Advertisement

ಭಾರತದ ಸರ್ಜಿಕಲ್‌ ದಾಳಿಯನ್ನು ಯಾವ ದೇಶವೂ ಪ್ರಶ್ನಿಸಲಿಲ್ಲ: ಮೋದಿ

10:43 AM Jun 26, 2017 | Team Udayavani |

ವಾಷಿಂಗ್ಟನ್‌ : ಪಾಕಿಸ್ಥಾನಕ್ಕೆ ನೇರ ತಪರಾಕಿ ಹೊಡೆಯುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ದೇಶದಲ್ಲಿ  ಶಾಂತಿ ಮತ್ತು ಸಾಮಾನ್ಯ ಜೀವನವನ್ನು ನಾಶ ಪಡಿಸುವ ಭಯೋತ್ಪಾದನೆಯ ಮುಖವನ್ನು ಭಾರತವು ವಿಶ್ವಕ್ಕೆ ಯಶಸ್ವಿಯಾಗಿ, ಮನಮುಟ್ಟುವ ರೀತಿಯಲ್ಲಿ ತೋರಿಸಿಕೊಟ್ಟಿದೆ; ಹಾಗಾಗಿ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಯಾವ ದೇಶವೂ ಪ್ರಶ್ನಿಸಿಲ್ಲ’ ಎಂದು ಹೇಳಿದ್ದಾರೆ. 

Advertisement

ವರ್ಜೀನಿಯಾದಲ್ಲಿ ಏರ್ಪಡಿಸಲಾಗಿದ್ದ  ಸತ್ಕಾರ ಕೂಟದಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, “ಭಾರತ ತನ್ನನ್ನು ರಕ್ಷಿಸಿಕೊಳ್ಳುವ ದಿಶೆಯಲ್ಲಿ ಅತ್ಯಂತ ಕಠಿನಕರ ಕ್ರಮ ಕೈಗೊಳ್ಳಬಲ್ಲುದು ಎಂಬುದಕ್ಕೆ ಎಲ್‌ಓಸಿಯಲ್ಲಿ  ಅದು ನಡೆಸಿದ ಸರ್ಜಿಕಲ್‌ ದಾಳಿ ಸಾಕ್ಷಿಯಾಗಿದೆ’ ಎಂದು ಹೇಳಿದರು. 

“ಇಪ್ಪತ್ತು ವರ್ಷಗಳ ಹಿಂದೆ ನಾವು ಭಯೋತ್ಪಾದನೆ ಸಮಸ್ಯೆಯ ಕುರಿತು ಮಾತನಾಡಿದಾಗ ವಿಶ್ವದಲ್ಲಿನ ಅನೇಕರು ಇದೊಂದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ನಿರ್ಲಕ್ಷ್ಯದಿಂದ ಹೇಳಿದರಲ್ಲದೆ ಅದರ ಗಂಭೀರತೆಯನ್ನು ಅರಿಯುವ ಗೋಜಿಗೇ ಹೋಗಲಿಲ್ಲ. ಅನಂತರದಲ್ಲಿ ಭಯೋತ್ಪಾದಕರು ಇಡಿಯ ವಿಶ್ವಕ್ಕೇ ಭಯೋತ್ಪಾದನೆ ಎಂದರೇನು ಎಂಬುದನ್ನು ತೋರಿಸಿಕೊಟ್ಟರು’ ಎಂದು ಮೋದಿ ಖಡಕ್‌ ಆಗಿ ನುಡಿದರು.

ಭಯೋತ್ಪಾದನೆಯ ಕರಾಳ ಮುಖವನ್ನು ಕಂಡಿರುವ ವಿಶ್ವವು ಭಾರತ ತನ್ನ ಗಡಿಯಲ್ಲಿ ಸರ್ಜಿಕಲ್‌ ನಡೆಸಿದಾಗ ಅದನ್ನು ಯಾವುದೇ ರೀತಿಯಲ್ಲೂ ಪ್ರಶ್ನಿಸಲಿಲ್ಲ. ಏಕೆಂದರೆ ಪಾಕ್‌ ನೆಲದಲ್ಲಿನ ಉಗ್ರರ ಶಿಬಿರಗಳನ್ನು ನಾಶಪಡಿಸುವುದಷ್ಟೇ ಭಾರತದ ಗುರಿಯಾಗಿದ್ದುದು ಅವರಿಗೆ ಸ್ಪಷ್ಟವಾಗಿತ್ತು. ಸರ್ಜಿಕಲ್‌ ದಾಳಿಯಿಂದ ಯಾರು ತೊಂದರೆಗೆ ಒಳಗಾದರು ಎಂಬುದು ಬೇರೆಯೇ ವಿಷಯ’ ಎಂದು ಮೋದಿ ಹೇಳಿದಾಗ ಸಭಾಸದರಲ್ಲಿ ನಗೆಯ ಹೊನಲು ಹರಿಯಿತು. 

ಚೀನವನ್ನು  ಪರೋಕ್ಷವಾಗಿ ಗುರಿ ಇರಿಸಿ ಮಾತನಾಡಿದ ಮೋದಿ, “ಯಾವುದೇ ದೇಶ ತನ್ನ ಸ್ವಂತ ಗುರಿ ಸಾಧನೆಗಾಗಿ ವಿಶ್ವ ಶಾಂತಿ ಕದಡುವುದನ್ನು ಭಾರತ ಒಪ್ಪುವುದಿಲ್ಲ’ ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next