Advertisement

ವಿಪಕ್ಷ ಅವಿಶ್ವಾಸಕ್ಕೆ ಸೋಲಿನ ಅಪ್ಪುಗೆ

06:00 AM Jul 21, 2018 | Team Udayavani |

ಹೊಸದಿಲ್ಲಿ: ಟಿಡಿಪಿ, ಕಾಂಗ್ರೆಸ್‌, ಎನ್‌ಸಿಪಿ ನೇತೃತ್ವ ದಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಗೆ ಲೋಕಸಭೆಯಲ್ಲಿ ಸೋಲಾಗಿದೆ. ಅವಿಶ್ವಾಸದ ವಿರುದ್ಧ 325 ಮತ ಬಿದ್ದ ಹಿನ್ನೆಲೆಯಲ್ಲಿ ಗೊತ್ತುವಳಿ ತಿರಸ್ಕೃತವಾಗಿದೆ. ಅವಿಶ್ವಾಸ ಗೊತ್ತುವಳಿ ಪರ 126 ಮತ ಬಿದ್ದಿವೆ. ಸದನದಲ್ಲಿ ಒಟ್ಟು 451 ಸದಸ್ಯರಿದ್ದರು. ಶಿವಸೇನೆ ಇಡೀ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಿಂದ ದೂರ ಸರಿದರೆ, ಬಿಜೆಡಿ ಸದನ ಆರಂಭ ವಾಗುತ್ತಲೇ ಸಭಾತ್ಯಾಗ ನಡೆಸಿತು. ಎಐಎಡಿಎಂಕೆ ಸರಕಾರದ ಪರ ಮತ ಹಾಕಿತು. 12 ತಾಸು ಚರ್ಚೆಗೆ  ಉತ್ತರಿಸಿದ ಪ್ರಧಾನಿ ಮೋದಿ ತಮ್ಮ ವ್ಯಂಗ್ಯ- ಆಕ್ರೋಶಭರಿತ ಮಾತುಗಳಿಂದ ವಿಪಕ್ಷಗಳನ್ನು ಚುಚ್ಚಿದರು.

Advertisement

ವಿಪಕ್ಷಕ್ಕೆ ಅವಿಶ್ವಾಸದ ಇತಿಹಾಸವೇ ಇದೆ. ಸ್ವತ್ಛ ಭಾರತ, ಸುಪ್ರೀಂ ಕೋರ್ಟ್‌, ವಿಶ್ವಬ್ಯಾಂಕ್‌, ಚುನಾವಣಾ ಆಯೋಗ, ಇವಿಎಂ… ಯಾವುದರ ಮೇಲೂ ಅವರಿಗೆ ವಿಶ್ವಾಸವಿಲ್ಲ. ತಮ್ಮ ಮೇಲೆಯೇ ವಿಶ್ವಾಸ ಇಲ್ಲದವರು ನಮ್ಮ ಮೇಲೆ ಹೇಗೆ ವಿಶ್ವಾಸ ಇರಿಸಬಲ್ಲರು ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾಲೆಳೆದದ್ದು ವಿಶೇಷವಾಗಿತ್ತು. ಅವಿಶ್ವಾಸ ಗೊತ್ತುವಳಿಯ ಫ‌ಲಿತಾಂಶ ನಿರ್ಧಾರವಾಗುವ ಮೊದಲೇ, ಪ್ರಧಾನಿ ಕುರ್ಚಿಯಲ್ಲಿ ಕೂರುವ ಆಸಕ್ತಿ ಇರುವ ವ್ಯಕ್ತಿ ನನ್ನ ಬಳಿ ಬಂದು ಏಳು ಎಂದರು. ನನ್ನನ್ನು ಕುರ್ಚಿಯಿಂದ ಕೆಳಗಿಳಿಸಲು ಅವರಿಗೆ ಭಾರೀ ಆಸಕ್ತಿ. ಅಷ್ಟೊಂದು ತರಾತುರಿ ಏಕೆ ರಾಹುಲ್‌ಜೀ ಎಂದು ಪ್ರಶ್ನಿಸಿದಾಗ ಸದನ ನಗೆಗಡಲಲ್ಲಿ ಮುಳುಗಿತು. ನಮಗೆ ನೂರು ಕೋಟಿ ಜನರ ಮೇಲೆ ವಿಶ್ವಾಸವಿದೆ. ಯಾರನ್ನೂ ತುಷ್ಟೀಕರಿಸದೆ ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ ಮಂತ್ರ ಪಠಿಸಿದ್ದೇವೆ. 

ನಾನು ಚೌಕೀದಾರನೂ ಹೌದು, ಭಾಗೀದಾರನೂ ಹೌದು. ಜನರ ದುಃಖವನ್ನು ಹಂಚಿಕೊಳ್ಳುವುದರಲ್ಲಿ ಭಾಗೀದಾರ, ಬಡವರ ದುಃಖದಲ್ಲಿ ಭಾಗೀದಾರ. ಆದರೆ ವ್ಯಾಪಾರಿಯಲ್ಲ. ನಿಮ್ಮಂತೆ ಅರಮನೆಯಲ್ಲಿ ಕುಳಿತಿಲ್ಲ ಎಂದೂ ಮೋದಿ ಹೇಳಿದರು. ತನ್ನನ್ನು ನೇರವಾಗಿ ನೋಡುತ್ತಿಲ್ಲ ಎಂಬ ರಾಹುಲ್‌ ಆರೋಪಕ್ಕೂ ಉತ್ತರಿಸಿದ ಮೋದಿ, ನಾನು ಬಡ ಕುಟುಂಬ ದಲ್ಲಿ ಹುಟ್ಟಿದವನು. ನಾನು ಕಾಮ್‌ಧಾರಿ, ಆದರೆ, ನೀವು ನಾಮ್‌ಧಾರಿ. ನಿಮ್ಮ ಕಣ್ಣುಗಳನ್ನು ಹೇಗೆ ನೋಡಲಿ ಎಂದು ಪ್ರಶ್ನಿಸಿದರು. ಅವಿಶ್ವಾಸ ನಿರ್ಣಯ ಎಂಬುದು ಕಾಂಗ್ರೆಸ್‌ ಸಂಸ್ಕೃತಿ. ಈ ಹಿಂದೆ ದೇವೇಗೌಡ, ಐ.ಕೆ. ಗುಜ್ರಾಲ್‌ ಸರಕಾರ ಬೀಳಿಸಿದ್ದೀರಿ. ಚಂದ್ರಶೇಖರ್‌ ಮತ್ತು ಚೌಧರಿ ಸಿಂಗ್‌ ಅವರಿಗೂ ನೀವು ಮಾಡಿದ್ದು ಇದೇ. ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಇಂಥದ್ದನ್ನೆಲ್ಲ ಮಾಡುತ್ತೀರಿ ಎಂದು ತಿವಿದರು.

ಜುಮ್ಲಾ ಸ್ಟ್ರೈಕ್‌ಗೆ ಆಕ್ಷೇಪ: ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಜುಮ್ಲಾ ಸ್ಟ್ರೈಕ್‌ ಎಂದು ಅವಮಾನಿಸಿದ್ದೀರಿ. ನನ್ನನ್ನು ತೆಗಳಿ, ಆದರೆ ಸೇನೆಯನ್ನು ಅವಮಾನಿಸಬೇಡಿ ಎಂದು ರಾಹುಲ್‌ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ತಮ್ಮ ಭಾಷಣದಲ್ಲಿ ಚಂದ್ರಬಾಬು ನಾಯ್ಡು ವಿರುದ್ಧವೂ ಮೋದಿ ಮಾತಿನ ಚಾಟಿ ಬೀಸಿದರು. 

ಮುಖ್ಯಾಂಶಗಳು
ಚಾತಕ ಪಕ್ಷಿಯ ಬಾಯಲ್ಲಿ ಮಳೆ ನೀರು ನೇರವಾಗಿ ಬೀಳದಿದ್ದರೆ, ಮೋಡವನ್ನು ದೂಷಿಸಿ ಏನು ಪ್ರಯೋಜನ?

Advertisement

ಶಿವ ಭಕ್ತಿಯ ಪಠಣ ನಡೆಯುತ್ತಿದೆ. ನಾನೂ ಶಿವಭಕ್ತ. ನಿಮಗೆ ಶಿವ 2024ರಲ್ಲಿ ವಿಶ್ವಾಸ ಮತಕ್ಕೆ ಇನ್ನಷ್ಟು ಶಕ್ತಿ ನೀಡಲಿ.

ಚೀನ ರಾಯಭಾರಿಯನ್ನು ಭೇಟಿ ಮಾಡಿದ್ದನ್ನು ಮೊದಲು ನಿರಾಕರಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ. ಬಳಿಕ ಒಪ್ಪಿಕೊಂಡರು.

ರಫೇಲ್‌ ವಿಷಯದಲ್ಲಿ ಸತ್ಯವನ್ನು ಯಾಕೆ ಮರೆಮಾಚಲಾಗುತ್ತಿದೆ? ದೇಶ ಸಂಬಂಧಿ ವಿಷಯದಲ್ಲಿ ಈ ರೀತಿ ಮಾತನಾಡುವುದು ಎಷ್ಟು ಸರಿ? ಎರಡೂ ದೇಶಗಳು ಇದನ್ನು ಖಂಡಿಸ ಬೇಕಾಯಿತು. ಯಾಕೆ ಇಂಥ ಕೆಲಸ ಮಾಡುತ್ತೀರಿ? ವಾಸ್ತವಾಂಶವಿಲ್ಲದೆ ಕೂಗಾಡುತ್ತೀರಿ. ನಿಮಗೆ ದೇವರು ಒಳ್ಳೆಯ ಬುದ್ಧಿ ನೀಡಲಿ. ಈ ಒಪ್ಪಂದ ಎರಡು ದೇಶಗಳ ಮಧ್ಯೆ ನಡೆದಿದೆ.

ದೇಶದ ಸೇನಾಧ್ಯಕ್ಷರ ಬಗ್ಗೆ ಹೀಗೆ ಮಾತನಾಡಬಹುದೇ? ನಿವೃತ್ತನಾಗುವ ಯೋಧನಿಗೆ ದೇಶಕ್ಕಾಗಿ ದುಡಿದ ಹೆಮ್ಮೆಯಿರುತ್ತದೆ. ಅದನ್ನು ನಾವು ಇಲ್ಲಿ ಕುಳಿತು ಊಹಿಸಲು ಅಸಾಧ್ಯ. ನಿಮ್ಮ ಎಲ್ಲ  ಬೈಗುಳ ತಿನ್ನಲಿಕ್ಕೆ ನಾನು ಸಿದ್ಧ. ಆದರೆ ಸೈನಿಕರನ್ನು ನಿಂದಿಸಬೇಡಿ. ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಅನುಮಾನಿಸಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next