Advertisement

ಬೆಳೆ ಸಮೀಕ್ಷೆಗೆ ಬೆಳೆಯೇ ಇಲ್ಲ!

10:29 PM Jan 22, 2021 | Team Udayavani |

ಪುತ್ತೂರು: ಹಿಂಗಾರು ಬೆಳೆ ಸಮೀಕ್ಷೆಗೆ ಮೂರು ತಾಲೂಕಿನಲ್ಲಿ ಬೆಳೆ ವಿಸ್ತೀರ್ಣವೇ ಸಾಲುತ್ತಿಲ್ಲ. ಇದರಿಂದ ಅಪ್‌ಲೋಡ್‌ ಪ್ರಮಾಣ ಶೂನ್ಯ ದಾಖಲಾಗಿದೆ!

Advertisement

ರೈತರೇ ಪರಿವರ್ತಿತ ಮೊಬೈಲ್‌ ಆ್ಯಪ್‌ ಉಪಯೋಗಿಸಿ ಸ್ವತಂತ್ರವಾಗಿ ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ಮೂಲಕ ಚಾಲನೆ ನೀಡಲಾಗಿತ್ತಾದರೂ ಪುತ್ತೂರು, ಸುಳ್ಯ, ಕಡಬದಲ್ಲಿ ಬೆಳೆ ಪ್ರಮಾಣದ ಕೊರತೆ ಕಾಡಿದೆ.

ಅವಧಿ ಪೂರ್ಣ :

ಕೋವಿಡ್‌-19 ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಮುಂಗಾರು ಬೆಳೆಗೆ ಈ ಕ್ರಮ ಜಾರಿ ಮಾಡಲಾಗಿತ್ತು. ಅದನ್ನು ಹಿಂಗಾರು ಬೆಳೆಗೂ ವಿಸ್ತರಿಸಲಾಗಿತ್ತು. ರೈತರು ಹಿಂಗಾರು ಬೆಳೆ ಸಮೀಕ್ಷೆ ಮಾಡಿ, ಸ್ವತಂತ್ರವಾಗಿ ಅಪ್‌ಲೋಡ್‌ ಮಾಡಲು ಕಳೆದ ಡಿಸೆಂಬರ್‌ನಲ್ಲಿ 15 ದಿನಗಳ ಸಮಯಾವಕಾಶ ನೀಡಲಾಗಿತ್ತು. ಆ ಸಮಾಯವಕಾಶ ಪೂರ್ಣಗೊಂಡಿದೆ.

ವಿಸ್ತೀರ್ಣದ ಕೊರತೆ :

Advertisement

ಹಿಂಗಾರಿನಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಭತ್ತದ ಕೃಷಿ ಐದು ಹೆಕ್ಟೇರ್‌ ಮೇಲ್ಪಟ್ಟಿರುವ ಗ್ರಾಮಗಳಲ್ಲಿ ಮಾತ್ರ ಹಿಂಗಾರು ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಪುತ್ತೂರಿನ 22, ಕಡಬದಲ್ಲಿ 15 ಗ್ರಾಮಗಳನ್ನು ಗುರುತಿಸಲಾಗಿತ್ತು. ಆದರೆ ಅಲ್ಲಿ ಸಮೀಕ್ಷೆಗೆ ಪೂರಕವಾಗಿ ಯಾವುದೇ ಸರ್ವೇ ನಂಬರ್‌ ವ್ಯಾಪ್ತಿಯಲ್ಲಿ ಐದು ಹೆಕ್ಟೇರ್‌ ಮೇಲ್ಪಟ್ಟು ಭತ್ತದ ಕೃಷಿ ಇಲ್ಲದ ಕಾರಣ ಹಿಂಗಾರು ಬೆಳೆ ರಹಿತ ತಾಲೂಕು ಎಂಬ ವರದಿ ಸಲ್ಲಿಸಲಾಗಿದೆ.

ಏನಿದು ಬೆಳೆ ಸಮೀಕ್ಷೆ ? :

ಸರ್ವೇ ನಂಬರ್‌, ಹಿಸ್ಸಾ ನಂಬರ್‌ವಾರು ಬೆಳೆ ಮಾಹಿತಿ ಸಂಗ್ರಹ ಮತ್ತು ನಿಖರ ದತ್ತಾಂಶದ ಕೊರತೆ ನಿವಾರಿಸಲು ಈ ಬಾರಿ ಮೊಬೈಲ್‌ ಆ್ಯಪ್‌ ಮೂಲಕ ರೈತರೇ ಬೆಳೆ ಮಾಹಿತಿಯನ್ನು ಛಾಯಾ ಚಿತ್ರ ಸಹಿತ ದಾಖಲಿಸಿ, ಅಪ್‌ಲೋಡ್‌ ಮಾಡಲು ಸರಕಾರ ಅನುಮತಿ ನೀಡಿತ್ತು. ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೀಡಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾ ನುಭ ವಿಗಳನ್ನು ಗುರುತಿಸುವುದು, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿ ಇತ್ಯಾದಿ ಈ ಸಮೀಕ್ಷಾ ವರದಿ ಆಧರಿಸಿ ಮಾಡಲಾಗುತ್ತದೆ.

ಮುಂಗಾರಿನಲ್ಲಿ ಶೇ. 100 :

ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಬೆಳೆ ಸಮೀಕ್ಷೆಯಲ್ಲಿ 9,09,656 ಕೃಷಿ ಜಮೀನುಗಳ ಸಮೀಕ್ಷೆ ಮಾಡಲಾಗಿದ್ದು, ಆ ಮೂಲಕ ಶೇ.100ರಷ್ಟು ಗುರಿ ದಾಖಲಾಗಿತ್ತು. 2,32,767 ಜಮೀನುಗಳ ಬೆಳೆ ವಿವರಗಳನ್ನು ಸ್ವತಃ ರೈತರೇ ಅಪ್‌ಲೋಡ್‌ ಮಾಡಿದ್ದರು. ಉಳಿದಂತೆ ಬೆಳೆ ಸಮೀಕ್ಷೆಗೆ ನಿಯೋಜಿಸಲ್ಪಟ್ಟ 876 ಮಂದಿಯ ಮೂಲಕ 6,76,889 ಜಮೀನುಗಳ ಬೆಳೆ ವಿವರವನ್ನು ಅಪ್‌ಲೋಡ್‌ ಮಾಡಲಾಗಿತ್ತು.

ಪುತ್ತೂರು, ಸುಳ್ಯ ತಾಲೂಕಿನಲ್ಲಿ ಹಿಂಗಾರು ಬೆಳೆ ಸಮೀಕ್ಷೆ ಸಂಬಂಧಿಸಿ ಸೂಚಿತ ಪ್ರಮಾಣದಷ್ಟು ಬೆಳೆ ಕಂಡು ಬಾರದ ಕಾರಣ ಅಪ್‌ಲೋಡ್‌ ಆಗಿಲ್ಲ. ಸಮೀಕ್ಷೆಗೆ 5 ಹೆಕ್ಟೇರ್‌ ಮೇಲ್ಪಟ್ಟು ಭತ್ತದ ಕೃಷಿ ಇರಬೇಕು. ಅಷ್ಟು ಪ್ರಮಾಣದ ಕೃಷಿ ಕಂಡು ಬಂದಿಲ್ಲ. ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

 

Advertisement

Udayavani is now on Telegram. Click here to join our channel and stay updated with the latest news.

Next