Advertisement

ಊರೆಲ್ಲಾ ಬೆಳಕು; ಈ ಮಂದಿಗೆ ಕತ್ತಲು

01:02 PM Oct 21, 2017 | |

ದಾವಣಗೆರೆ: ಊರಾಗೆಲ್ಲಾ ದೀಪಾವಳಿ ಅಂತ ಹೋಳಿಗೆ, ಕರೆಗಡುಬು ಮಾಡ್ಕೊಂಡು, ಹೊಸ ಬಟ್ಟೆ ಹಾಕ್ಕೊಂಡು, ದೇವ್ರಿಗೆ ಪೂಜೆ ಮಾಡಿ, ಪಟಾಕಿ ಹಚ್ಚಿ ಖುಸಿಯಾಗೆ ಹಬ್ಬ ಮಾಡ್ತಾರೆ. ಆದ್ರೆ, ನಮ್‌ ಮನ್ಯಾಗೆ ಒಂದೊತ್ತಿನ ಕೂಳಿಗೂ ಗತಿ ಇಲ್ಲದಂಗೆ ಆಗೈತೆ.
ಮಕ್ಳು ಪಟಾಕಿ ಕೇಳಿದ್ರೆ ಕರುಳ್‌ ಕಿತ್ತು ಬರ್ತಾತೆ. ಹಿಂಗೆ ಇರೋವಾಗ ಎಲ್ಲಿ ದೀಪಾವಳಿ, ಹಬ್ಬನೂ-ಗಿಬ್ಬನೂ ಇಲ್ಲ….

Advertisement

ಇದು, ಕಳೆದ ಸೆ. 24ರಂದು ಸುರಿದ ಭಾರೀ ಮಳೆಯಿಂದ ತೊಟ್ಟ ಬಟ್ಟೆ ಬಿಟ್ಟರೆ ಬೇರೆ ಎಲ್ಲವನ್ನೂ ಕಳೆದುಕೊಂಡು ಹೈಟೆಕ್‌ ಜಾನುವಾರು ಮಾರುಕಟ್ಟೆಯಲ್ಲಿರುವ ಚಿಕ್ಕನಹಳ್ಳಿ ಬಡಾವಣೆಯ ಗೀತಾ, ತುಳಸಿಬಾಯಿ, ಲಕ್ಷ್ಮಮ್ಮ, ಶಂಕರಮ್ಮ… ಇತರರ ಅಳಲು. ಮಹಾಮಳೆಯ ಆರ್ಭಟದಿಂದ ಬಡಾವಣೆಯ ಪಕ್ಕದಲ್ಲೇ ಇರುವ ಎರಡೂ ಹಳ್ಳಗಳು ತುಂಬಿ ಸರಿ ರಾತ್ರಿಯಲ್ಲಿ ತಾತ್ಕಾಲಿಕ ಶೆಡ್‌ಗಳಿಗೆ ನೀರು ನುಗ್ಗಿದ ಪರಿಣಾಮ ಎಲ್ಲವನ್ನೂ ಕಳೆದುಕೊಂಡಿರುವ ಚಿಕ್ಕನಹಳ್ಳಿಯ 263ಕ್ಕೂ ಹೆಚ್ಚು ಕುಟುಂಬಗಳು ಬೆಳಕಿನ
ಹಬ್ಬ ದೀಪಾವಳಿಯ ಸಂಭ್ರಮವೇ ಇಲ್ಲ. ಮತ್ತೆ ಮತ್ತೆ ಸುರಿದ ಮಳೆ ದಸರಾ ಈಗ ದೀಪಾವಳಿಯ ಸಂಭ್ರಮವನ್ನೇ ಕಿತ್ತುಕೊಂಡಿದೆ.

ಭಾರೀ ಮಳೆಯಿಂದ ಸಂತ್ರಸ್ತಗೊಂಡಿದ್ದ ಕುಟುಂಬಗಳಿಗೆ ಬಡಾವಣೆಗೆ ಹೊಂದಿಕೊಂಡಿರುವ ಹೈಟೆಕ್‌ ಜಾನುವಾರು ಮಾರುಕಟ್ಟೆಯಲ್ಲಿ ಗಂಜೀಕೇಂದ್ರ ತೆರೆದು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಐದಾರು ದಿನ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರದಿಂದ ತಾತ್ಕಾಲಿಕ ಪರಿಹಾರವಾಗಿ 3,800 ರೂಪಾಯಿ ಚೆಕ್‌ ನೀಡಿ, ಸಾಂತ್ವನ ಹೇಳುವ ಜೊತೆಗೆ ಶಾಶ್ವತ ಸೂರಿನ ಭರವಸೆಯನ್ನ ಭರಪೂರವಾಗಿ ನೀಡಲಾಗಿತ್ತು. ಯಾವಾಗ ಮಳೆ ಪದೆ ಪದೇ ಸುರಿಯಲಾರಂಭಿಸಿತೋ ಅದೇ ರೀತಿ ಸಮಸ್ಯೆಯೂ
ಮುಂದುವರೆಯಿತು. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ನೀಡಲಾಗುತ್ತಿದ್ದ ಸೌಲಭ್ಯ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಒಂದೊಂದೆ ಕಾಣೆಯಾದವು. 

ಈಗ ಬಡಾವಣೆಗಳ ಸ್ಥಿತಿ ಅಕ್ಷರಶಃ ಅತಂತ್ರ. ಒಂದು ಕಡೆ ಮನೆ ಇಲ್ಲ. ಇರುವ ಮನೆಯಲ್ಲಾದರೂ ಒಂದೊತ್ತಿನ ಗಂಜಿ ಮಾಡಿಕೊಂಡಾದರೂ ಜೀವನ ನಡೆಸೋಣ ಅಂದುಕೊಂಡರೆ ಮನೆಯ ತುಂಬೆಲ್ಲ ಕೆಸರು. ಕಾಲಿಡಲಿಕ್ಕೂ ಆಗದಷ್ಟು ಕೆಸರು ತುಂಬಿ ಕೊಂಡಿರುವುದರಿಂದ ತಮ್ಮದೂ ಎನ್ನುವ ಮನೆಯ ಮುಂದೆ ಅಡುಗೆ ಮಾಡಿಕೊಂಡು, ಊಟ ಮಾಡಿ, ಹೈಟೆಕ್‌ ಜಾನುವಾರು ಮಾರುಕಟ್ಟೆಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಹೈಟೆಕ್‌ ಜಾನುವಾರು ಮಾರುಕಟ್ಟೆಯಲ್ಲಿ ಮೊದಲಿಗೆ ಇದ್ದಂತಹ ತಾತ್ಕಾಲಿಕ ವಿದ್ಯುತ್‌ ಈಗ ಇಲ್ಲ. ಹಾಗಾಗಿ ಇಡೀ ರಾತ್ರಿಯನ್ನು ಕತ್ತಲೆಲ್ಲೇ ಕಳೆಯಬೇಕಾಗಿದೆ. ಕರೆಂಟ್‌ ಮಾತ್ರವಲ್ಲ ಇಲ್ಲಿ ಕುಡಿಯಲಿಕ್ಕೆ ಒಂದು
ಹನಿ ನೀರು ಸಹ ಸಿಗುವುದೇ ಇಲ್ಲ ಎನ್ನುತ್ತಾರೆ ನಾಲ್ಕು ತಿಂಗಳ ಬಾಣಂತಿ ಗೀತಾ.

ತನ್ನ ನಾಲ್ಕು ತಿಂಗಳ ಪುಟ್ಟ ಮಗಳು ಗೌತಮಿಯೊಂದಿಗೆ ಹೈಟೆಕ್‌ ಜಾನುವಾರು ಮಾರುಕಟ್ಟೆಯಲ್ಲಿ ಬೀಡು ಬಿಟ್ಟಿರುವ ಗೀತಾಗೆ ಮನೆಗೆ ಹೋಗಲಿಕ್ಕೆ ಈಗಲೂ ಭಯ. ಕಾರಣ ಅವತ್ತು ರಾತ್ರಿ (ಸೆ.24) ಗೀತಾ ಬದುಕಿದ್ದೇ ಹೆಚ್ಚಿನ ಮಾತು. 3 ತಿಂಗಳ ಬಾಣಂತಿಯಿದ್ದ ಇದ್ದಂತಹ ಮನೆಗೆ 5-6 ಅಡಿ ನೀರು ನುಗ್ಗಿತ್ತು. ಮೊದಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಗೀತಾ ನುಗ್ಗುತ್ತಿರುವ ನೀರನ್ನು ನೋಡಿ ಎದೆಗುಂದಿದ್ದರು. ಅಕ್ಕಪಕ್ಕದವರು ಸಾಹಸ ಮಾಡಿ, ಗೀತಾ ಹಾಗೂ ಪುಟ್ಟ ಮಗುವನ್ನು ಸುರಕ್ಷಿತ ಜಾಗಕ್ಕೆ ಕರೆ ತಂದು, ಬಿಟ್ಟಿದ್ದು ಗೀತಾಗೆ ಈಗಲೂ ದುಸ್ವಪ್ನದಂತೆ ಕಾಡುತ್ತಿದೆ. ಕೋಟೆಪ್ಪ ಎಂಬಾತ ಈಜು ಹೊಡೆದುಕೊಂಡು ಹೋಗಿ ಇನ್ನುಳಿದ ಮಕ್ಕಳನ್ನು ಬದುಕಿಸಿದರು… ಎಂದು ನೆನೆಸಿಕೊಂಡರು. 

Advertisement

ನಾವು ಬಡವರಾಗಿ ಹುಟ್ಟಿದ್ದೇ ತಪ್ಪಾಗೈತೆ. ಏನೋ ಕೂಲಿ-ನಾಲಿ ಮಾಡ್ಕೊಂಡು ಜೀವನ ನಡೆಸ್ತಾ ಇದ್ವಿ. ಮಳೆ ಬಂದು ಎಲ್ಲ ಕಿತ್ಕೊಂಡು ಹೊಯ್ತು. ಮನೆ ಇಲ್ಲ, ಮಠ ಇಲ್ಲ. ಇರೋ ಒಬ್ಬಳು ಮಗಳ ಜೊತೆ ಎಲ್ಲಿ ಇರಬೇಕೋ ಅನ್ನೋದೆ ಗೊತ್ತಾಗ್ತಾ ಇಲ್ಲ…. ಎಂದು ಲಕ್ಷ್ಮಮ್ಮ ನಿಟ್ಟಿಸಿರು ಬಿಡುತ್ತಾರೆ. ಬಡಾವಣೆಯ ಜನರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕಷ್ಟ  ತಾತ್ಕಾಲಿಕ ಆಶ್ರಯಕ್ಕೂ ಸಂಚಕಾರ…

Advertisement

Udayavani is now on Telegram. Click here to join our channel and stay updated with the latest news.

Next