Advertisement

ಸಂಪರ್ಕಕ್ಕೆ ಸಿಗದ ಸಮೂಹ ಸಾರಿಗೆ

10:47 AM Dec 20, 2019 | Suhan S |

ಬೆಂಗಳೂರು: ನಗರದಲ್ಲಿ ಮೆಟ್ರೋ (ಬೆಂಗಳೂರು ಮೆಟ್ರೋ ರೈಲು ನಿಗಮ) ಹಾಗೂ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಸೇವೆ ಇದೆ. ಅಷ್ಟೇ ಅಲ್ಲ, ರೈಲು ಸೌಕರ್ಯವೂ ಇದೆ. ಆದರೆ, ಇವುಗಳ ನಡುವೆ ಸಂಪರ್ಕ ಸೇತುವೆಯೇ ಇಲ್ಲ!

Advertisement

ಮಲ್ಲೇಶ್ವರದ ವಿವಿಧ ಪ್ರದೇಶಗಳ ಕಥೆ ಇದು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆ ಇದ್ದರೂ, ಸ್ಥಳೀಯರಿಗೆ ಅದರ ನೇರ ಸೌಲಭ್ಯ ಸಿಗದೆ ಇರುವುದ ರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದಕ್ಕೆ ತೊಂದರೆ ಅನು ಭವಿಸುತ್ತಿದ್ದಾರೆ. ಹೀಗಾಗಿ, ಆಟೋ, ಕ್ಯಾಬ್‌ಗಳ ಮೊರೆ ಹೋಗುತ್ತಿದ್ದಾರೆ. ಮಲ್ಲೇಶ್ವರದ ವಿವಿಧ ವಾರ್ಡ್‌ ಗಳಿಗೆ ಹೊಂದಿ ಕೊಂಡಂತೆ ಶ್ರೀರಾಮಪುರ ಹಾಗೂ ಮಂತ್ರಿ ಸ್ಕ್ವೇರ್‌ನಲ್ಲಿ ಮೆಟ್ರೋ ಸೇವೆ ಇದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣಗಳೂ ಇವೆ. ಆದರೆ, ಈ ಸೇವೆ ಇಲ್ಲಿನ ವಾರ್ಡ್‌ಗಳಲ್ಲಿನ ಮುಖ್ಯ ರಸ್ತೆಗಳಿಗೆ ಹೊಂದಿ  ಕೊಂಡಿರುವ ಸ್ಥಳೀಯರಿಗೆ ಮಾತ್ರ ಸಿಗುತ್ತಿದ್ದು, ಒಳಭಾಗದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಭಾಗದ  ಸಾರ್ವಜನಿಕರಿಗೆ  ಸಮಸ್ಯೆ: ಶೇಷಾದ್ರಿಪುರ, ಸುಬ್ರಮಣ್ಯ ನಗರ, ಸ್ವಿಮಿಂಗ್‌ಪೂಲ್‌ ಏಕ್ಸ್‌ಟೆಂಕ್ಷನ್‌, ಮಿಲ್ಕ್ ಕಾಲೋನಿ, ಓರಾಯನ್‌ ಮಾಲ್‌, ಗುಟ್ಟಹಳ್ಳಿ, ಕೋದಂಡ ರಾಮಪುರ, ಯಶವಂತಪುರ ಹಾಗೂ ಮಲ್ಲೇಶ್ವರದ ವಿವಿಧ ಭಾಗಗಳಲ್ಲಿ ಜನರಿಗೆ ಸಮೂಹ ಸಾರಿಗೆ ಬಳಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಆಟೋಗಳಿಗೆ ಹಣ ತೆರ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೂರರಿಂದ ನಾಲ್ಕು ಕಿ.ಮೀ ಸಂಪರ್ಕವೇ ಇಲ್ಲ  : ಮಲ್ಲೇಶ್ವರದ 8ನೇ ಕ್ರಾಸ್‌ನಿಂದ ಸುಬ್ರಮಣ್ಯ ನಗರದ ನಡುವೆ ಅಂದಾಜು ಮೂರರಿಂದ ನಾಲ್ಕು ಕಿ.ಮೀ ಅಂತರವಿದೆ. ಈ ಅಂತರದಿಂದ ಇಲ್ಲಿನ ಮೆಟ್ರೋ ಹಾಗೂ ಬಿಬಿಎಂಟಿಸಿ ಬಸ್‌ ನಿಲ್ದಾಣಗಳಿಗೆ ಹೋಗುವುದಕ್ಕೆ ಆಟೋ ಮೂಲಕ ಸಮೂಹ ಸಾರಿಗೆ ಬಳಸಬೇಕಾಗಿದೆ. ಆಟೋ ಬಳಸಿದವರು ಮತ್ತೆ ಸಮೂಹ ಸಾರಿಗೆಗೆ ಹಣ ತೆರಬೇಕಾಗಿದೆ. ಹೀಗಾಗಿ, ಈ ಭಾಗದಲ್ಲಿ ಸಮೂಹ ಸಾರಿಗೆ ಬಳಕೆ ಕುಂಠಿತವಾಗಿದೆ. ಅಲ್ಲದೆ, ಈ ಭಾಗದಲ್ಲಿ ರೈಲ್ವೆ ಹಳಿಯ ಬಳಿ ಇರುವ ಮೇಲ್ಸೇತುವೆಯನ್ನು ಮೇಲ್ದಜೆಗೇರಿಸುವ ಕೆಲಸವಾಗಿಲ್ಲ. ಹಲವು ರೈಲ್ವೆ ಹಳಿ ದಾಟಿಕೊಂಡೇ ಮಲ್ಲೇಶ್ವರದಿಂದ ಶ್ರೀರಾಮಪುರದ ಕಡೆ ಬರುತ್ತಾರೆ. ಮುಖ್ಯರಸ್ತೆಗೆ ಇರುವ ಅಂತರವನ್ನು ಕಡಿಮೆ ಮಾಡಲು ಅಥವಾ ಸಂಪರ್ಕ ಸಾಧಿಸಲು ಸುಲಭವಾಗುವ ನಿಟ್ಟಿನಲ್ಲಿ ಮಲ್ಲೇಶ್ವರ 8ನೇ ಕ್ರಾಸ್‌ನಿಂದ ಸುಬ್ರಮಣ್ಯ ನಗರದ ನಡುವೆ ಎತ್ತರಸಿದ ಪಾದಚಾರಿ ಮಾರ್ಗ ನಿರ್ಮಾಣ ಮಾಡಿಕೊಡುವಂತೆಯೂ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಚಿಂತನೆಗಳೂ ನಡೆದಿಲ್ಲ.

ಸಾರ್ವಜನಿಕರ ಪ್ರಸ್ತಾವನೆಗಳು ನನೆಗುದಿಗೆ:  ಮಲ್ಲೇಶ್ವರದ ವಿವಿಧ ವಾರ್ಡ್‌ಗಳ ಸಾರ್ವಜನಿಕರು ಸಮೂಹ ಸಾರಿಗೆ ಅಭಿವೃದ್ಧಿಪಡಿಸುವಂತೆ ಹಾಗೂ ಎತ್ತರಿಸಿದ ಪಾದಚಾರಿ ಮಾರ್ಗ ಮಾಡಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನೀಡಿದ್ದಾರೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೀನಮೇಷ ಏಣಿಸುತ್ತಿದ್ದಾರೆ. ಮಲ್ಲೇಶ್ವರದ ರೆಸಿಡೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್‌. ಗೋಪಾಲ್‌ರಾವ್‌ ಅವರು ಈ ಭಾಗದಲ್ಲಿ ಬಸ್‌ ಸೇವೆ ನೀಡುವಂತೆ 2015ರಲ್ಲೇ “ಎಲ್ಲಾದರು  ಹತ್ತಿ, ಎಲ್ಲಾದರೂ ಇಳಿಯರಿ’ ಎನ್ನುವ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಬಿಎಂಟಿಸಿಯ ಅಧಿಕಾರಿಗಳಿಗೆ ನೀಡಿದ್ದರು.

Advertisement

“ಈಭಾಗದಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳೂ ಇದ್ದಾರೆ. ಆದರೆ, ಸಮೂಹ ಸಾರಿಗೆಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಮಲ್ಲೇಶ್ವರದ ಸುತ್ತಮುತ್ತಲಿ ಆಯ್ದ ಪ್ರದೇಶಗಳಲ್ಲಿ “ಎಲ್ಲಾದರು ಹತ್ತಿ, ಎಲ್ಲಾದರೂ ಇಳಿಯರಿ’ ಎನ್ನುವ ಪರಿಕಲ್ಪನೆಯಡಿ ಬಸ್‌ ಸೇವೆ ನೀಡುವಂತೆ ಬಿಎಂಟಿಸಿಗೆ ಮನವಿ ಮಾಡಲಾಗಿತ್ತು. ಸಲಹೆಗೆ ಸಂಬಂಧಿಸಿದಂತೆ ಬಿಎಂಟಿಸಿ ಪ್ರಾಯೋಗಿಕ ಸರ್ವೇಯನ್ನೂ ಮಾಡಿತ್ತು. ಇದಕ್ಕೆ ಇಲ್ಲಿನ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದರು ಸಹ. ಆದರೆ, ಸರ್ವೇಯಾದ ನಂತರ ಬಸ್‌ ಸೇವೆ ಪ್ರಾರಂಭವಾಗಲಿಲ್ಲ’ಎನ್ನುತ್ತಾರೆ ರೆಸಿಡೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್‌. ಗೋಪಾಲ್‌ರಾವ್‌.

ಮಲ್ಲೇಶ್ವರದ ವಿವಿಧೆಡೆ ಬಸ್‌ಸೇವೆ ನೀಡುವ ಪ್ರಸ್ತಾವನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಭಾಗದಲ್ಲಿ ಬಸ್‌ ಸೇವೆಯ ಅಗತ್ಯತೆ ಇರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯವಿದ್ದರೆ ಬಸ್‌ ಸೇವೆ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ.  -ರಾಜೇಶ್‌, ಬಿಎಂಟಿಸಿ ಮುಖ್ಯಸಂಚಾರ ವ್ಯವಸ್ಥಾಪಕ

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next