ವರದಿ:ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ:ಅಭಿವೃದ್ಧಿಗೆ ಸವಾಲು ಹಾಕುವಂತಹ ಅತೀ ಹೆಚ್ಚು ಕೊಳಚೆ ಪ್ರದೇಶಗಳ ಕ್ಷೇತ್ರ ಹು-ಧಾ ಪೂರ್ವ ವಿಧಾನಸಭಾ ಮೀಸಲು ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳು ಮಹಿಳೆಯರ ಪಾಲಾಗಿವೆ. ಕೆಲ ವಾರ್ಡ್‌ಗಳಲ್ಲಿ ಗುರುತಿಸುವಂತಹ ಬದಲಾವಣೆಗಳನ್ನು ಕಂಡಿದ್ದರೂ ಪ್ರಗತಿ ಹಾದಿಯಲ್ಲಿ ಸಾಗಬೇಕಾದ್ದು ಬಹುದೂರವಿದೆ. ಅತೀ ಹೆಚ್ಚು ಕೊಳಚೆ ಪ್ರದೇಶಗಳು, ಪ್ರಮುಖ ಮಾರುಕಟ್ಟೆ ಪ್ರದೇಶಗಳು ಈ ಕ್ಷೇತ್ರದ ಹೆಗ್ಗುರುತು.
ಇಂತಹ ಪ್ರದೇಶಗಳ ಅಭಿವೃದ್ಧಿ, ಸುಗಮ ರಸ್ತೆ ಬಹುದೊಡ್ಡ ಸವಾಲಿನ ಕಾರ್ಯ. ಪ್ರಮುಖ ರಸ್ತೆಗಳು ಎಷ್ಟೇ ಅಂದ ಚೆಂದವಾದರೂ ಒಳ ರಸ್ತೆಗಳ ಅಭಿವೃದ್ಧಿ ಕಷ್ಟ ಕಷ್ಟ. 10 ವರ್ಷಗಳ ಹಿಂದಿನ ಕ್ಷೇತ್ರಕ್ಕೆ ಹೋಲಿಸಿದರೆ ಸಾಕಷ್ಟು ಬದಲಾವಣೆ ಕಂಡಿದೆ. ಸಮುದಾಯ ಭವನ, ಶಾಲೆ, ಆಸ್ಪತ್ರೆಗಳಿಗೆ ಆಧುನಿಕ ಸ್ಪರ್ಶ, ವಿದ್ಯಾರ್ಥಿ ವಸತಿ ನಿಲಯಗಳು, ಪೌರ ಕಾರ್ಮಿಕರಿಗೆ 320 ಜಿ+3 ಮನೆಗಳು, 2424 ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರೈತ ಭವನ ಸೇರಿದಂತೆ ಕಾಂಕ್ರಿಟ್‌ರಸ್ತೆಪ್ರಮುಖಆಕರ್ಷಣೆಯಾಗಿದೆ. ಇಷ್ಟೆಲ್ಲಾ ಅಭಿವೃದ್ಧಿಯಾದರೂ ಸಂಚಾರ ದಟ್ಟಣೆಗೆ ಮುಕ್ತಿ ಸಿಕ್ಕಿಲ್ಲ ಎಂಬ ಭಾವನೆ ಈ ಭಾಗದ ಜನರಲ್ಲಿದೆ.
ಕೆಲ ವಾರ್ಡ್‌ಗಳು ಸುಂದರವಾಗಿ ರೂಪುಗೊಂಡಿದ್ದರೆ. ಕೆಲ ವಾರ್ಡ್‌ಗಳು ಹಿಂದಿನ ನೆನಪನ್ನು ಹಾಗೇ ಉಳಿಸಿಕೊಂಡಿವೆ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕ್ಷೇತ್ರದ ಚಿತ್ರಣ ಬದಲಾವಣೆ ತರಲಿವೆ. ಆದರೆ ಇವುಗಳ ಅವೈಜ್ಞಾನಿಕ ಹಾಗೂ ವಿಳಂಬದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಹಾನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಾದ ಕೊಪ್ಪಿಕರ ರಸ್ತೆ, ದಾಜಿಬಾನ ಪೇಟೆ, ಸ್ಟೇಶನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗವೇ ಸಿಗುತ್ತಿಲ್ಲ. ಗಣೇಶ ಪೇಟೆ ಮೀನು ಮಾರುಕಟ್ಟೆ, ಜನತಾ ಬಜಾರ್ ಆಧುನಿಕ ಮಾರುಕಟ್ಟೆಗಳುಈ ಕ್ಷೇತ್ರದಲ್ಲಿ ನಡೆಯುತ್ತಿವೆ. ಇಂತಹ ಪ್ರಮುಖ ಮಾರುಕಟ್ಟೆಗಳ ಪ್ರದೇಶ ಇಷ್ಟೊಂದು ನಿರ್ಲಕ್ಷéಕ್ಕೆ ಒಳಗಾಗಿರುವ ಬಗ್ಗೆ ಜನರಿಗೆ ಹಾಗೂ ವ್ಯಾಪಾರಿಗಳಿಗೆ ಬೇಸರವಿದೆ.