Advertisement
ಜತೆಗೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಸ್ತಾವ ಸಲ್ಲಿಸಲು ಬುಧವಾರ ಚರ್ಚಿಸಿದ್ದ ಬಿಜೆಪಿಯು ಅಗತ್ಯಬಿದ್ದರೆ ಗುರುವಾರ ಇಲ್ಲವೇ ಪರಿಸ್ಥಿತಿ ಅವಲೋಕಿಸಿ ಸೂಕ್ತ ಸಂದರ್ಭದಲ್ಲಿ ಸ್ಪೀಕರ್ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸುವ ಆಯ್ಕೆಯನ್ನೂ ಇಟ್ಟುಕೊಂಡಿದೆ. ಆ ಮೂಲಕ ಸರ್ಕಾರ ರಚನೆಯ ಅವಕಾಶ ಯಾವ ರೀತಿಯಿಂದಲೂ ಕೈತಪ್ಪದಂತೆ ಎಚ್ಚರಿಕೆಯಿಂದ ಮುಂದುವರಿಯುವ ಕಾರ್ಯತಂತ್ರವನ್ನು ಕಮಲ ಪಾಳಯ ಹೆಣೆದಿದೆ.
Related Articles
Advertisement
ಇದೇ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತ ಯಾಚಿಸಬೇಕಿರುವ ಹಿನ್ನೆಲೆಯಲ್ಲಿ ಬಿಜೆಪಿಯು ತಾಳ್ಮೆಯಿಂದಲೇ ಕಲಾಪದಲ್ಲಿ ಪಾಲ್ಗೊಳ್ಳಲು ಚಿಂತಿಸಿದೆ. ಅತೃಪ್ತ ಶಾಸಕರು ಈವರೆಗೆ ತೋರಿದ ಧೋರಣೆಯನ್ನು ಇನ್ನು ಮುಂದೆ ಕೂಡ ಮುಂದುವರಿಸಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಲಾಪದಿಂದ ದೂರ ಉಳಿದರೆ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವುದು ಅಸಾಧ್ಯವಾಗಲಿದೆ.
ತಕ್ಷಣವೇ ಪ್ರಮಾಣ ವಚನ ಸ್ವೀಕಾರ: ಬಹುಮತ ಸಾಬೀತುಪಡಿಸಲಾಗದೆ ಮೈತ್ರಿ ಸರ್ಕಾರ ಪತನವಾದರೆ ಸ್ವಲ್ಪವೂ ತಡ ಮಾಡದೆ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೋರುವುದು, ಅವಕಾಶ ನೀಡಿದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಕಾಲಮಿತಿಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ಕೋರುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆಯಾಗಿದೆ.
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ: ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಸ್ಪೀಕರ್ ಕೂಡ ಆ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂಬುದು ಬಿಜೆಪಿ ವಾದ. ಹಾಗಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡುತ್ತಿದ್ದಂತೆ ಸ್ಪೀಕರ್ ಕೂಡ ರಾಜೀನಾಮೆ ನೀಡಬೇಕೆಂಬ ನಿರೀಕ್ಷೆಯಲ್ಲಿದೆ. ಬುಧವಾರವೇ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾಪಕ್ಕೆ ಬಿಜೆಪಿ ಚಿಂತಿಸಿದರೂ ಆ ನಿಟ್ಟಿನಲ್ಲಿ ಮುಂದುವರಿದಿಲ್ಲ
ಗುರುವಾರ ಇಲ್ಲವೇ ಮುಂದಿನ ದಿನಗಳಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಬಳಿಕ ಹಂಗಾಮಿ ಸ್ಪೀಕರ್ ಆಯ್ಕೆ ನಂತರವಷ್ಟೇ ಮುಂದಿನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು ಬಿಜೆಪಿಯ ಸದ್ಯದ ಕಾರ್ಯತಂತ್ರ. ಹಂಗಾಮಿ ಸ್ಪೀಕರ್ ನೇಮಕಗೊಂಡರೆ ಮುಂದಿನ ಪ್ರಕ್ರಿಯೆಗಳನ್ನು ಅವರು ಕೈಗೊಳ್ಳಲಿದ್ದು, ಸಹಜವಾಗಿಯೇ ಅದು ಬಿಜೆಪಿಗೆ ಪೂರಕವಾಗಿಯೂ ನಡೆದುಕೊಂಡರೆ ಅಚ್ಚರಿ ಇಲ್ಲ!
ಅತೃಪ್ತರ ಪರಿಸ್ಥಿತಿ ಆಧರಿಸಿ ಮುಂದಿನ ಕ್ರಮ: ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಅದನ್ನು ಸ್ಪೀಕರ್ ಅಂಗೀಕರಿಸುವ, ತಿರಸ್ಕರಿಸುವ ಇಲ್ಲವೇ ಅನರ್ಹತೆಗೊಳಿಸುವಂತೆ ಕೈಗೊಳ್ಳುವ ನಿರ್ಧಾರ ಆಧರಿಸಿ ಮುಂದಿನ ಹೆಜ್ಜೆ ಇಡಲು ಬಿಜೆಪಿ ತೀರ್ಮಾನಿಸಿದೆ. ರಾಜೀನಾಮೆ ಅಂಗೀಕಾರವಾದರೆ ಯಾವುದೇ ಸಮಸ್ಯೆ ಇಲ್ಲದೇ ಅತೃಪ್ತರ ನಿರೀಕ್ಷೆಗಳಿಗೆ ಬಿಜೆಪಿ ಮುಕ್ತವಾಗಿ ಸ್ಪಂದಿಸಬಹುದು. ಒಂದೊಮ್ಮೆ ರಾಜೀನಾಮೆ ತಿರಸ್ಕಾರವಾದರೆ ಇಲ್ಲವೇ ಅನರ್ಹಗೊಂಡರೆ ಆಗ ಯಾವ ರೀತಿಯಲ್ಲಿ ಸ್ಪಂದಿಸಿ ಮುಂದುವರಿಯ ಬೇಕು ಎಂಬ ಬಗ್ಗೆ ಹಿರಿಯ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಮಧ್ಯಂತರ ತೀರ್ಪಿನ ಪ್ರಕಾರ ಅತೃಪ್ತ ಶಾಸಕರಿಗೆ “ವಿಪ್’ ಅನ್ವಯವಾಗುವುದಿಲ್ಲ. ಹಾಗಾಗಿ ಮೈತ್ರಿ ಸರ್ಕಾರ ಏನೇ ಕಸರತ್ತು ನಡೆಸಿದರೂ ಬಹುಮತ ಸಾಬೀತುಪಡಿಸುವುದು ಕಷ್ಟ. ಈ ನಡುವೆ ಅಗತ್ಯಬಿದ್ದರೆ ಸ್ಪೀಕರ್ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಯತ್ನ ನಡೆಸುವ ಅವಕಾಶವಿದ್ದು, ಹಂಗಾಮಿ ಸ್ಪೀಕರ್ ನೇಮಕಕ್ಕೆ ಒತ್ತಾಯಿಸಲಾಗುವುದು. -ಡಾ.ವಾಮನ್ ಆಚಾರ್ಯ, ರಾಜ್ಯ ಬಿಜೆಪಿ ವಕ್ತಾರ * ಎಂ. ಕೀರ್ತಿಪ್ರಸಾದ್