ ಏಕೀಕರಣವಾಗುವ ಮೂಲಕ ಅಖಂಡ ಕರ್ನಾಟಕ ಒಂದು ಎಂದು ಹೇಳಲಾಯಿತು. ಆದರೆ ಉತ್ತರ ಕರ್ನಾಟಕ ಮಾತ್ರ ಅಂದಿನಿಂದಲೂ ನಿರ್ಲಕ್ಷಕ್ಕೆ ಒಳಗಾಗುತ್ತಲೇ ಬಂದಿದೆ ಎಂದರು. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದಾರೆ ಯಾತಕ್ಕಾಗಿ ಎನ್ನುವುದೇ ತಿಳಿಯುತ್ತಿಲ್ಲ. ಸರಕಾರಿ ಕಚೇರಿಗಳು ಬರಲಿಲ್ಲ, ಸಚಿವರು ಬರುವುದಿಲ್ಲ, ಅಧಿಕಾರಿಗಳು ಬರಲಿಲ್ಲ, ಅಧಿವೇಶನಗಳು ಸರಿಯಾಗಿ ನಡೆಯುತ್ತಿಲ್ಲ, ಹೀಗಾದರೆ ಉತ್ತರ ಕರ್ನಾಟಕ ಅಭಿವೃದ್ಧಿಆಗುವುದು ಯಾವಾಗ ಎನ್ನುವುದೇ ಪ್ರಶ್ನೆಯಾಗಿ ಉಳಿಯುತ್ತಿದೆ. ಉತ್ತರ ಕರ್ನಾಟಕ ಬಗ್ಗೆ ಪ್ರಾಮಾಣಿಕ ಚಿಂತನೆಗಳಿಲ್ಲವಾಗಿದೆ. ಬೆಂಗಳೂರಿನಲ್ಲಿ ಬಿಡಿಎಮಾರಾಟ ಮಾಡಿ ಆಗಿದೆ. ಸರಕಾರಿ ಜಾಗಗಳನ್ನು ಮಾರುತ್ತಿದ್ದಾರೆ. ಮುಂದೂಂದು ದಿನ ಸುವರ್ಣ ಸೌಧವನ್ನು ಮಾರುತ್ತಾರೆ ಎಂದರು.

ಉತ್ತರ ಕರ್ನಾಟಕದ ರಾಜಕಾರಣ ಹೊಲಸಾಗಿದೆ. ಎಲ್ಲರೂ ಸ್ವಾರ್ಥಿಗಳಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆಗಳಿಲ್ಲ. ಶಾಸನ ಸಭೆ ಸುವರ್ಣ ಸೌಧದಲ್ಲೇ ಕರೆಯಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಕಳೆದ ವರ್ಷ ಅಪಾರ ಪ್ರಮಾಣದ ಹಾನಿಯಾದರೂ ಪ್ರಧಾನಮಂತ್ರಿ ಕಣ್ತೆರೆದು ನೋಡುತ್ತಿಲ್ಲ. ಪರಿಹಾರ ನೀಡಿಲ್ಲ. ಪ್ರಧಾನಮಂತ್ರಿಗಳು ಯಾಕೆ ಬರುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯಕ್ಕೆ 25 ಸಾವಿರ ಕೋಟಿ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಲೇಬೇಕು. ಸಿಎಂ ಬಿ.ಎಸ್‌. ಯಡಿಯೂರಪ್ಪನವರು ವೈಮಾನಿಕ ಸಮೀಕ್ಷೆ ಬದಲಾಗಿ ರಸ್ತೆಯ ಮೂಲಕ ಆಗಮಿಸಿ ಸಮೀಕ್ಷೆ ಮಾಡಿ ಇಲ್ಲಿನ ಜನರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.

ಪಾರ್ಥ ಸಾರಥಿ, ಬಾಲಾಜಿ, ಅಮೃತ ಇಜಾರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next