ಶಿರಾ: ತಾಲೂಕಿನ ಹೊನ್ನಗೊಂಡನಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ 21-12-2006ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯದಿಂದ ಸ್ಥಳೀಯರಲ್ಲಿದ್ದ ನಿರೀಕ್ಷಿಸಿದ ಅಭಿವೃದ್ಧಿ ಈವರೆಗೆ ಈಡೇರಿಲ್ಲ. ಆದರೆ ಕೆಲವೊಂದು ಪ್ರಗತಿಗಳು ಕಂಡಿವೆ.
ಗ್ರಾಮ ಬದಲಾಗಲಿಲ್ಲ: ಗೊಲ್ಲರಹಟ್ಟಿಯು ಶೇ.95ರಷ್ಟು ಕಾಡು ಗೊಲ್ಲರೇ ವಾಸಿಸುವ ಮೂಲ ಸೌಕರ್ಯದ ಕೊರತೆಯಿರುವ ಹಿಂದುಳಿದ ಗ್ರಾಮ. ಮುಖ್ಯಮಂತ್ರಿ ಗ್ರಾಮಕ್ಕೆ ಭೇಟಿ ನೀಡುತ್ತಿರು ವುದರಿಂದ ಗ್ರಾಮ ಸುವರ್ಣಗ್ರಾಮವಾಗುತ್ತದೆ ಎಂದು ಗ್ರಾಮಸ್ಥರು ಕಂಡಿದ್ದ ಕನಸು ನನಸಾಗಿಲ್ಲ. ನೀಡಿದ ಆಶ್ವಾಸನೆಗಳು ಪೂರ್ತಿ ಈಡೇರಲಿಲ್ಲ ಎಂಬುದು ಗ್ರಾಮಸ್ಥರ ಬೇಸರದ ನುಡಿ.
ಪಾಳು ಬಿದ್ದಿದೆ ಮನೆ: ಅಂದು ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ತಾಪಂ ಸದಸ್ಯ ಚಿಕ್ಕಣ್ಣ ಹಾಗೂ ಸಹೋದರ ನಾಗರಾಜು ಎಂಬುವವರ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಶಿರಾ ಶಾಸಕ ಬಿ.ಸತ್ಯ ನಾರಾಯಣ ಮತ್ತು ಪಕ್ಷದ ಮುಖಂಡರು ಊಟ ಮಾಡಿದ್ದರು. ಆ ಸಂದರ್ಭ ಶಿಥಿಲಾವಸ್ಥೆಯಲ್ಲಿದ್ದ ಈ ಮನೆ ಈಗ ಪಾಳು ಬಿದ್ದು ಗಿಡಗಂಟಿಗಳು ಬೆಳೆದಿವೆ. ನಾಗರಾಜು, ಈಗ ಗುಡಿಸಲು ಕಟ್ಟಿಕೊಂಡು, 80 ವರ್ಷದ ತಾಯಿ, ಹೆಂಡತಿ ಮಕ್ಕಳೊಂದಿಗೆ ವಾಸ ವಾಗಿದ್ದಾನೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ 13 ವರ್ಷ ಕಳೆದರೂ ನೆರವಿಗೆ ಬಂದಿಲ್ಲ ಎಂದು ಪಾಳು ಬಿದ್ದ ಮನೆ ತೋರಿಸುತ್ತಾರೆ ನಾಗರಾಜ್.
ಭರವಸೆ ಮಹಾಪೂರ: ಕುಮಾರಸ್ವಾಮಿ ವಾಸ್ತವ್ಯ ಮಾಡಿದಂದು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ತೆರೆಯುತ್ತೇನೆ. ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸುತ್ತೇನೆ. ಸಮುದಾಯ ಭವನ ನಿರ್ಮಿಸುತ್ತೇನೆ. ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುತ್ತೇನೆ ಮತ್ತು ನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದ್ದರು.
● ಎಸ್.ಕೆ.ಕುಮಾರ್