ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಘಟನೆ ಗುರುವಾರ ಜರುಗಿದೆ.
ಸಮೀಪದ ಕುಂಟೋಜಿ ಗ್ರಾಪಂ ಅಧ್ಯಕ್ಷೆ ರೇಣುಕಾ ಕುಷ್ಟಗಿ ಅವರ ವಿರುದ್ಧ 9 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಜನ ಸದಸ್ಯರ ಸಂಖ್ಯಾ ಬಲವಿದ್ದು, ಬಹುತಮಕ್ಕೆ ಬೇಕಾದಷ್ಟು ಸಂಖ್ಯಾಬಲ ಇಲ್ಲದ ಕಾರಣ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಪರ ನಿರ್ಣಯಿಸಿದರು.
ಇದಕ್ಕೂ ಮೊದಲ ಕಳೆದ ಎರಡು ವಾರಗಳ ಹಿಂದೆ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಕುಂಟೋಜಿ ಗ್ರಾಪಂ ಅಧ್ಯಕ್ಷರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕೆಂದು 9 ಜನ ಸದಸ್ಯರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ನಡೆಯಿತು.
ಈ ವೇಳೆ ಜಿಲ್ಲಾ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಕುಂಟೋಜಿ ಗ್ರಾಪಂ ಅಧ್ಯಕ್ಷರ ವಿರುದ್ಧ 9 ಜನ ಸದಸ್ಯರು ಅವಿಶ್ವಾಸ ಮಂಡಿಸಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ಯ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಕೋರಂ ಇದ್ದುದರಿಂದ ಅವಿಶ್ವಾಸ ಮಂಡನೆಯಾಗಿದೆ. ಮೂರನೇ ಎರಡು ಭಾಗಕ್ಕಿಂತಲೂ ಕಡಿಮೆ ಇಲ್ಲದ ಸದಸ್ಯರ ಬೆಂಬಲದೊಂದಿಗೆ ಅಂಗಿಕೃತವಾಗಿರುವುದರಿಂದ ಅಧ್ಯಕ್ಷ ಸ್ಥಾನ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಣ ಪುರಸಭೆ ಸದಸ್ಯ ಮಿಥುನ ಪಾಟೀಲ, ನಿರೀಕ್ಷೆಯಂತೆ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಮಾಜಿ ಶಾಸಕ ಜಿ.ಎಸ್. ಪಾಟೀಲರ ಸೂಚನೆಯಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಲಿದ್ದು, ಎಲ್ಲಾ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ ಕುಂಟೋಜಿ ಪಂಚಾಯತಿಯಲ್ಲಿಕಾಂಗ್ರೆಸ್ ಬೆಂಬಲಿತರ ಆಡಳಿತ ರಚನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿರಸ್ತೇದಾರ್ ವೀರಣ್ಣ ಅಡಗತ್ತಿ, ಗ್ರಾಪಂ ಪಿಡಿಒ ಎಸ್.ಎಸ್. ವ್ಯಾಪಾರಿ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಬಸವರಾಜ ಬಂಕದ, ಎ.ಸಿ. ಪಾಟೀಲ, ಶರಣಪ್ಪ ಬೆಟಗೇರಿ, ನೇಮಪ್ಪ ರಾಠೊಡ, ಮುರ್ತುಜಾ ಡಾಲಾಯತ್, ಉಮೇಶ ರಾಠೊಡ, ಕಳಕನಗೌಡ ಡೊಳ್ಳಿನ, ಅನೀಲ ಕರ್ಣೆ ಸೇರಿದಂತೆ ಇತರರಿದ್ದರು.