Advertisement

Dharwad: ದಸರೆ-ದೀಪಾವಳಿಗೆ 25 ಟನ್‌ ಧಾರವಾಡ ಪೇಢಾ ಮಾರಾಟ!

05:33 PM Nov 18, 2023 | Team Udayavani |

ಧಾರವಾಡ: ಸಿಹಿತಿನಿಸಿನ ಉದ್ಯಮದಲ್ಲಿ ಉತ್ಕೃಷ್ಟತೆ ಪಡೆದುಕೊಂಡಿರುವ ಧಾರವಾಡ ಪೇಢಾಕ್ಕೆ ಶುಕ್ರದೆಸೆ ಶುರುವಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ದಾಖಲೆ 25 ಟನ್‌ನಷ್ಟು (25 ಸಾವಿರ ಕೆಜಿ)ಪೇಢಾ ಮಾರಾಟವಾಗಿದೆ. ಕೊರೊನಾದಿಂದ ಮಕಾಡೆ ಮಲಗಿದ್ದ ಉದ್ಯಮ ಚೇತರಿಕೆ ಕಂಡಿದೆ. ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಪ್ರತಿದಿನ 8-10 ಸಾವಿರ ಕೆಜಿ ಪೇಢಾ ರಾಜ್ಯಾದ್ಯಂತ ಮಾರಾಟವಾಗುತ್ತಿದೆ.

Advertisement

ಧಾರವಾಡ-ಹುಬ್ಬಳ್ಳಿ ಮಾತ್ರವಲ್ಲ ಉತ್ತರ ಕರ್ನಾಟಕ ಸೇರಿ ರಾಜಧಾನಿ ಬೆಂಗಳೂರಿನಲ್ಲಿಯೂ ಅತೀ ದೊಡ್ಡ ಮಳಿಗೆಗಳು
ತಲೆ ಎತ್ತುತ್ತಿದ್ದು, ಫ್ರಾಂಚೈಸಿ ಅಂಗಡಿಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಹೀಗಾಗಿ ಪೇಢಾ ಉತ್ಪಾದನೆ ಮತ್ತು ಮಾರಾಟ ಅತ್ಯಂತ ಉತ್ತುಂಗದ ಸ್ಥಿತಿ ತಲುಪಿದೆ. ವರ್ಷದಿಂದ ವರ್ಷಕ್ಕೆ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ.

ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಸಂದರ್ಭ ಧಾರವಾಡ ಪೇಢಾ ಮಾರಾಟದ ಸುಗ್ಗಿ ಕಾಲ. ಈ ಅವಧಿಯಲ್ಲಿಯೇ ಅತ್ಯಂತ ಹೆಚ್ಚು ಪೇಢಾ ಮಾರಾಟವಾಗುತ್ತದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ  ಪೇಢಾ ಮಾರಾಟ ಈ ವರ್ಷ ದಾಖಲಾಗಿದೆ. 2018ರಲ್ಲಿ 20 ಟನ್‌ ಮಾರಾಟ ದಾಖಲಾಗಿತ್ತು. 2019ರಲ್ಲಿ ಕೋವಿಡ್‌ನಿಂದಾಗಿ 15 ಟನ್‌ಗೆ ಕುಸಿದರೆ, 2020ರಲ್ಲಿ 10 ಟನ್‌ ಮತ್ತು 2021ರಲ್ಲಿ 12 ಟನ್‌ ಮಾತ್ರ ಮಾರಾಟವಾಗಿತ್ತು. ಆದರೆ 2022ರಲ್ಲಿ ಮತ್ತೆ ಜಿಗಿತ ಕಂಡು 20 ಟನ್‌ ಪೇಢಾ ಮಾರಾಟವಾಗಿತ್ತು. ಈ ವರ್ಷ ದಾಖಲೆ 25 ಟನ್‌ ಪೇಢಾ ಮಾರಾಟವಾಗಿದೆ.

500ರಿಂದ 25 ಸಾವಿರ ಕೆಜಿಗೆ ಜಿಗಿತ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಷ್ಟೇಯಲ್ಲ, ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ 150 ನಗರಗಳಲ್ಲಿ ಧಾರವಾಡ ಫೇಡಾ ಮಾರಾಟವಾಗುತ್ತದೆ.

ಠಾಕೂರ್‌ಸಿಂಗ್‌ ಫೇಡಾದ 150 ಹಾಗೂ ಮಿಶ್ರಾ ಫೇಡಾದ 250ಕ್ಕೂ ಹೆಚ್ಚು ಸೇರಿ 2300ಕ್ಕೂ ಅಧಿಕ ಮಳಿಗೆಗಳಲ್ಲಿ ಫೇಡಾ ಲಭ್ಯ. ಕೊರೊನಾ ವೇಳೆ 500 ಕೆಜಿಗೆ ಕುಸಿದಿದ್ದ ಫೇಡಾ ಮಾರಾಟ ಈಗ ಪ್ರತಿದಿನ ಎಂಟು ಸಾವಿರ ಕೆಜಿ ದಾಟಿದೆ. ದಸರಾ, ದೀಪಾವಳಿ ಹಬ್ಬ, ರಾಜ್ಯೋತ್ಸವ, ನಿಶ್ಚಿತಾರ್ಥ, ಗೃಹ ಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ಆರಂಭಗೊಂಡಿದ್ದರಿಂದ
ಪೇಢಾ ಮಾರಾಟ ಹೆಚ್ಚಳವಾಗಿದೆ.

Advertisement

ಇನ್ನೊಂದೆಡೆ ಪೇಢಾ ಉದ್ಯಮಕ್ಕೆ ಭಾರಿ ಏಟು ಕೊಟ್ಟಿರುವ ವಿದೇಶಿ ಬುಕ್ಕಿಂಗ್‌ಗಳು ಸದ್ಯಕ್ಕೆ ಶೂನ್ಯವಾಗಿವೆ. ಕೊರೊನಾದಿಂದ
ವಿಶ್ವದ ಪ್ರಮುಖ ದೇಶಗಳ ಸಂಪರ್ಕ ಕಡಿತಗೊಂಡಿದ್ದು, ಪೇಢಾ ಸಾಗಾಟ ಸಂಪೂರ್ಣ ನಿಂತು ಹೋಗಿದೆ. ಹೀಗಾಗಿ ವಿದೇಶಿ
ವಿನಿಮಯ ತಂದು ಕೊಡುತ್ತಿದ್ದ ಪೇಢಾ ಬರೀ ರೂಪಾಯಿಗೆ ಸೀಮಿತವಾಗಿದೆ. 2017-19ರ ವರೆಗೆ ಮೂರು ವರ್ಷದಲ್ಲಿ 7500 ಕೆಜಿಯಷ್ಟು ಪೇಢಾ ವಿದೇಶಗಳಲ್ಲಿ ಮಾರಾಟವಾಗಿತ್ತು.ಕಳೆದ ವರ್ಷವಂತೂ ವಿದೇಶಿ ಕಂಪನಿಗಳಿಂದಲೂ ಪೇಢಾಕ್ಕೆ ಬೇಡಿಕೆಗಳು ಆರಂಭಗೊಂಡಿದ್ದವು. ಆದರೆ ಕೊರೊನಾದಿಂದಾಗಿ ಮತ್ತೆ ಪೇಢಾ ವಿದೇಶಕ್ಕೆ ಹೋಗುತ್ತಿಲ್ಲ.

ಅಮೆರಿಕದವರ ಕಣ್ಣು
ಅಮೆರಿಕ ಮೂಲದ ಆಹಾರ ಕಂಪನಿಯೊಂದು ಮಿಶ್ರಾ ಪೇಢಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದ ವಿವಿಧೆಡೆ ಸಿದ್ಧಗೊಳ್ಳುವ ಪೇಢಾ ಪರೀಕ್ಷಿಸಿ ಅಂತಿಮವಾಗಿ ಧಾರವಾಡದ ಮಿಶ್ರಾ ಫೇಡಾ ಮೆಚ್ಚಿಕೊಂಡು ಇಲ್ಲಿಯೇ ಉದ್ಯಮ ಸ್ಥಾಪಿಸಲು
ಈ ಕಂಪನಿ ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಉದ್ಯಮ ಆರಂಭಗೊಂಡಿಲ್ಲ. ವಿದೇಶಿಯರು ನೇರವಾಗಿ ಪೇಢಾ ಉದ್ಯಮದಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿದ್ದಾರೆ.

ಕಳೆದ ನಾಲ್ಕು ವರ್ಷ ಕೊರೊನಾದಿಂದ ಪೇಢಾ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ವರ್ಷ ಅತ್ಯಂತ ಉತ್ತಮವಾಗಿ ಪೇಢಾ ಮಾರಾಟವಾಗಿದೆ. ತಿಂದವರಿಗೂ ಉತ್ತಮ ಪೇಢಾ ಸಿಕ್ಕಿದೆ, ಉದ್ಯಮಿಗಳಿಗೂ ವ್ಯಾಪಾರವಾಗಿದೆ.
ಸತ್ಯಂ ಮಿಶ್ರಾ, ಮಿಶ್ರಾ ಪೇಢಾ ಮುಖ್ಯಸ್ಥರು

ರಾಜ್ಯದ ವಿವಿಧ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆಯಾಗಿ ಪೇಢಾ ಕೊಡುವ ಪದ್ಧತಿ ಬೆಳೆಯುತ್ತಿದ್ದು, ಈ ವರ್ಷ ರಾಜ್ಯದ 75 ಹಾಗೂ ಹೊರ ರಾಜ್ಯದ 24 ಕಂಪನಿಗಳಿಗೆ ಪೇಢಾ ಪೂರೈಸಿದ್ದೇವೆ.
ಅಮಿತ್‌, ಪೇಢಾ ವ್ಯಾಪಾರಿ, ಧಾರವಾಡ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next